ADVERTISEMENT

ಡುಮ್ಮಕ್ಕನಾಗಿದ್ದಾಗ... ನ್ಯೂಯಾರ್ಕ್‌ನ ದಿನಗಳನ್ನು ನೆನಪಿಸಿಕೊಂಡ ಸಾರಾ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 22:30 IST
Last Updated 28 ಜೂನ್ 2024, 22:30 IST
   

ಓಹ್‌.. ಈ ಊರಲ್ಲಿದ್ದಾಗ ನಾನು 96 ಕೆ.ಜಿ ತೂಗ್ತಿದ್ದೆ. ಬರೋಬ್ಬರಿ 96 ಕೆ.ಜಿ. ಎಂದು ನ್ಯೂಯಾರ್ಕ್‌ ನಗರದಲ್ಲಿ ತಾವು ವಾಸವಾಗಿದ್ದ ದಿನಗಳನ್ನು ಸಾರಾ ನೆನಪಿಸಿಕೊಂಡಿದ್ದಾರೆ.

ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದೆ. ಅತಿಯಾದ ತೂಕ ನಿರ್ವಹಿಸಿದ್ದೇ ಕಡಿಮೆ. ಮನೆಯಿಂದಾಚೆ ಬರುವುದನ್ನೇ ನಿಲ್ಲಿಸಿದ್ದೆ. ಸದ್ಯ ಆ ದಿನಗಳೀಗ ಕಳೆದು ಹೋದವು ಎಂದು ನಿಟ್ಟುಸಿರು ಬಿಟ್ಟಿದ್ದಾರೆ ಸಾರಾ ಅಲಿ ಖಾನ್‌.

ಇದೀಗ ಏಳು ಮಲ್ಲಿಗೆ ತೂಕದ ಸುಂದರಿಯಂತಾಗಿರುವ ಸಾರಾ ಅಲಿ ಖಾನ್‌ ಈ ಸ್ಥಿತಿಗೆ ಬರಲು ಪಟ್ಟ ಕಷ್ಟವನ್ನೂ ಹೇಳಿದ್ದಾರೆ. ಪಿಸಿಓಡಿ ಸಮಸ್ಯೆಗೆ ಚಿಕಿತ್ಸೆ ಪಡೆಯಿರಿ. ಮೊದಲ ಲಕ್ಷಣಗಳು ಕಾಣಿಸಿಕೊಂಡಾಗಲೇ ವೈದ್ಯರನ್ನು ಕಾಣಿರಿ. ಕೇವಲ ಸೌಂದರ್ಯಕ್ಕಾಗಿ, ಸಪೂರ ದೇಹ ಪಡೆಯಲು ಮಾತ್ರ ವರ್ಕೌಟ್‌ ಮಾಡಬೇಕು ಎಂಬ ಯೋಚನೆಯೇ ತಪ್ಪು. ನಮ್ಮ ಧಾರಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು, ದೈಹಿಕವಾಗಿ ಆರೋಗ್ಯವಂತರಾಗಿರಲೂ ವರ್ಕೌಟ್‌ ಮಾಡಬೇಕು ಎಂಬ ಬುದ್ಧಿವಾದವನ್ನೂ ಹೇಳಿದ್ದಾರೆ.

ADVERTISEMENT

ನ್ಯೂಯಾರ್ಕ್‌ನಲ್ಲಿ ಓದುವಾಗ ’ಪೀಟ್ಜಾ, ಬರ್ಗರ್‌ ಮತ್ತು ಟ್ರಿಪಲ್‌ ಚಾಕ್ಲೆಟ್‌ ಬ್ರೌನಿ ನನ್ನ ಫೆವರೇಟ್‌ ತಿನಿಸುಗಳಾಗಿದ್ದವು. ಕೆಲವೊಮ್ಮೆ ದಿನದ ಮೂರು ಹೊತ್ತೂ ಪೀಟ್ಜಾ ಉಂಡಿದ್ದಿದೆ. ಹೇಗಿದ್ದರೂ ನನ್ನ ತೂಕ ಹೆಚ್ಚಿತ್ತು. ಬದುಕಿನಲ್ಲಿ ಇನ್ನೇನೂ ಆಗುವುದಿಲ್ಲ. ಆಹಾರ ಬಿಟ್ರೆ ಮತ್ತೇನೂ ಆಸಕ್ತಿಕರ ಎನಿಸುತ್ತಿರಲಿಲ್ಲ. ಅದನ್ನೇ ಸುಖಿಸಿದರಾಯಿತು ಎಂದು, ಮನಸಾದಾಗಲೆಲ್ಲ ತಿಂತಿದ್ದೆ. ಪಾಪ್‌ಕಾರ್ನ್ ಮತ್ತು ಪೀಟ್ಜಾಗಳಿದ್ದರೆ ಮತ್ತೇನೂ ಬೇಕಾಗಿರಲಿಲ್ಲ. ಆದರೆ ಕರಣ್‌ ಜೋಹರ್‌ ಅವರು ತಮ್ಮ ಸಿನಿಮಾದಲ್ಲಿ ನಟಿಸುವ ಪ್ರಸ್ತಾಪವಿರಿಸಿದಾಗ, ಹುಬ್ಬು ಹಣೆಗೇರಿದ್ದವು. 85 ಕೇಜಿಗಳಿದ್ದಾಗಲೇ.. ಎಷ್ಟು ಹೆಚ್ಚಾದರೇನಂತೆ ಎಂಬ ಮನಃಸ್ಥಿತಿಯಲ್ಲಿ ಯಾವತ್ತೂ ಯಾವುದನ್ನೂ ನಿರ್ಬಂಧಿಸದೇ ಬದುಕಿರುವುದೇ ತಿಂದುಂಡು ಸುಖವಾಗಿರಲು ಎಂಬಂತೆ ದಿನ ತಳ್ಳಿದೆ. ಪರಿಣಾಮ 96 ಕೆ.ಜಿಗೆ ಏರಿದ್ದೆ. 

ನನ್ನ ಪಾದಗಳಿಗೆ ನನ್ನ ದೇಹದ ತೂಕ ಹೊರುವುದು ಕಷ್ಟವಾಗುತ್ತಿತ್ತು. ಆಗಲೇ ಈ ಸಿನಿಮಾದ ಪ್ರಸ್ತಾಪ ಬಂತು. ಬದುಕಿನ ಚಿತ್ರಣವನ್ನೇ ಬದಲಿಸಿತು. ಮೊದಲು ಪೀಟ್ಜಾ ಪಾಪ್‌ಕಾರ್ನ್‌ಗಳನ್ನು ಬದುಕಿನಿಂದ ಆಚೆ ಇಟ್ಟೆ. ತಟ್ಟೆಗೆ ಬಂತು, ಒಂದು ಸ್ಲೈಸ್‌ ಬ್ರೆಡ್‌ ಮತ್ತು ಮೊಟ್ಟೆ. ಊಟಕ್ಕೆ ಎರಡು ಚಪಾತಿ, ಸಲಾಡ್‌ ಅಥವಾ ದಾಲ್‌, ಕೆಲವೊಮ್ಮೆ ದಕ್ಷಿಣಭಾರತೀಯ ವಿಶೇಷವಾದ ಇಡ್ಲಿ, ದೋಸೆಗಳನ್ನೂ ಸವಿದಿರುವೆ. ಚಿಕಿನ್‌ ವಾರಕ್ಕೆ ಒಮ್ಮೆ ತಿನ್ನುವಂತಾಯಿತು. ಅದೂ ಕರಿದದ್ದು, ಹುರಿದದ್ದು ಅಲ್ಲ, ಕೇವಲ ಬೇಯಿಸಿದ್ದು. ಪ್ರೋಟೀನುಗಳನ್ನು ದಯೆಟ್‌ಗೆ ಸೇರ್ಪಡಿಸಿದೆ. ತೂಕ ಇಳಿಯಲು ಆರಂಭಿಸಿತು. ಜೊತೆಗೆ ’ಅಬ್ಬಾ‘ ಜೊತೆಗೆ ವರ್ಕೌಟ್‌ ಸಹ ಮಾಡುತ್ತಿದ್ದೆ. ಕೇದಾರನಾಥ್‌ ಚಿತ್ರೀಕರಣಕ್ಕೆ ಬಂದಾಗ ತೂಕ ಅರ್ಧದಷ್ಟು ಕಡಿಮೆಯಾಗಿತ್ತು. 46 ಕೆ.ಜಿ.ಗೆ ಇಳಿದಿದ್ದೆ. ಸರಿಯಾದ ಆಹಾರಕ್ರಮ ಮತ್ತು ಸಾಕಷ್ಟು ವ್ಯಾಯಮ, ಕಸರತ್ತು. ಈ ಸ್ಥಿತಿಗೆ ಬರುವಂತೆ ಮಾಡಿತು‘ ಎಂದು ಆ ದಿನಗಳನ್ನು ಸಾರಾ ಅಲಿಖಾನ್‌ ನೆನಪಿಸಿಕೊಂಡಿದ್ದಾರೆ.

ಸೈಫ್‌ ಅಲಿಖಾನ್‌ ಮತ್ತು ಅಮೃತಾ ಸಿಂಗ್‌ ಅವರ ಮಗಳು ಸಾರಾ ಅಲಿಖಾನ್‌ ಕೇದಾರ್‌ನಾಥ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.