ಶ್ರೀಮುರಳಿ ನಾಯಕನಾಗಿರುವ ‘ಮದಗಜ’ ಚಿತ್ರದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟರೊಬ್ಬರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಮೊದಲಿನಿಂದಲೂ ಇತ್ತು. ಪಂಚಭಾಷಾ ನಟರೊಬ್ಬರು ವಿಲನ್ ಆಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಖರೆ ಎಂದಿದ್ದ ಚಿತ್ರದ ನಿರ್ದೇಶಕ ಎಸ್. ಮಹೇಶ್ ಕುಮಾರ್ ಆ ನಟನ ಹೆಸರನ್ನು ಈವರೆಗೆ ಎಲ್ಲಿಯೂ ರಿವೀಲ್ ಮಾಡಿಲ್ಲ.
ಜಗಪತಿ ಬಾಬು ಅಥವಾ ವಿಜಯ್ ಸೇತುಪತಿ ಈ ಇಬ್ಬರಲ್ಲಿ ಯಾರೋ ಒಬ್ಬರು ‘ಮದಗಜ’ನಿಗೆ ವಿಲನ್ ಆಗುವುದು ಮಾತ್ರ ಖರೆ ಎನ್ನುವ ಮಾತು ಸ್ಯಾಂಡಲ್‌ವುಡ್‌ನಲ್ಲಿ ಚರ್ಚಿತವಾಗುತ್ತಿದೆ.ಟೀಸರ್ ಮೂಲಕ ಖಳನಾಯಕನ ಫಸ್ಟ್ ಲುಕ್ ಅನ್ನು ಅದ್ದೂರಿಯಾಗಿ ಪರಿಚಯಿಸುವ ಯೋಜನೆಯನ್ನು ನಿರ್ದೇಶಕರು ರೂಪಿಸಿಕೊಂಡಿದ್ದಾರಂತೆ.
ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ‘ಪುಷ್ಪ’ ಚಿತ್ರದಲ್ಲಿ ನಟಿಸುತ್ತಿರುವ ಬಹುಭಾಷಾ ನಟ ಖಳನಾಯಕನಾಗಿ ನಟಿಸುವುದು ಖಚಿತ. ಆ ನಟನ ದಿನದ ಸಂಭಾವನೆಯೇ ₹7 ಲಕ್ಷ ರೂಪಾಯಿ ಇದೆಯಂತೆ. ಸದ್ಯ ಅವರು ಪುಷ್ಪ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದಜುಲೈ 13ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಚಿತ್ರತಂಡಕ್ಕೆ ಡೇಟ್ ಕೊಟ್ಟಿದ್ದಾರೆಎನ್ನುತ್ತವೆ ಚಿತ್ರತಂಡದ ಮೂಲಗಳು.
‘ಪುಷ್ಪ’ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ಜಗಪತಿ ಬಾಬು ಈ ಇಬ್ಬರೂ ನಟಿಸುತ್ತಿದ್ದಾರೆ. ಈ ಇಬ್ಬರಲ್ಲಿ ಯಾರು ‘ಮದಗಜ’ನೊಂದಿಗೆ ಗುದ್ದಾಡಲಿದ್ದಾರೆ ಎನ್ನುವುದನ್ನು ಸದ್ಯಕ್ಕೆ ಸಿನಿಪ್ರಿಯರೇ ಊಹಿಸಬೇಕು.
ರಾಜ್ಯದಲ್ಲಿ ಕೊರೊನಾ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಲು ಜುಲೈ 1ರಿಂದ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅರ್ಧಕ್ಕೆ ನಿಂತಿರುವ ಚಿತ್ರಗಳ ಚಟುವಟಿಕೆಗಳು ಇನ್ನು ಚುರುಕಿನಿಂದ ಶುರುವಾಗುವ ನಿರೀಕ್ಷೆಗಳಿವೆ.
ಜುಲೈ 13ರಿಂದ ಚಿತ್ರೀಕರಣ ಆರಂಭಿಸಲು ತಯಾರಿ ಮಾಡಿಕೊಂಡಿದ್ದೇವೆ. ಒಂದೇ ಹಂತದಲ್ಲಿ ನಿರಂತರವಾಗಿ 36 ದಿನಗಳು ಚಿತ್ರೀಕರಣ ಮಾಡಲಾಗುವುದು. ಇಷ್ಟು ಆದರೆ ಕ್ಲೈಮ್ಯಾಕ್ಸ್ ಹೊರತುಪಡಿಸಿ ಶೇ 90ರಷ್ಟು ಚಿತ್ರ ಪೂರ್ಣವಾಗಲಿದೆ.ಮೈಸೂರು ಮತ್ತು ಗುಂಡ್ಲುಪೇಟೆಯಲ್ಲಿ ಚಿತ್ರೀಕರಣ ಮಾಡುತ್ತೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಸ್. ಮಹೇಶ್ ಕುಮಾರ್.
‘ಮದಗಜ’ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಧಿಕೃತ ಪುಟಗಳಲ್ಲಿ ಜುಲೈ 6ರಿಂದ ಚಿತ್ರೀಕರಣ ಆರಂಭವಾಗಲಿದೆ ಎನ್ನುವ ತಪ್ಪು ಮಾಹಿತಿ ಹಂಚಿಕೊಂಡಿದ್ದರು. ಅದು ಸುಳ್ಳು. ನಮ್ಮ ಚಿತ್ರತಂಡದ ಎಲ್ಲ ಕಲಾವಿದರು ಜುಲೈ 13ರಿಂದ ನಮಗೆ ಲಭ್ಯವಿರಲಿದ್ದಾರೆ. ಆ ದಿನವೇ ನಾವು ಚಿತ್ರೀಕರಣ ಆರಂಭಿಸುತ್ತಿದ್ದೇವೆ ಎನ್ನುವ ಮಾತು ಸೇರಿಸಿದ್ದಾರೆ ಅವರು.
ಈಗಾಗಲೇ ಈ ಚಿತ್ರದ ಶೇ 30ರಷ್ಟು ಚಿತ್ರೀಕರಣ ನಡೆದಿದೆ. ಕೊರೊನಾ ಲಾಕ್‌ಡೌನ್ ಕಾರಣಕ್ಕೆ ಅರ್ಧಕ್ಕೆ ಸ್ಥಗಿತಗೊಂಡಿತ್ತು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ವಾರಾಣಸಿಯಲ್ಲಿ ಸಾಹಸ ಮತ್ತು ಕೆಲವು ಕುತೂಹಲಭರಿತ ದೃಶ್ಯಗಳ ಚಿತ್ರೀಕರಣವನ್ನು ಕೊರೊನಾಕ್ಕೂ ಪೂರ್ವದಲ್ಲೇ ಚಿತ್ರತಂಡ ಚಿತ್ರೀಕರಿಸಿತ್ತು.
ಎಸ್.ಮಹೇಶ್ ಕುಮಾರ್ ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ನಿಭಾಯಿಸಿದ್ದಾರೆ.ಚೇತನ್ ಕುಮಾರ್ ಅವರ ಸಾಹಿತ್ಯವಿದೆ. ಈ ಚಿತ್ರದಲ್ಲಿ ಕನ್ನಡದ ಬೆಡಗಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ.ಉಮಾಪತಿಗೌಡ ಬಂಡವಾಳ ಹೂಡಿದ್ದಾರೆ.
‘ಮಫ್ತಿ’ ಖ್ಯಾತಿಯ ನವೀನ್‌ಕುಮಾರ್ ಅವರ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ಮತ್ತು ಶಂಕರ್ ಅವರ ಸಂಭಾಷಣೆ, ಹರೀಶ್ ಕೊಂಡೆ ಸಂಕಲನ, ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ. ರಾಮ್– ಲಕ್ಷ್ಮಣ್, ಅನ್ಬು– ಅರಿವು ಅವಳಿ–ಜವಳಿ ಸಹೋದರರ ಸಾಹಸ ನಿರ್ದೇಶನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.