ಹಿಂದಿ ಕಿರುತೆರೆಯ ಹೆಸರಾಂತ ನಟಿ ಸಾರಾ ಖಾನ್, ತಮ್ಮ ಹೊಸ ತುಟಿಯ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅವರ ಪ್ರಕಾರ ಅದು ಅವರ ಹಳೆಯ ತುಟಿಯೇ ಅಂತೆ. ‘ಫಿಲ್ಲರ್’ ಎಂಬ ಚಿಕಿತ್ಸೆ ಮೂಲಕ ಮಾದಕ ನೋಟ ತರುವ ಯತ್ನ ಮಾಡಿದ್ದಾರಂತೆ. ಅಂದ ಹಾಗೆ, ಅಂತಹ ತುಟಿ ಹೊಂದಬೇಕು ಎಂಬುದು ಅವರ ಕನಸಾಗಿತ್ತಂತೆ.
ಹಿಂದಿ ಧಾರಾವಾಹಿಗಳು ಮತ್ತು ಕಿರುತೆರೆ ಶೋಗಳ ಮೂಲಕ ಮನೆ ಮಾತಾಗಿರುವ ಸಾರಾ, ಮಾದಕ ಭಂಗಿಗಳ ವಿಡಿಯೊ ಮತ್ತು ಹಾಡುಗಳ ವಿಡಿಯೊ ಮೂಲಕ ‘ಟೆಲಿವಿಷನ್ ಸೆನ್ಸೇಷನ್’ ಎಂದೇ ಕರೆಸಿಕೊಳ್ಳುತ್ತಾರೆ. ಅವರ ಹೊಸ ತುಟಿಯನ್ನು ಅವರ ಅಭಿಮಾನಿಗಳು ಒಪ್ಪಿಕೊಂಡಿಲ್ಲ. ‘ತುಟಿಯ ಶಸ್ತ್ರಚಿಕಿತ್ಸೆ ಕೆಟ್ಟದಾಗಿದೆ. ಅದು ವಿಫಲವಾಗಿದೆ’ ಎಂದು ಅಭಿಮಾನಿಗಳು ಗೇಲಿ ಮಾಡಿದ್ದಾರೆ. ಇನ್ನು ಕೆಲವರು ಟೀಕೆ ಮಾಡಿದ್ದರೆ ಒಂದಷ್ಟು ಮಂದಿ ಟ್ರೋಲ್ ಮಾಡಿದ್ದಾರೆ.
ತುಟಿ ಫಿಲ್ಲಿಂಗ್ ಮಾಡಿಸಿಕೊಂಡ ನಂತರ ಕೂದಲಿಗೆ ಬಂಗಾರದ ಬಣ್ಣದ ಸ್ಪರ್ಶ ಕೊಟ್ಟು ಸೆಲ್ಫಿಯೊಂದನ್ನು ಸಾರಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ‘ಸಪ್ನಾ ಬಬೂಲ್ ಕಾ ಅಭಿಮಾನಿಗಳಿಗೊಂದು ಹೊಸ ಸುದ್ದಿ. ನಾನು ಇಷ್ಟಪಟ್ಟ ಅವತಾರದಲ್ಲಿ ಇನ್ನು ಮುಂದೆ ನನ್ನನ್ನು ನೋಡಬಹುದು’ ಎಂದೂ ಅವರು ಬರೆದುಕೊಂಡಿದ್ದರು. ಆದರೆ ಸಾರಾ ಹೊಸ ‘ಅವತಾರ’ಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಪ್ಲಸ್ ವಾಹಿನಿಯಲ್ಲಿ 2007ರಿಂದ ಮೂರು ವರ್ಷ ಪ್ರಸಾರವಾದ ‘ಸಪ್ನಾ ಬಬೂಲ್ ಕಾ ಬಿದಾಯಿ’ ಧಾರಾವಾಹಿಯಲ್ಲಿ ಸಾಧನಾ ಎಂಬ ಶ್ವೇತ ವರ್ಣದ ಯುವತಿಯಾಗಿ ನಟಿಸಿ ಮನೆ ಮಾತಾಗಿದ್ದವರು ಸಾರಾ ಖಾನ್. ನಂತರ ‘ರಾಮ್ ಮಿಲಾಯಿ ಜೋಡಿ’ ಮತ್ತು ‘ಸಸೂರಲ್ ಸಿಮರ್ ಕಾ’ ಧಾರಾವಾಹಿಗಳಲ್ಲೂ ನಾಯಕ ನಟಿಯಾಗಿ ನಟಿಸಿದ್ದರು.
**
‘ನನ್ನ ತುಟಿ, ನನ್ನಿಷ್ಟ’
‘ನನಗೆ ಎಂಥಾ ತುಟಿ ಬೇಕು ಅಂದುಕೊಂಡಿದ್ದೆನೋ ಅದನ್ನೇ ಮಾಡಿಕೊಂಡಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪೋಸ್ಟ್ ಮಾಡಿದರೂ ಟೀಕೆ ವ್ಯಕ್ತವಾಗುತ್ತಲೇ ಇರುತ್ತದೆ. ಅದಕ್ಕೆಲ್ಲ ನಾನ್ಯಾಕೆ ತಲೆಕೆಡಿಸಿಕೊಳ್ಳಬೇಕು? ಇಷ್ಟಕ್ಕೂ ನನ್ನ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನೀವ್ಯಾರು?’ ಎಂದು ಸಾರಾ ಖಾನ್ ಟೀಕೆ ಮತ್ತು ಟ್ರೋಲ್‌ಗಳಿಗೆ ಎದಿರೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.