‘ಪುತ್ರಿ ಮಸಾಬಾ ಗರ್ಭದಲ್ಲಿದ್ದಾಗ ಸ್ನೇಹಿತ ಸತೀಶ್ ಕೌಶಿಕ್ ನನ್ನನ್ನು ವಿವಾಹವಾಗುವುದಾಗಿ ಹೇಳಿದ್ದರು,' ಎಂದು ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ತಮ್ಮ ಆತ್ಮ ಚರಿತ್ರೆ ‘ಸಚ್ ಕಹೂಂ ತೋ’ದಲ್ಲಿ ಉಲ್ಲೇಖಿಸಿದ್ದಾರೆ.
ನೀನಾ ಗುಪ್ತಾ ಅವರು ಮಾಜಿ ಕ್ರಿಕೆಟಿಗ ಸರ್ ವೀವ್ ರಿಚರ್ಡ್ ಅವರೊಂದಿಗೆ 80ರ ದಶಕದಲ್ಲಿ ಪ್ರೇಮ ಸಂಬಂಧ ಹೊಂದಿದ್ದರು. ಈ ವೇಳೆ ನೀನಾ ಗುಪ್ತಾ ಅವರು ಗರ್ಭ ಧರಿಸಿದ್ದರು. ಮಸಾಬಾ ಗುಪ್ತಾಗೆ ನೀನಾ ಈಗಲೂ ಸಿಂಗಲ್ ಮದರ್.
‘ನಾನು ಮಸಾಬಾಗೆ ಗರ್ಭವತಿಯಾಗಿದ್ದಾಗ ಸತೀಸ್ ಒಂದು ಪ್ರಸ್ತಾವನೆಯೊಂದಿಗೆ ನನ್ನೊಂದಿಗೆ ಬಂದಿದ್ದರು. ಚಿಂತೆ ಮಾಡಬೇಡ. ಮಗುವಿನ ಚರ್ಮ ಗಾಢ ಬಣ್ಣದ್ದಾಗಿದ್ದರೂ, ಅದು ನನ್ನದು ಎಂದು ಹೇಳು. ನಾವಿಬ್ಬರು ಮದುವೆಯಾಗೊಣ. ಯಾರಿಗೂ ಅನುಮಾನ ಬರುವುದಿಲ್ಲ.‘ ಎಂದು ಹೇಳಿದ್ದರು ಎಂದು ನೀನಾ ಗುಪ್ತಾ ಬರೆದುಕೊಂಡಿದ್ದಾರೆ. ಈ ಕುರಿತು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಸತೀಶ್ ಕೌಶಿಕ್ ಅವರು ಬಾಲಿವುಡ್‌ನ ನಟ ಮತ್ತು ನಿರ್ಮಾಪಕ. ನೀನಾ ಅವರೊಂದಿಗೆ ಸತೀಶ್ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರು.
ನೀನಾ ಗುಪ್ತಾ ಅವರ ಆತ್ಮಕತೆಯ ಕುರಿತು ಹಿಂದೊಮ್ಮೆ ಪುತ್ರಿ ಮಸಾಬಾ ಗುಪ್ತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಇದನ್ನೂ ಓದಿ:‘ಪ್ರಗತಿಪರ’ ಸಿನಿಮಾ ಅಸಾಧ್ಯ ಎಂದ ನೀನಾ
'ಅಮ್ಮನ ಬ್ಯಾಂಕ್ ಖಾತೆಯಲ್ಲಿ ಕೇವಲ ₹2,000 ಇತ್ತು. ಅದೇ ಸಮಯಕ್ಕೆ ಟ್ಯಾಕ್ಸ್ ರಿಎಂಬರ್ಸ್ಮೆಂಟ್ ಸಿಕ್ಕಿದ್ದರಿಂದ ₹12,000 ಖರ್ಚಿನೊಂದಿಗೆ ಆಸ್ಪತ್ರೆಯಲ್ಲಿ ಜನಿಸಿದೆ. ನಾನೂ ಸಿಸೇರಿಯನ್‌ನಿಂದ ಜನಿಸಿದವು,‘ ಎಂದು ಬರೆದುಕೊಂಡಿದ್ದರು.
'ನಾನು ಅಮ್ಮನ ಆತ್ಮಕತೆಯನ್ನು ಓದುತ್ತ ಸಾಕಷ್ಟು ಸಂಗತಿಗಳನ್ನು ತಿಳಿದುಕೊಂಡೆ. ಆಕೆ ಎದುರಿಸಿದ ಅತ್ಯಂತ ಕಷ್ಟದ ದಿನಗಳ ಬಗ್ಗೆ ತಿಳಿದುಕೊಂಡೆ. ನನ್ನ ಜೀವನದ ಪ್ರತಿಯೊಂದು ದಿನವೂ ಕಷ್ಟಪಟ್ಟು ಕೆಲಸ ಮಾಡುತ್ತೇನೆ. ನನ್ನನ್ನು ಈ ಜಗತ್ತಿಗೆ ತಂದ ಅಮ್ಮನಿಗೆ ಸಾಧನೆಯ ಮೂಲಕ ಪ್ರತಿಫಲವನ್ನು ನೀಡುತ್ತೇನೆ' ಎಂಬ ಮಸಾಬಾ ಅವರ ಸ್ಪೂರ್ತಿ ತುಂಬಿದ ಪೋಸ್ಟ್ ಸಾಮಾಜಿಕ ತಾಣದಲ್ಲಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿತ್ತು.
ನೀನಾರ ಆತ್ಮಕತೆ ಜೂನ್ 14ರಂದು ಬಿಡುಗಡೆಯಾಗಿದೆ. ದಿಲ್ಲಿಯ ಕರೋಲ್ ಬಾಗ್‌ನಲ್ಲಿ ಜನಿಸಿದ ನೀನಾ ಗುಪ್ತಾ ತಮ್ಮ ಬಾಲ್ಯದ ದಿನಗಳು, ಎದುರಿಸಿದ ಸವಾಲುಗಳು, 1980ರಲ್ಲಿ ಬಾಂಬೆಗೆ ಬಂದು ಜೀವನ ಕಟ್ಟಿಕೊಂಡಿದ್ದು, ಮದುವೆಯಾಗದೆ ಗರ್ಭಿಣಿಯಾಗಿದ್ದು, ಒಬ್ಬರೇ ಮಗಳನ್ನು ಬೆಳೆಸಿದ್ದು, ತಂದೆಯಿಲ್ಲದ ಮಗಳನ್ನು ಸಂರಕ್ಷಿಸಿದ್ದು, ಬಾಲಿವುಡ್‌ನಲ್ಲಿ ಎತ್ತರಕ್ಕೆ ಬೆಳೆದಿದ್ದು ಎಲ್ಲವನ್ನು 'ಸಚ್ ಕಹೂಂ ತೊ'ದಲ್ಲಿ ಮುಚ್ಚುಮರೆಯಿಲ್ಲದೆ ಬರೆದಿದ್ದಾರೆ.
ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಹೆಸರಾಂತ ಆಟಗಾರ ವಿವಿಯನ್ ರಿಚರ್ಡ್ಸ್ ಜೊತೆ ಪ್ರೇಮದಲ್ಲಿದ್ದ ನೀನಾ ಗುಪ್ತಾ ಮದುವೆಗೂ ಮುನ್ನ ಗರ್ಭಿಣಿಯಾದರು. ವಿವಿಯನ್ ರಿಚರ್ಡ್ಸ್ ಮೊದಲೇ ವಿವಾಹಿತರಾಗಿದ್ದರಿಂದ ಮಗುವನ್ನು ಒಬ್ಬಳೇ ಬೆಳೆಸುವ ಗಟ್ಟಿ ನಿರ್ಧಾರಕ್ಕೆ ಬಂದರು. ವಿವಾಹಿತರಾಗದೆ ಮಗುವಿಗೆ ಜನ್ಮ ನೀಡಿ, ಆಕೆಯನ್ನು ಓರ್ವಳೇ ಬೆಳೆಸಿ, ಭಾರತದ ಖ್ಯಾತ ಫ್ಯಾಶನ್ ಡಿಸೈನರ್ ರನ್ನಾಗಿ ಮಾಡಿದ ನೀನಾ ಗುಪ್ತಾ ಬದುಕು ಸ್ಪೂರ್ತಿಯುತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.