ADVERTISEMENT

ದರ್ಶನ್‌ ಇದೆಲ್ಲಾ ಒಳ್ಳೆಯದಲ್ಲ: ಸಂದೇಶ್‌

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 11:28 IST
Last Updated 17 ಜುಲೈ 2021, 11:28 IST
ದರ್ಶನ್‌– ಉಮಾಪತಿ
ದರ್ಶನ್‌– ಉಮಾಪತಿ   

‘ದರ್ಶನ್‌ ಇದೆಲ್ಲಾ ಒಳ್ಳೆಯದಲ್ಲ ಎಂದು ಹೇಳಿದ್ದೆ’.

– ಇದು ಮೈಸೂರಿನ ಹೋಟೆಲ್‌ ಮಾಲೀಕ ಸಂದೇಶ್‌ ಅವರು ವ್ಯಕ್ತಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಾರಾಂಶ.

ಮೈಸೂರಿನ ಹೋಟೆಲ್‌ನಲ್ಲಿ ದರ್ಶನ್‌ ಅವರು ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ಮಾಪಕ, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಮಾತುಕತೆ ನಡೆದಿದೆ.

ADVERTISEMENT

‘ಅವನು (ಕಾರ್ಮಿಕ) ಅಣ್ಣಾ ಅಣ್ಣಾ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ. ಹಾಗಿದ್ದರೂ ಅವನು (ದರ್ಶನ್‌?) ಹೊಡೆಯುತ್ತಿದ್ದ. ನಾನು ಅವನ ವರ್ತನೆ ಬಗ್ಗೆ ಆಕ್ಷೇಪಿಸಿದೆ. ಇದು ಸರಿಯಲ್ಲ ತಲೆ ಕತ್ತರಿ ಬಿಡ್ತೀನಿ ಹಂಗ್‌ ಮಾಡ್ತೀನಿ ಹಿಂಗ್‌ ಮಾಡ್ತೀನಿ ಇವೆಲ್ಲಾ ಏನು? ಇದು ಸರಿಯಲ್ಲ ನೀನು ಸಿಕ್ಕಿ ಹಾಕಿಕೊಳ್ಳುತ್ತಿ ಎಂದಿದ್ದೆ’ ಎಂದಿದ್ದಾರೆ. ‘ಕಾರ್ಮಿಕನಿಗೆ ಹೊಡೆಯುವಾಗ ಹೋಟೆಲ್‌ ಮಾಲೀಕರಾಗಿ ಹೀಗೆ ನೋಡ್ತೀರಲ್ಲಾ ಹರ್ಷಾ ನಾಚಿಕೆ ಆಗಲ್ವಾ ನಿಮಗೆ? ಎಂದು ಪ್ರಶ್ನಿಸಿದ್ದೆ’ ಎಂದರು.

‘ಹರ್ಷನ ಕ್ಲಬ್‌ನ ಒಂದು ಕೊಠಡಿಯಲ್ಲಿ ದರ್ಶನ್‌– ಪವಿತ್ರಾಗೌಡ ಇರುತ್ತಿದ್ದರು. ಇನ್ನೊಂದಿಷ್ಟು ಜನ ಇರುತ್ತಿದ್ದರು. ಇವರು ಯಾರೂ ಒಳ್ಳೆಯವರಲ್ಲ ಎಂದು ಹೇಳಿದ್ದೆ’ ಎಂದರು.

‘ಆ ರಾಕೇಶ್‌ ಪಾಪಣ್ಣ ಅಂತ ಇದ್ದಾನಲ್ಲಾ, ಊಟ ಕೊಡೋದು ಅವನ ಕೆಲಸ. ಮೈಸೂರಿನಲ್ಲಿ ಅವನಿಗೆ ಒಂದು ರೂಪಾಯಿ ಬೆಲೆ ಇಲ್ಲ. ಹರ್ಷ ಊರು ತುಂಬಾ ಸಾಲ ಮಾಡ್ಕೊಂಡಿದ್ದಾನೆ. ಕ್ಲಬ್‌ ಅವರಿವರ ಸದಸ್ಯತ್ವ ತೆಗೆದುಕೊಂಡು ಮಾಡಿರೋದು. ಅವನ ಕ್ಲಬ್‌ನಲ್ಲಿ ಕೂತ್ಕೊಂಡು ಅವನೇ ಬಂದವರಿಗೆ ಹೊಡೆಯುತ್ತಿದ್ದ’ ಎಂದಿದ್ದಾರೆ.

‘ಪೊಲೀಸರ ವರದಿ ಬೇರೆಯೇ ಇದೆ. ಪೊಲೀಸರು ಏನು ಹೇಳಿದರೆಂದರೆ ಎಲ್ಲರೂ ಸೆಲೆಬ್ರಿಟಿಗಳೇ. ನಾವು ವಿಚಾರಣೆ ಆರಂಭಿಸಿದೆವೆಂದರೆ ಎಲ್ಲರೂ ನೀವು, ನಿಮ್ಮ ಸ್ನೇಹಿತರು(ದರ್ಶನ್‌) ಬರಬೇಕಾಗುತ್ತದೆ ಎಂದು ಹೇಳಿದ್ದರು’ ಎಂದರು.

ವಿಷಯ ದೊಡ್ಡದು ಮಾಡಬೇಡಿ: ಉಮಾಪತಿ
‘ನಾನು– ದರ್ಶನ್‌ ಮಧ್ಯೆ ಏನೇನೂ ಭಿನ್ನಾಭಿಪ್ರಾಯ ಇಲ್ಲ. ಏನೇ ವಿವಾದ ಇದ್ದರೂ ನಾಲ್ಕು ಗೋಡೆಯ ಒಳಗೆ ಬಗೆಹರಿಸಿಕೊಳ್ಳುತ್ತೇವೆ. ಸುಮ್ಮನೆ ಪ್ರಚೋದಿಸಬೇಡಿ ಎಂದು ನಿರ್ಮಾಪಕ ಉಮಾಪತಿ ಮಾಧ್ಯಮಗಳಿಗೆ ಹೇಳಿದರು. ನಾನು ತಪ್ಪು ಮಾಡಿಲ್ಲವೆಂದಾದರೆ ನಾನೇಕೆ ಹೆದರಬೇಕು. ಕಾನೂನು ಇದೆ ಎಲ್ಲವನ್ನೂಅದು ನೋಡಿಕೊಳ್ಳುತ್ತದೆ’ ಎಂದು ಹೇಳಿದರು.

‘ಇಲ್ಲಿರುವುದು ಅರುಣಾ ಕುಮಾರಿ ವಿಚಾರ (ನಕಲಿ ಬ್ಯಾಂಕ್‌ ಮ್ಯಾನೇಜರ್‌ ಆಗಿ ಬಂದವರು) ಅದಕ್ಕೆ ನಾನು ಉತ್ತರಿಸಿದ್ದೇನೆ. ಉಳಿದ ಗಲಾಟೆಗಳಿಗೂ ನನಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ ನನ್ನ ಕಾರನ್ನೇ ಕ್ಲಬ್‌ನ ಒಳಗೆ ಬಿಡಲು ಹಿಂದೆ ಮುಂದೆ ನೋಡಿದರು. ಈಗ ಅರುಣಾ ಕುಮಾರಿ ಅವರನ್ನು ಕ್ಲಬ್‌ನ ಒಳಗೆ ಹೇಗೆ ಬಿಟ್ಟಿರಿ ಎಂದೂ ಕೇಳಿದ್ದೇನೆ’ ಎಂದರು.

ಆಸ್ತಿ ವಿಚಾರ ಸಂಬಂಧಿಸಿ ಆ ಜಮೀನು ದೊಡ್ಡಮನೆ (ಡಾ.ರಾಜ್‌ಕುಮಾರ್‌) ಕುಟುಂಬಕ್ಕೆ ಸೇರಿದ್ದು. ಅದನ್ನು ದರ್ಶನ್‌ ಕೇಳಿದ್ದು ನಿಜ. ಆದರೆ, ಈ ವ್ಯವಹಾರ ಮುಂದೆ ದೊಡ್ಡದಾಗಿ ಎಲ್ಲೆಲ್ಲಿಗೋ ಹೋಗುತ್ತದೆ ಅನ್ನುವ ಕಾರಣಕ್ಕೆ ಅದನ್ನು ಕೊಡುವುದಿಲ್ಲ ಎಂದು ಹೇಳಿದ್ದೆ. ಅದು ಅಲ್ಲಿಗೇ ಮುಗಿದ ವಿಚಾರ. ಇದನ್ನು ಮುಂದುವರಿಸುವುದು ಬೇಡ. ದರ್ಶನ್‌ ಅವರ ಜೊತೆ ವ್ಯಾವಹಾರಿಕ ಸಂಬಂಧ ಮುಗಿದಿದೆ. ಆದರೆ ಸಹೋದರ ಸಂಬಂಧ ಇನ್ನೂ ಮುಂದುವರಿದಿದೆ ಎಂದರು.

ಘಟನೆಯಲ್ಲಿ ದರ್ಶನ್‌ ಟಾರ್ಗೆಟ್‌?
ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದರ್ಶನ್‌ ಅವರನ್ನು ಇಲ್ಲಿ ಟಾರ್ಗೆಟ್‌ ಮಾಡಲಾಗುತ್ತಿದೆ’ ಎಂದು ಸೋಷಿಯಲ್‌ ಕ್ಲಬ್‌ನ ಮಾಲೀಕ ಹರ್ಷ ಮೆಲಂಟಾ ಹೇಳಿದ್ದಾರೆ.

‘ಘಟನೆ ನಡೆದಿದೆ ಎನ್ನಲಾದ ದಿನ ನಾವು ನಮ್ಮ ಕೆಲವು ಕುಟುಂಬ ಸ್ನೇಹಿತರಷ್ಟೇ ಇದ್ದರು. ಪವಿತ್ರಾಗೌಡ ಕೂಡಾ ಇದ್ದರು. ಪ್ರಕರಣದಲ್ಲಿ ಪವಿತ್ರಾ ಅವರನ್ನು ಏಕೆ ಎಳೆದು ತಂದಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಹರ್ಷ ಅವರು ಪೊಲೀಸ್‌ ವ್ಯವಸ್ಥೆಯನ್ನೇ ನಿಯಂತ್ರಿಸುತ್ತಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಗೌಡ ಹೇಳಿಕೆಗೆ ಕಿಡಿಕಾರಿರುವ ಹರ್ಷ, ‘ಪೊಲೀಸ್‌ ವ್ಯವಸ್ಥೆಯನ್ನು ನಿಯಂತ್ರಿಸುವಷ್ಟು ದೊಡ್ಡವನಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ. ಪೊಲೀಸರು ನನ್ನ ಹೋಟೆಲ್‌ನಲ್ಲಿ ಏನಾದರೂ ಕಾರ್ಯಕ್ರಮ ಮಾಡಿದರೆ ದುಡ್ಡುಕೊಟ್ಟೇ ಆಯೋಜಿಸುತ್ತಾರೆ. ಅಥವಾ ದರ್ಶನ್‌ ಅವರ ಬಗ್ಗೆ ಮಾತನಾಡುವಷ್ಟೂ ದೊಡ್ಡವನಲ್ಲ. ಉಮಾಪತಿ ಅವರು ಮಾತನಾಡಿದ ರೀತಿಗೆ ನಾವು ಪ್ರತಿಕ್ರಿಯಿಸಬಹುದು. ಆದರೆ, ಬೇರೆಯವರ ತಂದೆತಾಯಿಗೆ ಅವಮಾನ ಮಾಡುವುದನ್ನು ನನ್ನ ಪೋಷಕರು ಕಲಿಸಿಲ್ಲ’ ಎಂದಿದ್ದಾರೆ.

ಸಂದೇಶ್‌ ಮತ್ತು ಇಂದ್ರಜಿತ್‌ ನಡುವಿನ ಸಂಭಾಷಣೆ ಸಂಬಂಧಿಸಿದಂತೆ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಇಂದ್ರಜಿತ್‌ ಲಂಕೇಶ್‌ ಹೇಳಿದ್ದಾರೆ.

ಪೊಲೀಸರು ಸ್ವಯಂ ಪ್ರಕರಣ ದಾಖಲಿಸಲಿ: ಇಂದ್ರಜಿತ್‌
ಹೋಟೆಲ್‌ ಕಾರ್ಮಿಕನ ಮೇಲೆ ಹಲ್ಲೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ದೂರು ದಾಖಲಿಸಬೇಕು. ಇಷ್ಟೊಂದು ದಾಖಲೆಗಳು, ಸಾಕ್ಷ್ಯ ಇರುವಾಗ ಪೊಲೀಸರು ಕ್ರಮ ಕೈಗೊಳ್ಳಲೇಬೇಕು. ಘಟನೆ ಆದ ಬಳಿಕ ದರ್ಶನ್ ಅವರು ಪ್ರಿನ್ಸ್‌ ಹೋಟೆಲ್‌ಗೆ ಹೋಗಿದ್ದಾರೆ. ಇಲ್ಲಿ ಸಾಕ್ಷ್ಯನಾಶವೂ ಆಗಿರಬಹುದು ಎಂದು ಅವರು ಸಂದೇಹ ವ್ಯಕ್ತಪಡಿಸಿದರು.

₹ 25 ಕೋಟಿ ಮೊತ್ತದ ಜಮೀನು ವ್ಯವಹಾರ ಸಂಬಂಧಿಸಿ ಬೇರೆಯೇ ಬೆಳವಣಿಗೆ ಇದೆ. ಅದೂ ತನಿಖೆ ಆಗಬೇಕು. ನಾನು ಹೇಳಬೇಕಾದದ್ದನ್ನು ಹೇಳಿದ್ದೇನೆ. ಮುಂದೆ ನೀವು ಪೊಲೀಸರನ್ನು ಕೇಳಬೇಕು. ಪೊಲೀಸರು ಕಾರ್ಯಪ್ರವೃತ್ತರಾಗಬೇಕು ಎಂದು ಇಂದ್ರಜಿತ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.