* ಇತ್ತೀಚಿನ ಕಾಫಿತೋಟ– ಮಗಳು ಜಾನಕಿಯನ್ನು ಜನ ಹೇಗೆ ಸ್ವೀಕರಿಸಿದ್ದಾರೆ ಅನ್ನಿಸುತ್ತದೆ?
ಮಳೆತುಂಬಾ ಬಂದು ಬಿಡ್ತು ಹಾಗಾಗಿ ‘ಕಾಫಿ ತೋಟ’ ಸಿನಿಮಾವನ್ನು ಜನ ತುಂಬಾ ಚೆನ್ನಾಗಿಯೇ ಸ್ವೀಕರಿಸಿದ್ದರು. ಮಗಳು ಜಾನಕಿಯನ್ನೂ ತುಂಬಾ ಚೆನ್ನಾಗಿ ಸ್ವೀಕರಿಸಿದ್ದಾರೆ ಎನ್ನುವುದು ‘ಸುಧಾ’ ಪತ್ರಿಕೆಯಲ್ಲಿ ಬರುವ ಪತ್ರಗಳಿಂದಲೇ ಗೊತ್ತಾಗುತ್ತದೆ. ಆ ಕಾರಣಕ್ಕೆ ಆ ಬಗ್ಗೆ ಹೆಚ್ಚಿಗೆ ಹೇಳುವುದಿಲ್ಲ. ಆಪ್ತವಾಗಿ ಜನ ಸ್ವೀಕರಿಸಿದ್ದಾರೆ. ಜಾನಕಿಯನ್ನು ನನ್ನದೇ ಶೈಲಿಯಲ್ಲಿ ಹಳೆಯದನ್ನು ಇಟ್ಟುಕೊಂಡೇ ಮಾಡಿದ್ದೇನೆ. ಆದರೆ ಇದೇ ಬೇರೆ ರೀತಿಯ ಸೀರಿಯಲ್.
* ವೀಕ್ಷಕ ನಿಮ್ಮ ಧಾರಾವಾಹಿಯನ್ನೇ ವಿಶ್ಲೇಷಣಾತ್ಮಕವಾಗಿ ಇಲ್ಲವೇ ಸಂಶೋಧನಾ ದೃಷ್ಟಿಯಲ್ಲಿ ಏಕೆ ನೋಡುತ್ತಾನೆ?
ಬೇರೆ ಧಾರಾವಾಹಿಗಳ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ವೀಕ್ಷಕ ಏಕೆ ಸಂಶೋಧನಾ ದೃಷ್ಟಿಯಿಂದ ನೋಡುತ್ತಾನೋ ಗೊತ್ತಿಲ್ಲ. ಅದೇ ನಮಗೆ ದೊಡ್ಡ ಕಷ್ಟ ಆಗಿರೋದು. ಸುಮ್ಮನೆ ಬಿಟ್ಟಿದ್ರೆ ಎಷ್ಟೆಷ್ಟೋ ಮಾಡುತ್ತಿದ್ದೆ. ಧಾರಾವಾಹಿಯನ್ನು ಭೂತಗನ್ನಡಿ ಹಿಡಿದುಕೊಂಡು ವಿಮರ್ಶನಾ ದೃಷ್ಟಿಯಿಂದ ನೋಡುವುದು ಇದೆಯಲ್ಲ, ಅದು ಸ್ವಲ್ಪ ಕಷ್ಟವನ್ನು ಉಂಟುಮಾಡುತ್ತಿದೆ. ಏಕೆ ಹಾಗೆ ನೋಡುತ್ತಾರೆ ಗೊತ್ತಾಗುತ್ತಿಲ್ಲ. ಸಹಜತೆ ಬೇರೆ, ಸೃಜನಶೀಲತೆ ಬೇರೆ. ಇದು ಡಾಕ್ಯುಮೆಂಟರಿ ಕ್ರಿಯೆ ಅಲ್ಲ.
* ಕಥೆಯ ಮೂಲ ಏನು?
ಕಥೆ.. ಏನೂ ಇಲ್ಲ. ಯಾವುದನ್ನು ಇಟ್ಟುಕೊಳ್ಳದೆ ಮಾಡಿರೋದು. ಕಥೆಯಲ್ಲಿ ‘ಗತಿ– ಸ್ಥಿತಿ’ ಎರಡೂ ಇರುತ್ತೆ. ಗತಿ ಮುಂದೆ ಹೋಗುತ್ತಿರುತ್ತದೆ. ಸ್ಥಿತಿ ಆಯಾಯ ಪಾತ್ರಗಳ ಸ್ಥಿತಿಯನ್ನು ನಿರ್ಮಿಸುತ್ತದೆ. ಉದಾರಣೆ ಪಾತ್ರಗಳ ಬಗ್ಗೆ ಹೀಗೆ ಎನ್ನುವ ಕಲ್ಪನೆ ಇದೆ. ಅದು ದೃಶ್ಯಗಳನ್ನು ಮಾನವೀಯವಾಗಿ ಮಾಡಲು ಸಾಧ್ಯವಾಗುತ್ತದೆ. ನಾನು ಮಾಡುವಾಗ ದೊಡ್ಡ ಕಲಾಕೃತಿಯೊಂದನ್ನು ಮಾಡುತ್ತೇನೆ ಎಂದು ಖಂಡಿತ ಅಂದುಕೊಳ್ಳುವುದಿಲ್ಲ.ಸ್ಥಿತಿ ಹೀಗೆ ಇಟ್ಟುಕೊಳ್ಳೋಣ ಎಂದು ನಿರ್ಧರಿಸುತ್ತೇವೆ. ಗತಿಯನ್ನು ಆಮೇಲೆ ಮಾಡುತ್ತೇವೆ. ಅಂದರೆ ಅದು ಮುಂದುವರಿಯುತ್ತಾ ಹೋಗುತ್ತೆ. ಪಾತ್ರವನ್ನು ಮನಸ್ಸಿನಲ್ಲಿ ಸ್ಥಿತಿ ಇಟ್ಟುಕೊಂಡಾಗ ಸಾಕಷ್ಟು ಗತಿ ಸಾಗುತ್ತದೆ.
* ಕಥೆಯಲ್ಲೇಕೆ ದ್ವಂದ್ವಗಳು ಹುಟ್ಟುತ್ತಿವೆ? ತನ್ನ ತಂದೆ ಅಪರಾಧಿ ಹೌದೋ ಅಲ್ಲವೋ ಎಂದು ತಿಳಿಯಲುಜಾನಕಿ ಏಕೆ ಯತ್ನಿಸುತ್ತಿಲ್ಲ?
ಅವಳು ತಂದೆ ವಿರುದ್ಧ ಹೇಗೆ ತಿಳಿಯುತ್ತಾಳೆ. ಜಾನಕಿ ಕೂಡ ಮನುಷ್ಯಳು. ಅವಳು ಮೊದಲು ಮನುಷ್ಯಳು, ನಂತರ ಅವಳ ಆದರ್ಶ. ಎಂತಹ ದೊಡ್ಡ ಆದರ್ಶವಾದಿಯಾಗಿದ್ದರೂ ಮೊದಲು ಮನುಷ್ಯರಾಗಿ ಇರಬೇಕು. ಆದರ್ಶ– ಮನುಷ್ಯತ್ವ ಎರಡೂ ಒಟ್ಟಾಗಿ ಯಾರನ್ನಾದರೂ ತುಂಬ ನೋಯಿಸುತ್ತವೆ ಎನ್ನುವ ಸಂದರ್ಭ ಎದುರಾದರೆ ಆಗ ಮೌನ ಲೇಸು. ಜಾನಕಿ ಪ್ರಕಾರ ಆಕೆ ತಿಳಿದುಕೊಂಡಿರುವ ತಂದೆ ಅಂತಹ ದೊಡ್ಡ ತಪ್ಪು ಮಾಡಿಲ್ಲ. ಸತ್ಯ ನನಗೆ ಗೊತ್ತು, ವೀಕ್ಷಕರಿಗೆ ಗೊತ್ತು. ಅವಳಿಗೆ ಗೊತ್ತಿರುವ ಸತ್ಯ ನಿರಂಜನ್ ಸುಳ್ಳು ಹೇಳಿದ್ದಾರೆ. ಅಪ್ಪ ಸುಳ್ಳು ಹೇಳಿಲ್ಲ. ಅಪ್ಪ ತನಗೆ ನೋವು ಉಂಟು ಮಾಡಿರಬಹುದು. ಆಸ್ತಿಯನ್ನು ಪಡೆದಿರಬಹುದು. ಆದರೆ, ಅದು ಈ ಅಪರಾಧದ ತನಿಖೆಗೆ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಳ ತಂದೆಯನ್ನು ಅವಳು ನಂಬಿದ್ದಾಳೆ. ಇಲ್ಲಿ ನಿರಂಜನ್ ಮೇಲೆ ಆ ನಂಬಿಕೆ ಬರದಿರಲು ಸಾಧ್ಯ. ಆಕೆ ತನ್ನ ತಂದೆ– ತಾಯಿಯ ವಿರುದ್ಧ ಹೇಳಬೇಡಿ ಅಂದಿಲ್ಲ.ಅವರ ವಿರುದ್ಧ ಸಾಧ್ಯವಾದರೆ ಹೇಳಬೇಡಿ ಎಂದು ಹೇಳಿದ್ದಾಳೆ.
* ಸೀರಿಯಲ್ ಸಂವಾದಗಳಿಂದ ನಿಮ್ಮ ಕಥೆಗೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ?
ಜಾಸ್ತಿ ಜನ ಒಳ ಹೊಳವುಗಳನ್ನ ನೀಡಬಹುದು. ಸಂವಾದ ಜನ ತೆಗೆದುಕೊಂಡಿರುವ ಬಗ್ಗೆ ಪರಾಮರ್ಶೆಯ ರೂಪ ಇದಾಗಿರುತ್ತದೆ. ಅನೇಕ ಸಾರಿ ನಾವು ಅಂದುಕೊಂಡಂತೆಯೇ ನಡೆಯುತ್ತಿರುತ್ತದೆ. ಅನೇಕ ಬಾರಿ ಎದುರಾಗುವ ಸವಾಲುಗಳಿಗೆ ನಾವು ಹೊಸ ಸಮರ್ಥನೆಗಳನ್ನು ನೀಡಬೇಕಾಗುತ್ತದೆ. ಬೇರೆ ರೀತಿಯ ಆಲೋಚನೆಯನ್ನು ಮಾಡಬೇಕಾಗುತ್ತದೆ. ಜಾನಕಿ ಕುರಿತು ಇದುವರೆಗೆ ಅನೇಕ ಸಂವಾದಗಳು ನಡೆದಿವೆ. ಎಲ್ಲೂ ನಿರಾಕರಿಸುವ ಮಟ್ಟಕ್ಕೆ ಪ್ರಶ್ನೆಗಳು ಕೇಳಿ ಬಂದಿಲ್ಲ. ಒಂದೆರಡು ಪ್ರಶ್ನೆಗಳು ಮಾತ್ರ ಅಷ್ಟು ಸರಿಯಾಗಿ ಇರಲಿಲ್ಲ ಎನ್ನುವುದನ್ನು ಬಿಟ್ಟರೆ ಎಲ್ಲ ಪ್ರಶ್ನೆಗಳೂ ರಚನಾತ್ಮಕವಾಗಿಯೇ ಇವೆ. ಅಲ್ಲಿ ನಮ್ಮ ಧಾರಾವಾಹಿಗೆ ಸಂಬಂಧಿಸಿದಂತೆ ಹೊಸ ಹೊಳವುಗಳು ಸಿಗಬಹುದು. ವೀಕ್ಷಕರಭಾವನೆಗಳು ಆತ್ಮೀಯತೆಯನ್ನು ಅವರ ಸಹಭಾಗಿತ್ವ ತಂದುಕೊಡುತ್ತದೆ.
* ನಿಮ್ಮ ಧಾರಾವಾಹಿಗಳಲ್ಲಿ ಒಂದೇ ಸಮುದಾಯಕ್ಕೆ ಮನ್ನಣೆ ನೀಡುತ್ತೀರಿ ಎಂಬ ಆರೋಪ ಇದೆ, ಏನು ಹೇಳುತ್ತೀರಿ?
ಅದೆಲ್ಲ ತುಂಬಾ ಚೀಪ್ ಆಗುತ್ತದೆ. ಪ್ರತಿಕ್ರಿಯೆ ನೀಡಲ್ಲ. ಅದನ್ನೆಲ್ಲಾ ಹುಡುಕಬಾರದು. ಬೇರೆಯವರೂ ತಂಡದಲ್ಲಿ ಇರುತ್ತಾರೆ. ಸಮರ್ಥಿಸಲು ಅವರನ್ನು ಜಾತಿಯಿಂದ ಗುರುತಿಸಲು ಆಗುತ್ತಾ? ಅದಕ್ಕೆ ಸಮರ್ಥಿಸಿಕೊಳ್ಳಲು ಹೋಗದಿರುವುದೇ ವಾಸಿ.ಬೇರೆ ಸಮುದಾಯದವರೂ ಬೇಕಾದಷ್ಟು ಜನ ಇದ್ದಾರೆ. ಅವರು ಇದು, ಅವರು ಅದು ಎಂದು ಹೇಳಲು ನಾನು ಇಷ್ಟಪಡುವುದಿಲ್ಲ.
* ಹಿಂದಿನ ನಿಮ್ಮ ಧಾರಾವಾಹಿಗಳಿಗಿಂತ ‘ಜಾನಕಿ’ ಹೇಗೆ ಭಿನ್ನ
ಮೊದಲೆಲ್ಲಾ ಹೆಚ್ಚು ರಾಜಕೀಯ. ಹೆಚ್ಚು ಕೋರ್ಟ್ ಇರುತ್ತಿತ್ತು. ಅವು ಮನೆಯಿಂದ ಹೊರಗಡೆ ಹೆಚ್ಚು ನಡೆಯುತ್ತಿತ್ತು. ಇದು ಸಂಬಂಧಗಳಲ್ಲಿ ನಡೆಯುವ ಕಥೆ. ಮನೆಯೊಳಗೆ ಬೆಸೆದುಕೊಂಡಿರುವ ಕಥೆ. ಇಲ್ಲಿ ಕೋರ್ಟ್ ಎಲ್ಲ ಬರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.