ADVERTISEMENT

ಸಂಜನಾ ವಿತ್‌ ಸಲಗ

ಕೆ.ಎಚ್.ಓಬಳೇಶ್
Published 6 ಜೂನ್ 2019, 19:30 IST
Last Updated 6 ಜೂನ್ 2019, 19:30 IST
ಸಂಜನಾ ಆನಂದ್
ಸಂಜನಾ ಆನಂದ್   

‘ನಾನು ನಟನಾ ಕ್ಷೇತ್ರಕ್ಕೆ ಬಂದಿದ್ದು ತೀರಾ ಆಕಸ್ಮಿಕ. ಈಗ ಅವಕಾಶಗಳ ಹೆಬ್ಬಾಗಿಲು ತೆರೆದಿರುವುದಕ್ಕೆ ಖುಷಿಯಾಗಿದೆ’ ಹೀಗೆ ಒಂದೇ ಸಾಲಿನಲ್ಲಿ ತಾವು ಬಣ್ಣದಲೋಕ ಪ್ರವೇಶಿಸಿದ ಕಥೆ ಹೇಳಿದರು ನಟಿ ಸಂಜನಾ ಆನಂದ್‌.

ಸಂಜನಾ ಓದಿದ್ದು ಎಂಜಿನಿಯರಿಂಗ್. ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಒಮ್ಮೆ ಅವರ ಸ್ನೇಹಿತರು ಕಿರುಚಿತ್ರ ನಿರ್ಮಿಸಿದರಂತೆ. ಅದರಲ್ಲಿ ಸಂಜನಾ ನಟಿಸಿದ್ದರಂತೆ. ಇದು ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿತು. ಅದನ್ನು ನೋಡಿದ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರತಂಡ ಆಡಿಷನ್‌ಗೆ ಬರುವಂತೆ ಕರೆನೀಡಿತಂತೆ.

‘ನಾನು ಯಾವುದೇ ನಟನಾ ಶಾಲೆಗೆ ಹೋಗಿ ಕಲಿತಿಲ್ಲ. ಮೊದಲ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದಾಗ ನನ್ನ ಮನದಲ್ಲಿ ಕ್ಯಾಮೆರಾ ಎದುರಿಸುವ ಬಗ್ಗೆ ಅಳುಕಿತ್ತು. ಆಗ ಎರಡು ವಾರಗಳ ಕಾಲ ನಟನೆಯ ಕಾರ್ಯಾಗಾರ ನಡೆಯಿತು.‌ ನೃತ್ಯವೆಂದರೆ ನನಗೆ ಅಚ್ಚುಮೆಚ್ಚು. ಇದೇ ನನಗೆ ನಟಿಸಲು ವರವಾಯಿತು‘ ಎಂದು ಚಿತ್ರರಂಗ ಪ್ರವೇಶಿಸಿದ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ.

ADVERTISEMENT

ಸಂಜನಾ ಅವರ ಪ್ರತಿಭೆಗೆ ಚಂದನವನದಲ್ಲಿ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ. ನಟ ದುನಿಯಾ ವಿಜಯ್ ಅವರು ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಸಲಗ’ ಚಿತ್ರಕ್ಕೂ ಸಂಜನಾ ಅವರೇ ನಾಯಕಿ. ‘ವಿಜಯ್‌ ಅವರೊಟ್ಟಿಗೆ ನಟಿಸುತ್ತಿರುವುದು ಖುಷಿಯಾಗುತ್ತಿದೆ. ಟಗರು ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡವೇ ಈ ಸಿನಿಮಾದಲ್ಲಿಯೂ ಕೆಲಸ ಮಾಡುತ್ತಿದೆ’ ಎನ್ನುವ ಅವರು ತಮ್ಮ ಪಾತ್ರದ ಗುಟ್ಟು ಬಿಟ್ಟುಕೊಡುವುದಿಲ್ಲ.

ಹಾಸ್ಯಪ್ರಧಾನ ಚಿತ್ರ ‘ಕುಷ್ಕ’ದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ನಟ ಕೃಷ್ಣ ಅಜಯ್‌ ರಾವ್‌ ನಟನೆಯ ಹೊಸ ಚಿತ್ರಕ್ಕೂ ಸಂಜನಾ ನಾಯಕಿ. ಈ ಚಿತ್ರದಲ್ಲಿ ಅವರದು ಹಳ್ಳಿ ಹುಡುಗಿಯ ಪಾತ್ರವಂತೆ. ‘ಕ್ಷತ್ರಿಯ’ ಚಿತ್ರದಲ್ಲಿಯೂ ಚಿರಂಜೀವಿ ಸರ್ಜಾ ಅವರಿಗೆ ಸಾಥ್ ನೀಡಲು ಸಜ್ಜಾಗಿದ್ದಾರೆ.

ನಟ ಶಿವರಾಜ್‌ಕುಮಾರ್ ಅವರಶ್ರೀಮುತ್ತು ಸಿನಿ ಸರ್ವೀಸಸ್‌ ಮತ್ತು ಸಕ್ಕತ್‌ ಸ್ಟುಡಿಯೊದಿಂದ ನಿರ್ಮಿಸುತ್ತಿರುವ ‘ಹನಿಮೂನ್‌’ ವೆಬ್‌ ಸರಣಿಯಲ್ಲೂ ಸಂಜನಾ ನಟಿಸುತ್ತಿದ್ದಾರೆ. ಕೇರಳದಲ್ಲಿ ಇದರ ಶೂಟಿಂಗ್‌ ನಡೆಯುತ್ತಿದೆ. ನವದಂಪತಿ ಹನಿಮೂನ್‌ಗೆ ಹೋಗುವ ಕಥೆ ಇದು. ಎರಡು ಭಿನ್ನ ಯೋಚನಾ ಲಹರಿಯ ಮನಸ್ಸುಗಳು ಒಂದಾಗುವುದೇ ಇದರ ಹೂರಣ.

ಸಂಜನಾ ತಮಗೆ ಇಂತಹದ್ದೇ ಪಾತ್ರಗಳು ಬೇಕೆಂದು ಜೋತು ಬಿದ್ದವರಲ್ಲ. ‘ಸಿನಿಮಾದಲ್ಲಿ ಅವಕಾಶಗಳು ಹೆಚ್ಚು ಸಿಗುತ್ತಿವೆ. ಹಾಗಾಗಿಯೇ, ಉದ್ಯೋಗ ತೊರೆದಿದ್ದೇನೆ. ನಾನು ಇಂತಹದ್ದೇ ಪಾತ್ರಗಳು ಬೇಕೆಂದು ಬೇಡಿಕೆ ಮಂಡಿಸುವುದಿಲ್ಲ. ಅದು ನನ್ನ ಜಾಯಮಾನಕ್ಕೆ ಒಗ್ಗುವುದಿಲ್ಲ. ಜನರ ಮನದಲ್ಲಿ ಗಟ್ಟಿಯಾಗಿ ನೆಲೆಯೂರುವಂತಹ ಪಾತ್ರ ನಿರ್ವಹಿಸಬೇಕು. ಚಿತ್ರಗಳಲ್ಲಿ ಸಿಗುವ ಪಾತ್ರಗಳಿಗೆ ಜೀವ ತುಂಬುವುದಷ್ಟೇ ನನ್ನ ಕೆಲಸ’ ಎಂದು ಚಂದದ ನಗು ಚೆಲ್ಲುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.