ಬೆಂಗಳೂರು:ನಿರ್ದೇಶಕ ರವಿಶ್ರೀವತ್ಸ ವಿರುದ್ಧ ನಟಿ ಸಂಜನಾ ಗಲ್ರಾನಿ ಮಿಟೂ ಆರೋಪ ಮಾಡಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿನ ಕರಾಳ ಕಥೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ.
ಮೂರು ಪುಟಗಳ ಬಹಿರಂಗ ಪತ್ರದೊಂದಿಗೆ ನಟಿ ಸಂಗೀತಾ ಭಟ್ ಅನುಭವಿಸಿದ ನಿರಂತರ ದೌರ್ಜನ್ಯಗಳ ಬೆಂಕಿಯನ್ನು ಒಡಲಿನಿಂದ ಹೊರಹಾಕಿದರು. ಶ್ರುತಿ ಹರಿಹರನ್ ನಟ ಅರ್ಜು ಸರ್ಜಾರಿಂದ ಅನುಭವಿಸಿದ ಕಷ್ಟವನ್ನು ತೋಡಿಕೊಂಡರು, ನಟನೆ–ಸಂಪಾದನೆಯನ್ನು ನೆಚ್ಚಿಕೊಂಡು ಬಂದ ಸಂಜನಾ ತಾನು ಪಟ್ಟ ಪಾಡನ್ನು ವಿವರಿಸಿದ್ದಾರೆ. ಸದ್ಯ ಚಂದನವನದಲ್ಲಿ ಹೊತ್ತಿರುವ ಕಿಡಿ ನಡುಕ ಸೃಷ್ಟಿಸಿದೆ!
’ನಟರ ಗಮನಕ್ಕೆ ಬಾರದೆಯೇ ಪ್ರಣಯ ದೃಶ್ಯಗಳನ್ನು ಯಾವ ನಿರ್ದೇಶಕರೂ ಸೇರಿಸಲು ಸಾಧ್ಯವಿಲ್ಲ. ಹೊಸಬರನ್ನು ನಿರ್ದೇಶಕರು ದುರಪಯೋಗ ಪಡಿಸಿಕೊಳ್ಳಲು ಆಗದು’ ಎಂಬ ಸಾಲುಗಳೊಂದಿಗೆ ನಟಿ ಶ್ರುತಿ ಹರಿಹರನ್, ಸಂಜನಾ ಮಾಡಿರುವ ಮಿಟೂ ಆರೋಪಕ್ಕೆ ದನಿ ಕೂಡಿಸಿದ್ದಾರೆ.
’ತಡವಾದರೂ ಸರಿಯೇ ಈಗ ಮಾತನಾಡುತ್ತಿರುವುದು ಯಾವತ್ತಿಗೂ ತೆರೆದುಕೊಳ್ಳದ್ದಕ್ಕಿಂತ ಉತ್ತಮ. ನಮ್ಮ ದೇಶ ದೊಡ್ಡ ಬದಲಾವಣೆಯೊಂದಕ್ಕೆ ಸಾಕ್ಷಿಯಾಗಿರುವುದು ಮೆಚ್ಚಬಹುದಾದ ಸಂಗತಿ...’ ಎಂದು ಶ್ರುತಿ ಹರಿಹರನ್ ಅವರ ಮಿಟೂ ಪರವಾದ ಧೋರಣೆಗೆ ಸಂಜನಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:
ಬಣ್ಣದ ಬದುಕಿನ ಕೊಳಕು ಬಿಚ್ಚಿಟ್ಟ ಸಂಜನಾ
ಇದು ಹನ್ನೆರಡು ವರ್ಷಗಳ ಹಿಂದಿನ ಮಾತು. ಆ ಚಿತ್ರದಲ್ಲಿ ಅಶ್ಲೀಲ ರೀತಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಾಲಿನ ಕೆಳಗಿಂತ ಸ್ಕರ್ಟ್ ಕೆಳಗೂ ಬೇರೆ ಬೇರೆ ಆ್ಯಂಗಲ್‌ಗಳಲ್ಲಿ ಕ್ಯಾಮೆರಾ ಶಾಟ್ಸ್ ತೆಗೆದಿರುವುದು. ಚಿತ್ರಕ್ಕೆ ಸಹಿ ಮಾಡಿದ ನಂತರ ಅಂಥ ದೃಶ್ಯಗಳಿಗೆ ಒಪ್ಪದಿದ್ದರೂ ಸಾಕಷ್ಟು ಒತ್ತಡ ಹೇರಿ ಚಿತ್ರೀಕರಣ ಮಾಡಲಾಗುತ್ತದೆ– ಇದೆಲ್ಲವೂ ’ಗಂಡ ಹೆಂಡತಿ’ ಸಿನಿಮಾದಲ್ಲಿ ಆದ ಅನುಭವ ಎಂದು ಸಂಜನಾ ಬಣ್ಣದ ಬದುಕಿನ ಕೊಳಕನ್ನು ತೆರೆದಿಟ್ಟಿದ್ದಾರೆ. ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರ ವಿಡಿಯೊ ಅನ್ನು ತಮ್ಮ ಟ್ವಿಟರ್ ಪುಟದಲ್ಲಿ ಪ್ರಕಟಿಸಿಕೊಂಡಿದ್ದಾರೆ.
ರವಿಶ್ರೀವತ್ಸ ನಿರ್ದೇಶಿಸಿದ್ದ ಗಂಡ ಹೆಂಡತಿ ಸಿನಿಮಾದಲ್ಲಿ ಸಂಜನಾ ತಾನಾಗಿಯೇ ಪ್ರಣಯ ದೃಶ್ಯಗಳಲ್ಲಿ ಹೆಚ್ಚು ಮಾದಕವಾಗಿ ಕಾಣಿಸಿಕೊಂಡಿದ್ದಾರೆ, ಅಶ್ಲೀಲ ರೀತಿಯಲ್ಲಿ ನಟಿಸಿದ್ದಾರೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಅದರ ಬಗ್ಗೆ ನಾನು ಮಾತನಾಡುವುದೇ ಕಷ್ಟವಾಗಿತ್ತು ಎಂದಿದ್ದಾರೆ ಸಂಜನಾ. ’ನನ್ನ ಹೆಸರು ಅರ್ಚನಾ. ಅದನ್ನು ಸಂಜನಾ ಆಗಿ ಬದಲಿಸಿದ್ದೂ ರವಿಶ್ರೀವತ್ಸ ಅವರೇ. ಸಿನಿಮಾ ಸಹಿ ಮಾಡುವಾಗ ನನಗೆ 16 ವರ್ಷ. ಮರ್ಡರ್ ಸಿನಿಮಾದ ರಿಮೇಕ್ ಎಂದು ಹೇಳಿದ್ದರು. ನಾನು ಆ ಸಿನಿಮಾ ಮಾಡಲು ಆಗುವುದಿಲ್ಲ ಎಂದೇ ಹೇಳಿದೆ. ಅದಕ್ಕೆ ನಿರ್ದೇಶಕರು, ನಮ್ಮ ಸಂಸ್ಕೃತಿಗೆ ಹಾಗೂ ನೇಟಿವಿಟಿಗೆ ತಕ್ಕಂತೆ ಸಿನಿಮಾ ಬದಲಿಸಿಕೊಳ್ಳುತ್ತೇವೆ. ಇದರಲ್ಲಿ ಕಿಸ್ ಮಾಡುವ ಒಂದೇ ಒಂದು ದೃಶ್ಯ ಮಾತ್ರ ಇರಲಿದೆ. ಆ ದೃಶ್ಯವನ್ನೂ ತೆಗೆದರೆ ಕಥೆಗೆ ಧಕ್ಕೆಯಾಗಲಿದೆ ಎಂದೆಲ್ಲ ಹೇಳಿದರು.
ಮಧ್ಯಮ ವರ್ಗದ ಸಾಮಾನ್ಯ ಕುಟುಂಬದಿಂದ ಬಂದಿದ್ದ ಹುಡುಗಿ ನಾನು; ಬಹಳಷ್ಟು ಕನಸುಗಳಿತ್ತು. ಸಿನಿಮಾ ತಾರೆ ಆಗಿಬಿಡುತ್ತೇನೆ, ಸಿನಿಮಾ ಸಂಭಾವನೆಯಲ್ಲಿ ಬರುವ ಹಣದಿಂದ ಸೆಕೆಂಡ್ ಹ್ಯಾಂಡ್ ಝೆನ್ ಕಾರು ತೆಗೆದುಕೊಳ್ಳುತ್ತೇನೆ. ಕಾರಿನಲ್ಲಿಯೇ ಕಾಲೇಜಿಗೆ ಹೋಗುತ್ತೇನೆ ಎಂದೆಲ್ಲ ಕನಸುಗಳಿದ್ದವು. ಸಿನಿಮಾಜಗತ್ತು, ಗ್ಲಾಮರ್ ಏನೊಂದೂ ತಿಳಿದಿರಲಿಲ್ಲ...₹2.5 ಲಕ್ಷ ಸಂಭಾವನೆ ಕೊಟ್ಟು ಚಿತ್ರಕ್ಕೆ ಸಹಿ ಮಾಡಿಸಿಕೊಂಡರು. ತುಂಬಾ ಮುದ್ದಾಗಿ ಮಾತನಾಡಿದ್ದರು. ಕಿಸ್ ಮಾಡುವುದರಲ್ಲಿ ಏನಿದೆ ಎಂದು ಯೋಚಿಸಿದ್ದೆ; ಕಾಲೇಜಿನಲ್ಲೂ ಶೋಕಿಗೆ ಹೀಗೆ ಮಾಡುವವರನ್ನು ನೋಡಿದ್ದೆ. ಹಾಗಾಗಿ ನಾನು ಸಿನಿಮಾ ಮಾಡಲು ನಿರ್ಧರಿಸಿದ್ದೆ. ತಂದೆಗೆ ತಿಳಿಯದ ಹಾಗೆ ಸಹಿ ಮಾಡಿದ್ದೆ.
ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ, ತಾಯಿ ಜತೆಗಿದ್ದರು. ಒಂದು, ಎರಡನೇ ದಿನದ ನಂತರ ಸೆಟ್‌ಗೆ ತಾಯಿ ಬರದಂತೆ ತಡೆಯುತ್ತಿದ್ದರು. ಚಿತ್ರೀಕರಣದ ಜಾಗದಿಂದ 2 ಕಿ.ಮೀ. ದೂರದಲ್ಲಿಯೇ ಇಳಿಸುತ್ತಿದ್ದರು. ಒಂದು ಕಿಸ್ ಮಾಡಿದ ಬಳಿಕ ಮತ್ತೊಂದು ಮಾಡುವಂತೆ ಹೇಳಿದರು. ಒಂದೇ ಕಿಸ್ ಸೀನ್ ಎಂದು ಹೇಳಿದ್ದಿರಿ; ಎಂದು ಪ್ರಶ್ನಿಸಿದ್ದಕ್ಕೆ–ಭವಿಷ್ಯದಲ್ಲಿ ಮತ್ತೆ ಸಿನಿಮಾ ಮಾಡದಂತೆ ಮಾಡುತ್ತೇನೆ ಎಂದು ಬೆದರಿಸಿದರು. ಒಂದು, ಎರಡು, ಮೂರು,... ಹೀಗೆ ಸುಮಾರು 35 ಬಾರಿ ಅಂಥದ್ದೇ ದೃಶ್ಯದ ಚಿತ್ರೀಕರಣ ಆಯಿತು. ಮಾರನೆಯ ದಿನ ಇದ್ದಕ್ಕಿದ್ದಂತೆ ನನ್ನ ತಾಯಿಯನ್ನು ಭಾರತಕ್ಕೆ ಕಳುಹಿಸಿದರು. ಶೂಟಿಂಗ್ ಬಜೆಟ್, ಖರ್ಚು ಹೆಚ್ಚಾಗುತ್ತಿದೆ ಎನ್ನುವ ಕಾರಣ ನೀಡಿದ್ದರು. ದೊಡ್ಡ ಬ್ರೇಕ್ ಕೊಡುತ್ತಿದ್ದೇವೆ ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಿ ಕಳುಹಿಸಿದರು. ಅಮ್ಮ ಹಲವು ಸಲ ಕರೆ ಮಾಡಿ, ಕೊಠಡಿ ಬಾಗಿಲು ಭದ್ರವಾಗಿ ಮುಚ್ಚಿ ಮಲಗುವಂತೆ ಎಚ್ಚರಿಕೆ ನೀಡುತ್ತಿದ್ದರು. ಅಲ್ಲಿ ನಡೆಯುತ್ತಿರುವ ಬಗ್ಗೆ ನನ್ನ ತಾಯಿಗೆ ತಿಳಿದಿತ್ತು. ನಿರ್ದೇಶಕರು ಹೆದರಿಸಿ ಬೆದರಿಸಿ ಕೆಲಸ ಮಾಡಿಸುತ್ತಿದ್ದರು.
ಭಯ, ಒತ್ತಡ– ಯಾರೊಂದಿಗೂ ಹೇಳಿಕೊಳ್ಳುವುದು ಕಷ್ಟವಾಗಿತ್ತು. ಶೂಟಿಂಗ್‌ನಲ್ಲಿ ಆಗುತ್ತಿದುದೇ ಒಂದು. ತಂದೆಗೂ ಏನೂ ಹೇಳುವಂತಿಲ್ಲ. ಕೊನೆಗೂ ಸಿನಿಮಾ ರಿಲೀಸ್ ಆಯ್ತು. ಸಿನಿಮಾ ನೋಡಿದರೆ...! ಪಾರ್ಟ್ 2 ಆಗುವಷ್ಟು ಸಿನಿಮಾ ಚಿತ್ರೀಕರಣ ಮಾಡಿದ್ದರು. ಗಂಡ ಹೆಂಡತಿ ಸಿನಿಮಾದಲ್ಲಿ ನೀವು ನೋಡಿರುವುದು ಅರ್ಧ ಮಾತ್ರವೇ. ಬಹಳಷ್ಟು ಕಿಸ್ಸಿಂಗ್ ದೃಶ್ಯಗಳು, ಅಶ್ಲೀಲ ಆ್ಯಂಗಲ್‌ನ ಶಾಟ್‌ಗಳು, ಅಂಟಿಕೊಂಡಿರುವ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಚಿತ್ರದ ಸೆನ್ಸಾರ್ ಆಗುವಾಗ ಸಾಕಷ್ಟು ಕಟ್ ಮಾಡಿದ ನಂತರವೂ ಉಳಿದದ್ದು ಸಿನಿಮಾದಲ್ಲಿ ಕಂಡಿದೆ. ಅದಾಗಿ ಒಂದೂವರೆ ವರ್ಷ ಕೆಲಸ ಇರಲಿಲ್ಲ. ಆ್ಯಡ್ ಮಾಡುವುದು ಹಣ ಸಂಪಾದಿಸುವುದು ನಡೆದಿತ್ತು. ಕಾಲೇಜಿನಲ್ಲಿ ಮುಖ ತೋರಿಸುವುದು ಹೇಗೆ? ತಂದೆ ಸಿನಿಮಾ ನೋಡಲಿಲ್ಲ ಮುಖ ಕೆಳಗೆ ಹಾಕಿ ಕುಳಿತಿದ್ದರು, ನಾನು ಏನು ಮಾಡಿಬಿಟ್ಟೆ? ನಾನು ಬದುಕಿರಬಾರದು; ಸತ್ತು ಹೋಗಬೇಕು ಎಂದೆಲ್ಲ ಯೋಚನೆಗಳು ಬರುತ್ತಿದ್ದವು. ತಾಯಿ ಬಹಳ ಸಮಾಧಾನ ಪಡಿಸಿದರು. ಈಜಬೇಕು ಅಥವಾ ಮುಳಗಬೇಕು ಎಂಬುದಷ್ಟೇ ನನ್ನ ಮುಂದಿದ್ದ ಆಯ್ಕೆಗಳು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗಿ, ಚೆನ್ನಾಗಿದ್ದ ಹುಡುಗಿ...ಕೀಳು ಮಟ್ಟದಲ್ಲಿ ಕಾಣಿಸಿಕೊಂಡಿದ್ದಾಳೆ ಎಂಬ ಮಾತುಗಳಿಂದಾಗಿ ಇನ್ನೂ ಬದುಕಲೇಬಾರದು ಎಂದೆನಿಸಿತ್ತು.
ನೀನೊಂದು ಉದಾಹರಣೆ ಎಂದು ಗೆದ್ದು ಬಂದ ಬಳಿಕ ಹೇಳುತ್ತಿದ್ದಾರೆ. ಆದರೆ, ಆಗ ನನಗೆ ಯಾವುದನ್ನೂ ಹೇಳಿಕೊಳ್ಳುವ ಧೈರ್ಯವಿರಲಿಲ್ಲ ಹಾಗೂ ಯಾರೂ ಇರಲಿಲ್ಲ. ನನ್ನೊಂದಿಗೆ ಕೆಲವರು ಫೋಟೋ ತೆಗೆಸಿಕೊಳ್ಳುತ್ತಿರುವಾಗಲೂ ನನಗೆ ಎಂಥದ್ದೋ ಭಾವನೆ ಕಾಡುತ್ತಿತ್ತು. ಈಗ ದೊಡ್ಡ ಸಿನಿಮಾಗಳಿಗೆ ಸಹಿ ಮಾಡಿದ ನಂತರ, ’ಮಿಟೂ ಇದೆಲ್ಲ ಇರೋದೆ–ಪರವಾಗಿಲ್ಲ ಬಿಡಿ, ಗೆದ್ದು ಬಂದಿದ್ದು ಆಯಿತಲ್ಲ ಬಿಡಿ’ ಎನ್ನುತ್ತಿದ್ದಾರೆ. ಸಿನಿಮಾಗಳಲ್ಲಿ ಕಾಣಿಸಿಕೊಂಡ ರೀತಿಯಲ್ಲಿ ನನ್ನ ತಪ್ಪಿಲ್ಲ. ಕ್ಯಾಮೆರಾ ಆ್ಯಂಗಲ್ ಗೊತ್ತು ಮಾಡುವುದು ನಾನಲ್ಲ, ಅದನ್ನು ಕೆಟ್ಟದಾಗಿ ತೋರಿಸಿದ್ದು ನಾನಲ್ಲ, ಅಂಥ ಒತ್ತಡವನ್ನು ಸೃಷ್ಟಿ ಮಾಡಿ ನನ್ನಿಂದ ಕೆಲವು ದೃಶ್ಯಗಳನ್ನು ಮಾಡಿಸಿದರು.
ಇದೇ ರೀತಿ ಬಹಳಷ್ಟು ಜನರಿಗೆ ಆಗಿರುತ್ತದೆ. ಆದರೆ, ಅವರೆಲ್ಲರೂ ಚಿತ್ರರಂಗದಲ್ಲಿ ಉಳಿದಿಲ್ಲ. ನಾನು ಇಲ್ಲೇ ಈಜಿ ಮುಂದೆ ಬಂದಿದ್ದೇನೆ. ನನಗೆ ನಡೆದಿರುವಂತೆ ಬೇರೆ ಮಹಿಳೆಯರಿಗೂ ಆಗಬಾರದು. ಅದನ್ನು ತಡೆಯಬೇಕು. ಶಿವಕೇಶವ ತೆಲುಗು ಸಿನಿಮಾದ ನಿರ್ಮಾಪಕ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣಕ್ಕಾಗಿ ಫ್ಯಾಮಿಲಿಗೆ ಟಿಕೆಟ್ ಕೊಡಿಸುವುದಿಲ್ಲ ಎಂದರು. ಸಹಿ ಮಾಡುವಾಗ ತಂದೆಯನ್ನು ಜತೆಗೆ ಕರೆದೊಯ್ಯಲು ಒಪ್ಪಿದ್ದರು. ನಂತರ ನಾನೇ ಟಿಕೆಟ್ ದುಡ್ಡು ಹಾಕಿ ಕರೆದುಕೊಂಡು ಹೋದೆ. ನಮ್ಮ ಇಂಡಸ್ಟ್ರಿ ಖಂಡಿತ ಕೆಟ್ಟ ಇಂಡಸ್ಟ್ರಿ ಅಲ್ಲ. ಆದರೆ, ಒಬ್ಬರು ಇಬ್ಬರಿಂದ ಕೆಟ್ಟ ಹೆಸರು ಬರುತ್ತಿದೆ. ನಿಮಗೆ ಇಂಥದ್ದು ಆದರೆ, ನೇರವಾಗಿ ಅದೇ ಕ್ಷಣದಲ್ಲಿ ಹೇಳಿಬಿಡಿ. ನಿಮ್ಮಲ್ಲೇ ಮರುಗಬೇಡಿ. ನಿಮಗೆ ಸಹಾಯ ಮಾಡಲು ಇದ್ದೇ ಇರುತ್ತಾರೆ.
ಇದು ಪಬ್ಲಿಸಿಟಿಗೆ ಅಲ್ಲ, ಸಿನಿಮಾದಲ್ಲಿಯೇ ರೆಕಾರ್ಡೆಡ್ ದಾಖಲೆಗಳಿವೆ, ನಮಗೆ ಆಗಿರುವ ನೋವನ್ನು ಹೇಳಿಕೊಳ್ಳುತ್ತಿದ್ದೇವೆ. ಟ್ಯಾಲೆಂಟ್ ಇಲ್ಲದೆ, ವಿಶ್ವಾಸವಿಲ್ಲದೆ ಸಿನಿಮಾ ರಂಗಕ್ಕೆ ಬರುವುದು ಬೇಡ. ಕೆಲವು ವಿಷಯಗಳಲ್ಲಿ ಸಹಿಸಿಕೊಂಡು ಮುಂದೆ ಸಾಗಲು ಪ್ರಯತ್ನಿಸುತ್ತೇನೆ ಎಂದರೆ, ಜೀವನ ಪರ್ಯಂತ ಸಹಿಸಿಕೊಳ್ಳುತ್ತಲೇ ಸಾಗಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.