ದುಬೈ: ‘ನನ್ನ ಎತ್ತರ ಕಡಿಮೆ ಎಂಬ ಕಾರಣಕ್ಕಾಗಿ ನಾನು ಬಯಸಿದ ಪಾತ್ರವನ್ನು ಯಾರೊಬ್ಬರೂ ನನಗೆ ಈವರೆಗೂ ನೀಡಿಲ್ಲ’ ಎಂದು ಬಾಲಿವುಡ್ ನಟ ಶಾರುಕ್ ಖಾನ್ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ವರ್ಲ್ಡ್ ಗೌರ್ಮೆಂಟ್ ಸಮಿಟ್‌ನಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ನನಗೆ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಏಜೆಂಟ್ 007 ಪಾತ್ರ ಮಾಡಬೇಕೆಂಬ ಬಯಕೆ ಇತ್ತು. ಆದರೆ ಗೋಧಿ ಬಣ್ಣದವನಾದ ಕಾರಣ ಬಾಂಡ್ ಸಿನಿಮಾದಲ್ಲಿ ಖಳನ ಪಾತ್ರಕ್ಕೆ ಸೂಕ್ತವಾಗುತ್ತಿದ್ದನೋ ಏನೋ. ಬಹುಷಃ ಹೀಗಾಗಿಯೇ ಹಾಲಿವುಡ್ ಅಥವಾ ಬ್ರಿಟಿಷ್ ಸಿನಿಮಾ ರಂಗ ನನ್ನನ್ನು ಆಯ್ಕೆ ಮಾಡಿಲ್ಲ’ ಎಂದಿದ್ದಾರೆ.
‘ಹಲವು ಬಾರಿ ಇದನ್ನು ನಾನು ಅತ್ಯಂತ ಪ್ರಾಮಾಣಿಕವಾಗಿ ಹೇಳಿದ್ದೇನೆ. ಆದರೆ ಯಾರೊಬ್ಬರೂ ನನ್ನ ಮಾತು ನಂಬಲಿಲ್ಲ. ಪಶ್ಚಿಮ ಸಿನಿಮಾ ರಂಗದ ಬಹಳಷ್ಟು ಸ್ನೇಹಿತರೊಂದಿಗೆ ನಾನು ಈ ವಿಷಯ ಕುರಿತು ಚರ್ಚಿಸಿದ್ದೇನೆ. ಆದರೆ ಯಾರೊಬ್ಬರೂ ಒಂದು ಒಳ್ಳೆಯ ಪಾತ್ರಕ್ಕಾಗಿ ನನ್ನನ್ನು ಆಯ್ಕೆ ಮಾಡಲಿಲ್ಲ’ ಎಂದಿದ್ದಾರೆ.
ಚರ್ಚೆಯ ಆರಂಭದಲ್ಲಿ ರಿಚರ್ಡ್ ಕ್ವೆಸ್ಟ್ ಅವರಲ್ಲಿ ಮನವಿಯೊಂದನ್ನು ಮಾಡಿದ ಶಾರೂಕ್, ‘ನನ್ನನ್ನು ಲೆಜೆಂಡ್ ಅನ್ನಬೇಡಿ. ನಾನು ‘ಬಾಂಡ್, ಜೇಮ್ಸ್ ಬಾಂಡ್’’ ಎಂದಿದ್ದಕ್ಕೆ ಸಭೆಯಲ್ಲಿ ಚಪ್ಪಾಳೆಯ ಮಳೆಗರೆಯಿತು.
ಚರ್ಚೆಯಲ್ಲಿ ಕೇವಲ ತಮ್ಮ ಇಷ್ಟವಷ್ಟೇ ಅಲ್ಲದೆ, ತಮ್ಮ ಬದುಕಿನ ಸೋಲು, ಪ್ರಮುಖ ಘಟನೆಗಳನ್ನೂ ಹಂಚಿಕೊಂಡರು. ತಮ್ಮ ಯಾವುದೇ ಸಿನಿಮಾ ಬಿಡುಗಡೆಗೂ ಮುನ್ನ ದೀರ್ಘ ಕಾಲ ಸ್ನಾನದ ಕೋಣೆಯಲ್ಲಿ ಕಳೆಯುತ್ತಿದ್ದೆ. ಅದು 2 ಗಂಟೆಗಳ ಸುದೀರ್ಘ ಮಜ್ಜನ. ನಾಲ್ಕು ವರ್ಷಗಳ ಕಾಲ ಸಿನಿಮಾದಿಂದ ದೂರವಿದ್ದೆ’ ಎಂಬಿತ್ಯಾದಿ ವಿಷಯಗಳನ್ನು ಹಂಚಿಕೊಂಡರು.
ನಿಮಗೆ ಏಜೆಂಟ್ 007 ಪಾತ್ರದಲ್ಲಿ ನಟಿಸುವ ಆಸೆ ಇದೆಯೇ ಎಂಬ ಕ್ವೆಸ್ಟ್ ಅವರ ಪ್ರಶ್ನಗೆ ಉತ್ತರಿಸಿದ ಶಾರೂಕ್, ‘ಖಂಡಿತವಾಗಿಯೂ. ಆದರೆ ನನ್ನ ಎತ್ತರ ಅಷ್ಟೊಂದಿಲ್ಲ’ ಎಂದರು. ಹಾಗಿದ್ದರೆ ಬಾಂಡ್ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ... ಎಂಬ ಪ್ರಶ್ನೆಗೆ, ‘ಖಂಡಿತವಾಗಿಯೂ, ನಾನು ಕಂದು ಬಣ್ಣದವನು’ ಎಂದು ತುಸುವೂ ಯೋಚಿಸದೆಯೇ ಪ್ರತಿಕ್ರಿಯಿಸಿದರು.
ಆಸ್ಕರ್ ಪ್ರಶಸ್ತಿ ವಿಜೇತ ‘ಸ್ಲಮ್ ಡಾಗ್ ಮಿಲೇನಿಯರ್’ ಸಿನಿಮಾದ ನಿರ್ದೇಶಕ ಡ್ಯಾನಿ ಬೋಯೆಲ್ ಜತೆ ಸಾಕಷ್ಟು ಬಾರಿ ಚರ್ಚಿಸಿದ್ದೇನೆ. ಅದೇ ಸಿನಿಮಾದಲ್ಲಿ ಕ್ವಿಜ್ ಮಾಸ್ಟರ್ ಪಾತ್ರವನ್ನು ನಿರ್ವಹಿಸಲು ಅವರು ಆಹ್ವಾನಿಸಿದರು. ಆದರೆ ಅಂತಿಮವಾಗಿ ಆ ಪಾತ್ರವನ್ನು ಅನಿಲ್ ಕಪೂರ್ ನಿರ್ವಹಿಸಿದರು. ಏಕೆಂದರೆ ಆಗ ನಾನು ‘ಕೌನ್ ಬನೇಗಾ ಕರೋಡ್‌ಪತಿ’ಯ 3ನೇ ಆವೃತ್ತಿಯನ್ನು ನಿರೂಪಿಸುತ್ತಿದ್ದೆ. ಹೀಗಾಗಿ ಅದರಿಂದ ದೂರವಿದ್ದೆ’ ಎಂದಿದ್ದಾರೆ.
‘ಸಿನಿಮಾದ ಪಾತ್ರಧಾರಿ ಕಾರ್ಯಕ್ರಮ ನಿರೂಪಕ. ಆದರೂ ಆತ ವಂಚನೆ ಮಾಡುತ್ತಾನೆ. ಅದೇ ವೇಳೆ ನಾನೂ ಒಂದು ಅಂಥದ್ಧೇ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದೆ. ಎದುರಿಗೆ ಕೂತವರನ್ನು ವಂಚಿಸುವುದನ್ನು ಅರಗಿಸಿಕೊಳ್ಳಲು ನನಗೆ ಆಗಲಿಲ್ಲ. ಈ ವಿಷಯವನ್ನು ಬೋಯೆಲ್ ಅವರಿಗೆ ಹೇಳಿದೆ. ಹೀಗಾಗಿ ಆ ಪಾತ್ರವನ್ನು ನಿರಾಕರಿಸಿದೆ. ನನಗಿಂತ ಉತ್ತಮ ನಟರು ಇದ್ದಾರೆ ಎಂದೂ ಹೇಳಿದೆ. ಆ ಪಾತ್ರದಲ್ಲಿ ಅನಿಲ್ ಕಪೂರ್ ಮನೋಜ್ಞವಾಗಿ ನಟಿಸಿದ್ದಾರೆ’ ಎಂದು ಶಾರೂಕ್ ಹೇಳಿದ್ದಾರೆ.
ಹಣದ ಅವಶ್ಯಕತೆ ಎಷ್ಟಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿಜವಾಗಿಯೂ ನನಗೆ ಈಗ ಹಣದ ಅವಶ್ಯಕತೆ ಇಲ್ಲ. ಆದರೂ ಬೇಕು. ಏಕೆಂದರೆ ಸ್ನಾನಕ್ಕೆ ಬಳಸುವ ತೈಲಗಳು ಬಲು ದುಬಾರಿಯಾಗಿವೆ’ ಎಂದಿದ್ದಾರೆ.
ಸರ್ವೋತ್ತಮ ಎಸ್‌ಆರ್‌ಕೆ ಸಿನಿಮಾಗಳು ಎಂದರೆ ಯಾವುವು ಎಂಬ ಪ್ರಶ್ನೆಗೆ ಉತ್ತರಿಸಿದ ಶಾರೂಕ್, ‘ಭರವಸೆ, ಒಳ್ಳೆಯ ಅಂಶ, ಸಂತಸದ ಕ್ಷಣಗಳು ಮತ್ತು ಉತ್ತಮ ಹಾಡುಗಳು. ಇಷ್ಟು ಇರಬೇಕು’ ಎಂದಿದ್ದಾರೆ.
‘ಆಕ್ಷನ್ ಸಿನಿಮಾಗಳ ನಾಯಕನಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಅದು ಹೇಗೋ ಗೊತ್ತಿಲ್ಲ, ಪ್ರಣಯ ಚಿತ್ರಗಳೇ ನನಗೆ ಲಭಿಸಿದವು’ ಎಂದಿದ್ದಾರೆ.
’ವೃತ್ತಿ ಜೀವನ ಕೊನೆಗೊಳಿಸಬೇಕು ಎಂಬುದು ನನ್ನ ಮನಸ್ಸಿನಲ್ಲಿದೆ. ಆದರೆ ಅದಕ್ಕಿನ್ನೂ ಸಮಯವಿದೆ. ಇನ್ನೂ 35 ವರ್ಷಗಳ ಉತ್ತಮ ವೃತ್ತಿ ಬದುಕು ನನ್ನ ಮುಂದಿದೆ. ಇಡೀ ಜಗತ್ತೇ ಇಷ್ಟಪಡುವ ಚಿತ್ರವನ್ನು ಮಾಡಬೇಕೆಂಬ ಆಸೆ ಇದೆ. ಏಕೆಂದರೆ ನಾನೇಕೆ ಗಡಿ ದಾಟಲಿಲ್ಲ ಎಂಬ ಇಂಥ ವೇದಿಕೆಯಲ್ಲಿ ಕೇಳುವ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಿದೆ’ ಎಂದು ಶಾರೂಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.