ADVERTISEMENT

ಮುರುಗದಾಸ್ ವಿರುದ್ಧ ಕೃತಿಚೌರ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 19:30 IST
Last Updated 28 ಅಕ್ಟೋಬರ್ 2018, 19:30 IST
‘ಸರ್ಕಾರ್’ ನಲ್ಲಿ ವಿಜಯ್
‘ಸರ್ಕಾರ್’ ನಲ್ಲಿ ವಿಜಯ್   

ದೀಪಾವಳಿಗೆ ತೆರೆಗೆ ಬರಲು ಸಿದ್ಧತೆ ನಡೆಸಿರುವ ಇಳಯ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಸರ್ಕಾರ್’ ಸಿನಿಮಾದ ನಿರ್ದೇಶಕ ಎ.ಆರ್. ಮುರುಗದಾಸ್ ವಿರುದ್ಧ ಮತ್ತೊಂದು ಕೃತಿಚೌರ್ಯದ ಆರೋಪ ಬಂದಿದೆ.

ಮುರುಗದಾಸ್ ವಿರುದ್ಧ ಸಹಾಯಕ ನಿರ್ದೇಶಕ ವರುಣ್ ರಾಜೇಂದ್ರನ್ ಕೃತಿ ಚೌರ್ಯ ಆರೋಪ ಮಾಡಿದ್ದು, ದಕ್ಷಿಣ ಭಾರತ ಸಿನಿಮಾ ಬರಹಗಾರರ ಅಸೋಸಿಯೇಷನ್‌ಗೆ ದೂರು ನೀಡಿದ್ದರು. ಈಗ ಅವರುತಮಿಳುನಾಡಿನ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ಮುರುಗದಾಸ್ ಅವರು ನನ್ನ ಕಥೆಯ ಕೃತಿ ಚೌರ್ಯ ಮಾಡಿದ್ದು, ಅದಕ್ಕೆ ಪರಿಹಾರವಾಗಿ ₹ 30 ಲಕ್ಷ ನೀಡುವವರೆಗೆ ಚಿತ್ರದ ಬಿಡುಗಡೆಗೆ ತಡೆ ನೀಡಬೇಕು’ ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪ ಸಂಬಂಧ ಅಕ್ಟೋಬರ್ 30ರೊಳಗೆ ನಿಲುವು ತಿಳಿಸುವಂತೆ ‘ಸರ್ಕಾರ್’ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಸೂಚಿಸಿದೆ. ಅಲ್ಲಿಯವರೆಗೆ ಚಿತ್ರದ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದೂ ಕೋರ್ಟ್‌ ಹೇಳಿದೆ.

ADVERTISEMENT

ಸೆಂಗೋಲ್ ಸಿನಿಮಾ ಕಥೆಯಂತೆ

‘ಸರ್ಕಾರ್ ಚಿತ್ರಕಥೆಯು ನಾನು 2007ರಲ್ಲಿ ಹೆಸರು ನೋಂದಾಯಿಸಿದ್ದ ‘ಸೆಂಗೋಲ್’ ಸಿನಿಮಾದ ಕಥೆ. ಆ ಕಥೆಯನ್ನೇ ಕೊಂಚ ಬದಲಾವಣೆ ಮಾಡಿ ತನ್ನ ಕಥೆಯೆಂಬಂತೆ ಮುರುಗದಾಸ್ ಸೃಷ್ಟಿಸಿದ್ದಾರೆ’ ಎಂದು ವರುಣ್ ದೂರಿದ್ದಾರೆ. ದೂರು ಪರಿಶೀಲಿಸಿದ ದಕ್ಷಿಣ ಭಾರತೀಯ ಸಿನಿಮಾ ಬರಹಗಾರರ ಅಸೋಸಿಯೇಷನ್ ಅಧ್ಯಕ್ಷ ಕೆ.ಭಾಗ್ಯರಾಜ್, ‘ಸರ್ಕಾರ್ ಕಥೆ ವರುಣ್ ಅವರ ಕಥೆಗೆ ಸಾಮ್ಯತೆ ಇದೆ’ ಎಂದಿದ್ದಾರೆ.

ಮುರುಗದಾಸ್ ಅವರು ಕೃತಿ ಚೌರ್ಯದ ಆರೋಪ ಎದುರಿಸುತ್ತಿರುವುದು ಇದೇ ಮೊದಲಲ್ಲ. 2004ರಲ್ಲಿ ತೆರೆಕಂಡ ಸೂರ್ಯ ಅಭಿನಯದ ಗಜನಿ ಚಿತ್ರದ ಬಗ್ಗೆಯೂ ಇಂತಹದ್ದೇ ಆರೋಪ, ವಿವಾದ ಹುಟ್ಟುಹಾಕಿತ್ತು. ಅದಾದ ಬಳಿಕ, ‘ವಿಜಯ್ ಅಭಿನಯದ ‘ಕತ್ತಿ’ ಸಿನಿಮಾ ಕಥೆಯನ್ನು ಮುರುಗದಾಸ್ ಅವರು ನನ್ನಿಂದ ಕದ್ದಿದ್ದಾರೆ’ ಎಂದು ಸ್ಕ್ರಿಪ್ಟ್ ರೈಟರ್ ಮಿಂಜೂರ್ ಗೋಪಿ ಆರೋಪಿಸಿ ದೂರು ದಾಖಲಿಸಿದ್ದರು. ಕ್ರಮೇಣ ಆ ಪ್ರಕರಣವನ್ನು ಮಿಂಜೂರ್ ಹಿಂಪಡೆದರು.

ಸೆನ್ಸಾರ್ ಮಂಡಳಿಯಿಂದ ‘ಸರ್ಕಾರ್’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸನ್ ಪಿಕ್ಚರ್ಸ್ ಅಡಿಯಲ್ಲಿ ಸಿದ್ಧಗೊಂಡಿರುವ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಈಗ ಭುಗಿಲೆದ್ದ ಆರೋಪದಿಂದ ಮುಕ್ತವಾಗಿ ದೀಪಾವಳಿಗೆ ತೆರೆಗೆ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.