ADVERTISEMENT

ಮಲ್ಟಿಪ್ಲೆಕ್ಸ್‌ಗಳ ಮೇಲೆ ಮುತ್ತಿಗೆ: ಸಾ.ರಾ.ಗೋವಿಂದು ಎಚ್ಚರಿಕೆ

ಪರಭಾಷಾ ಸಿನಿಮಾಗಳಿಂದ ಕನ್ನಡ ಸಿನಿಮಾಗಳಿಗೆ ಹೊಡೆತ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 18:06 IST
Last Updated 28 ಅಕ್ಟೋಬರ್ 2024, 18:06 IST
ಕೆಎಫ್‌ಸಿಸಿ ಮುಂದೆ ಧರಣಿ ನಿರತ ಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆ ಸದಸ್ಯರು 
ಕೆಎಫ್‌ಸಿಸಿ ಮುಂದೆ ಧರಣಿ ನಿರತ ಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆ ಸದಸ್ಯರು    

ಬೆಂಗಳೂರು: ‘ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ ದರವನ್ನು ₹200 ನಿಗದಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದು, ಶೀಘ್ರದಲ್ಲೇ ಈ ಕುರಿತು ಸರ್ಕಾರ ಆದೇಶ ಹೊರಡಿಸುವ ಭರವಸೆ ಇದೆ. ಇದು ಆಗದೇ ಇದ್ದಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಮುತ್ತಿಗೆ ಹಾಕಲಿದ್ದೇವೆ’ ಎಂದು ನಿರ್ಮಾಪಕ ಸಾ.ರಾ.ಗೋವಿಂದು ಎಚ್ಚರಿಕೆ ನೀಡಿದರು. 

ಸರ್ಕಾರ ಸಿನಿಮಾ ಟಿಕೆಟ್‌ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಫ್‌ಸಿಸಿ) ಮುಂದೆ ನಿರ್ದೇಶಕ ಟೇ.ಶಿ.ವೆಂಕಟೇಶ್‌ ನೇತೃತ್ವದಲ್ಲಿ ‘ಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆ’ ಸದಸ್ಯರು ಕಳೆದೊಂದು ವಾರದಿಂದ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಫ್‌ಸಿಸಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ಹಾಗೂ ಸಾ.ರಾ.ಗೋವಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. 

ಸೋಮವಾರ(ಅ.28) ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಗೋವಿಂದು, ‘ನಮ್ಮ ಕರ್ನಾಟಕದ ಹಣ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶಕ್ಕೆ ಹಂಚಿಹೋಗುತ್ತಿದೆ. ನಾವು ಪರಭಾಷಾ ಸಿನಿಮಾಗಳನ್ನು ಇಲ್ಲಿ ಬಿಡುಗಡೆ ಮಾಡಬೇಡಿ ಎನ್ನುತ್ತಿಲ್ಲ. ಇತ್ತೀಚೆಗೆ ಬಿಡುಗಡೆಗೊಂಡ ರಜನಿಕಾಂತ್‌ ಸಿನಿಮಾಗೆ ಟಿಕೆಟ್‌ ದರ ₹1500–₹2000ದವರೆಗೆ ಇತ್ತು. ತಮಿಳುನಾಡಿನಲ್ಲಿ ಇದಕ್ಕೆ ₹150 ಮೇಲೆ ಇರಲಿಲ್ಲ. ಪರಭಾಷಾ ಸಿನಿಮಾಗಳಿಂದ ಕನ್ನಡ ಸಿನಿಮಾಗಳಿಗೂ ತೆರೆ ಕಡಿಮೆಯಾಗುತ್ತಿದೆ. ಇವುಗಳಿಂದ ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳುತ್ತಿರುವುದು ಸತ್ಯ. ನೆರೆ ರಾಜ್ಯಗಳಲ್ಲಿರುವಂತೆ ನಮ್ಮಲ್ಲೂ ಟಿಕೆಟ್‌ ದರ ನಿಗದಿ ಮಾಡುವಂತೆ 2017ರಲ್ಲೇ ನಾನು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ್ದೆ. ಆಗ ಸರ್ಕಾರ ವಾರ್ತಾ ಇಲಾಖೆಯಡಿ ಟಿಕೆಟ್‌ ದರ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಮಲ್ಟಿಪ್ಲೆಕ್ಸ್‌ನವರು ಇದಕ್ಕೆ ತಡೆಯಾಜ್ಞೆ ತಂದಿದ್ದರು. ಆ ತಡೆಯಾಜ್ಞೆ ಈಗ ತೆರವಾಗಿದೆ. ಇದೀಗ ಗೃಹ ಇಲಾಖೆಯಡಿ ಟಿಕೆಟ್‌ ದರ ನಿಗದಿ ಮಾಡುವ ಆದೇಶವನ್ನು ಹೊರಡಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ’ ಎಂದರು.

ADVERTISEMENT

‘ಸರ್ಕಾರ ನೀಡಿರುವ ಭರವಸೆಗೆ ಕಾಯುತ್ತೇವೆ. ಒಂದು ವೇಳೆ ಸರ್ಕಾರ ನಮ್ಮ ಈ ಮನವಿಗೆ ಸ್ಪಂದಿಸಿಲ್ಲ ಎಂದರೆ ನಾವು ಹೋರಾಟದ ಹಾದಿಯನ್ನು ಹಿಡಿಯಲೇಬೇಕಾಗುತ್ತದೆ. ಪರಭಾಷಾ ವಿತರಕರು, ಪ್ರದರ್ಶಕರು ಮುಂದಿನ ದಿನಗಳಲ್ಲಿ ಹೆಜ್ಜೆ ಇಡುವಾಗ ಎಚ್ಚರಿಕೆಯಿಂದಿರಿ. ತೆಲುಗಿನ ‘ಪುಷ್ಪ’ ಸಿನಿಮಾದಿಂದಲೇ ಆರಂಭಿಸಿ ಮಲ್ಟಿಪ್ಲೆಕ್ಸ್‌ಗಳ ಮೇಲೆ ಮುತ್ತಿಗೆ ಹಾಕುತ್ತೇವೆ. ಈ ಸಿನಿಮಾ ಟಿಕೆಟ್‌ ದರ ₹200ಕ್ಕಿಂತ ಹೆಚ್ಚಿದ್ದರೆ ಎಲ್ಲಿಯೂ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ. ನಮ್ಮಲ್ಲೇ ಭಿನ್ನಾಭಿಪ್ರಾಯಗಳು ಇವೆ. ಪರಭಾಷಾ ಸಿನಿಮಾಗಳನ್ನು ತರುವವರದ್ದೇ ಒಂದು ಗ್ಯಾಂಗ್‌ ಆಗಿದೆ. ವಾರದೊಳಗೆ ನಮ್ಮ ಪ್ರದರ್ಶಕರು, ವಿತರಕರು ಹಾಗೂ ನಿರ್ಮಾಪಕರ ಜೊತೆಗೂ ಸಭೆ ನಡೆಸಲಿದ್ದೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.