ADVERTISEMENT

80 ದೇಶಗಳಲ್ಲಿ ‘ಸರ್ಕಾರ್’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:30 IST
Last Updated 30 ಅಕ್ಟೋಬರ್ 2018, 19:30 IST
ವಿಜಯ್
ವಿಜಯ್    

ಕಾಲಿವುಡ್‌ನ ಇಳಯ ದಳಪತಿ ವಿಜಯ್ ಅಭಿನಯದ ‘ಸರ್ಕಾರ್’ ಸಿನಿಮಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಈಚೆಗೆ, ಈ ಸಿನಿಮಾ ಕಥೆಯ ಕುರಿತು ನಿರ್ದೇಶಕ ಎ.ಆರ್.ಮುರುಗದಾಸ್ ವಿರುದ್ಧ ಕೃತಿಚೌರ್ಯ ಆರೋಪ ಕೇಳಿ ಬಂದಿತ್ತು. ಅದಕ್ಕೂ ಮುಂಚೆ ಬಿಡುಗಡೆಯಾಗಿದ್ದ ಚಿತ್ರದ ಟ್ರೇಲರ್‌ ಸಹ ಸದ್ದು ಮಾಡಿ ಸುದ್ದಿಯಾಗಿತ್ತು.

ಈಗ ಈ ಚಿತ್ರವು ಭಾರತ ಹೊರತುಪಡಿಸಿ ಒಟ್ಟು 80 ದೇಶಗಳಲ್ಲಿ ತೆರೆಕಾಣಲು ಸಜ್ಜುಗೊಂಡು ಮತ್ತೆ ಸುದ್ದಿಯಾಗಿದೆ. ತೆಲುಗು ಹಾಗೂ ತಮಿಳಿನಲ್ಲಿ ಈ ಚಿತ್ರ ನವೆಂಬರ್‌ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ 1200ಕ್ಕೂ ಅಧಿಕ ಪರದೆಗಳ ಮೇಲೆ ಚಿತ್ರ ತೆರೆ ಕಾಣಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಅದು ನಿಜವೇ ಆಗಿದ್ದರೆ ಈ ಸಿನಿಮಾ ತಮಿಳು ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲಿದೆ.

ತಮಿಳುನಾಡು ಸೇರಿದಂತೆ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ಕೇರಳದ ಹೆಚ್ಚಿನ ಚಿತ್ರಮಂದಿರಗಳಿಗೆ ‘ಸರ್ಕಾರ್’ ಲಗ್ಗೆ ಇಡಲಿದೆ. ತಮಿಳುನಾಡಿನ ಶೇಕಡ 80 ರಷ್ಟು ಚಿತ್ರಮಂದಿರಗಳು ಹಾಗೂ ಮಲ್ಪಿಫ್ಲೆಕ್ಸ್‌ಗಳನ್ನು ಬಿಡುಗಡೆಯಂದು ಈ ಸಿನಿಮಾ ಆವರಿಸಿಕೊಳ್ಳಲಿದೆಯಂತೆ.

ADVERTISEMENT

ಚಿತ್ರದ ಇನ್ನೊಂದು ವಿಶೇಷವೆಂದರೆ,ತಮಿಳುನಾಡು ಹಾಗೂ ಕೇರಳದಲ್ಲಿ ದಿನದ 24 ಗಂಟೆಯೂ ಚಿತ್ರಪ್ರದರ್ಶನ ಮಾಡಲು ವಿಜಯ್ ಅಭಿಮಾನಿಗಳು ಯೋಜನೆ ರೂಪಿಸಿದ್ದಾರೆ. ಇದೂ ದಾಖಲೆಯಾಗಲಿದ್ದು, ಚಿತ್ರದ ಬಗ್ಗೆಯ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಿಜಯ್ ಅಭಿನಯದ ಹಿಂದಿನ ಎಲ್ಲ ಸಿನಿಮಾಗಳ ದಾಖಲೆಗಳನ್ನು ಈ ಚಿತ್ರ ಪುಡಿಗಟ್ಟಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.