‘ಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು ಸಂಜನಾ ಆನಂದ್. ಸಾಫ್ಟ್‌ವೇರ್ ಕಂಪನಿಯಲ್ಲಿ ಕೈತುಂಬಾ ಸಂಬಳ ಎಣಿಸುತ್ತಿದ್ದ ಅವರು ಬಣ್ಣದಲೋಕದ ಸೆಳೆತಕ್ಕೆ ಸಿಲುಕಿದ್ದು ತೀರಾ ಆಕಸ್ಮಿಕ. ಸ್ನೇಹಿತರು ನಿರ್ಮಿಸಿದ್ದ ಕಿರುಚಿತ್ರದಲ್ಲಿ ನಟಿಸಿದ್ದೇ ಅವರು ಚಿತ್ರರಂಗ ಪ್ರವೇಶಿಸಲು ವೇದಿಕೆಯಾಯಿತು.
ಪ್ರಸ್ತುತ ಅವರ ಬಣ್ಣದ ಬುಟ್ಟಿಯಲ್ಲಿ ಹಲವು ಚಿತ್ರಗಳಿವೆ. ನಟ ದುನಿಯಾ ವಿಜಯ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ‘ಸಲಗ’ ಚಿತ್ರಕ್ಕೆ ಅವರೇ ನಾಯಕಿ. ಈಗಾಗಲೇ, ಇದರ ಚಿತ್ರೀಕರಣವೂ ಪೂರ್ಣಗೊಂಡಿದೆ. ಚಿತ್ರದಲ್ಲಿ ಅವರದು ಬೋಲ್ಡ್ ಹುಡುಗಿಯ ಪಾತ್ರವಂತೆ. ‘ಬೆಂಗಳೂರಿನ ಹುಡುಗಿಯರು ಹೇಗಿರುತ್ತಾರೆಯೋ ಹಾಗೆಯೇ ನನ್ನ ಪಾತ್ರವಿದೆ. ಆಕೆ ತನ್ನ ಪ್ರಿಯಕರನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಈ ಪಾತ್ರಕ್ಕೆ ನಾನು ವಿಶೇಷ ತಯಾರಿ ಮಾಡಿಕೊಳ್ಳಲಿಲ್ಲ. ಸ್ಕ್ರಿಪ್ಟ್‌ಗೆ ತಕ್ಕಂತೆ ನಟಿಸಿದ್ದೇನೆ’ ಎನ್ನುತ್ತಾರೆ.
ವಿಜಯ್ ಅವರ ಡೈರಕ್ಷನ್ ಶೈಲಿ ಅವರಿಗೆ ಖುಷಿ ಕೊಟ್ಟಿದೆ. ಅವರೊಟ್ಟಿಗೆ ಮೊದಲ ಬಾರಿಗೆ ನಟಿಸುತ್ತಿದ್ದೇನೆ ಎಂಬ ಒತ್ತಡ ಅವರಿಗೆ ಕಾಡಲಿಲ್ಲವಂತೆ. ‘ಸಲಗ ಚಿತ್ರತಂಡದ ಸಪೋರ್ಟ್ ಅನ್ನು ಮರೆಯಲು ಸಾಧ್ಯವಿಲ್ಲ. ಸೆಟ್‌ನಲ್ಲಿ ವಿಜಯ್ ಅವರು ಶಾಂತಚಿತ್ತದಿಂದ ಇರುತ್ತಿದ್ದರು. ಯಾವತ್ತೂ ಒತ್ತಡಕ್ಕೆ ಒಳಗಾಗಿದ್ದನ್ನು ನಾನು ನೋಡಲಿಲ್ಲ. ತುಂಬಾ ಟೆನ್ಷನ್ ತೆಗೆದುಕೊಂಡು ಸಿನಿಮಾ ಮಾಡುವ ತಂಡದೊಟ್ಟಿಗೆಯೂ ಕೆಲಸ ಮಾಡಿರುವೆ. ಹಾಗೆಂದು ಬೇರೊಬ್ಬರು ಮಾಡುವುದು ತಪ್ಪೆಂದು ಹೇಳುತ್ತಿಲ್ಲ. ಅದು ಅವರ ಶೈಲಿ. ವಿಜಯ್ ಶೈಲಿ ತುಂಬಾ ಭಿನ್ನವಾಗಿತ್ತು. ಪೂರ್ವ ಯೋಜನೆ ರೂಪಿಸಿಕೊಂಡೇ ಶೂಟಿಂಗ್ ಪೂರ್ಣಗೊಳಿಸಿದ್ದಾರೆ’ ಎಂದು ಚಿತ್ರೀಕರಣದ ಅನುಭವ ಬಿಚ್ಚಿಟ್ಟರು.
ಸಂಜನಾ ಏಕಾಏಕಿ ಸಿನಿಮಾ ಒಪ್ಪಿಕೊಳ್ಳುವುದಿಲ್ಲವಂತೆ. ಕಥೆಯಿಂದ ಹಿಡಿದು ಚಿತ್ರತಂಡವೂ ಸಿನಿಮಾದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂಬ ಅರಿವು ಅವರಿಗಿದೆ. ‘ದೊಡ್ಡ ತಂಡ ಎಂದಾಕ್ಷಣ ಸಿನಿಮಾ ಒಪ್ಪಿಕೊಳ್ಳುವುದಿಲ್ಲ. ನಾನು ಮಾಡುವ ಪಾತ್ರ ತೆರೆಯ ಮೇಲೆ ಹೇಗೆ ಬರುತ್ತದೆ; ಅದಕ್ಕೆ ಎಷ್ಟು ಬೆಲೆ ಇದೆ ಎನ್ನುವುದನ್ನೂ ಪರಿಗಣಿಸುತ್ತೇನೆ. ಸಿನಿಮಾದಲ್ಲಿ ಬಂದು ಹೋಗುವ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ವಿವರಿಸುತ್ತಾರೆ.
‘ನನ್ನನ್ನು ನಂಬಿ ನಿರ್ದೇಶಕರು ಮತ್ತು ನಿರ್ಮಾಪಕರು ಪಾತ್ರ ನೀಡಿರುತ್ತಾರೆ. ಅದಕ್ಕೆ ನ್ಯಾಯ ಒದಗಿಸುವುದು ನನ್ನ ಮೊದಲ ಕರ್ತವ್ಯ. ಅದಷ್ಟೇ ನನ್ನ ತಲೆಯಲ್ಲಿದೆ. ನಾನೀಗ ಇಂಡಸ್ಟ್ರಿಯಲ್ಲಿ ಅಂಬೆಗಾಲಿಡುತ್ತಿದ್ದೇನೆ. ಸಿಗುವ ಪಾತ್ರಗಳಿಗೆ ಜೀವ ತುಂಬುವುದಷ್ಟೇ ನನ್ನ ಮುಂದಿರುವ ಏಕೈಕ ಗುರಿ’ ಎನ್ನುತ್ತಾರೆ ಸಂಜನಾ.
ಕೃಷ್ಣ ಅಜೇಯ್ ರಾವ್ ನಾಯಕರಾಗಿರುವ‘ಶೋಕಿವಾಲ’ ಚಿತ್ರದಲ್ಲಿ ಮಂಡ್ಯದ ಹುಡುಗಿ ಪಾತ್ರಕ್ಕೆ ಅವರು ಬಣ್ಣಹಚ್ಚಿದ್ದಾರೆ. ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕನ್ನಡದಲ್ಲಿಯೇ ಅವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಹಾಗಾಗಿ, ಇಲ್ಲಿಯೇ ಗಟ್ಟಿಯಾಗಿ ನೆಲೆಯೂರುವುದೇ ಅವರ ಆಸೆ.
ಎ.ಪಿ. ಅರ್ಜುನ್ ನಿರ್ದೇಶನದ ‘ಅದ್ದೂರಿ ಲವರ್’ ಸಿನಿಮಾಕ್ಕೂ ಸಂಜನಾ ಅವರೇ ಹೀರೊಯಿನ್. ‘ಕ್ಷತ್ರಿಯ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದರ ಮುಕ್ಕಾಲು ಭಾಗದಷ್ಟು ಶೂಟಿಂಗ್ ಪೂರ್ಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.