ADVERTISEMENT

ಮರುಜನ್ಮ ನೀಡಿದ ‘ಕಬೀರ್‌ ಸಿಂಗ್’‌ಗೆ ಶಾಹಿದ್ ಕೃತಜ್ಞತೆ ‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 6:38 IST
Last Updated 24 ಜೂನ್ 2020, 6:38 IST
ಶಾಹಿದ್ ಕಪೂರ್‌
ಶಾಹಿದ್ ಕಪೂರ್‌   

ಅರ್ಜುನ್‌ ರೆಡ್ಡಿ... ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಹುಟ್ಟು ಹಾಕಿದ ಹಿಟ್‌ ಚಿತ್ರ. ಈ ಸಿನಿಮಾದ ಹಿಂದಿಯ ರಿಮೇಕ್‌ ’ಕಬೀರ್‌ ಸಿಂಗ್’ ಕೂಡ ಭಾರಿ ಯಶಸ್ಸು ಕಂಡ‌ ಚಿತ್ರ. ಬಾಕ್ಸ್ ಆಫೀಸ್‌ನಲ್ಲಿ ಎರಡೂ ಕೈಗಳಿಂದ ಹಣ ಬಾಚಿಕೊಂಡ ‘ಕಬೀರ್ ಸಿಂಗ್‌’ನ ಅಭೂತಪೂರ್ವ ಯಶಸ್ಸಿಗೆ ಈಗ ವರ್ಷದ ಸಂಭ್ರಮ.

‘ಅರ್ಜುನ್ ರೆಡ್ಡಿ’ ನಟ ವಿಜಯ್ ದೇವರಕೊಂಡ ಸಿನಿ ಬದುಕಿಗೆ ಹೊಸ ತಿರುವು ನೀಡಿದರೆ, ಸತತ ಸೋಲಿನಿಂದ ಕಂಗೆಟ್ಟಿದ್ದ ನಟ ಶಾಹಿದ್‌ ಕಪೂರ್‌ಗೆ‘ಕಬೀರ್‌ ಸಿಂಗ್‌’ ಮರುಜೀವ ನೀಡಿದ! ದಶಕಗಳ‌ ವೃತ್ತಿ ಬದುಕಿನಲ್ಲಿ ಒಂದೂ ಹಿಟ್‌ ಚಿತ್ರ ನೀಡದ ಶಾಹಿದ್‌ಗೆದೊಡ್ಡ ಮಟ್ಟದ ಯಶಸ್ಸಿನ ರುಚಿ ತೋರಿದ ಚಿತ್ರ.

ಆರಕ್ಕೇರದ ಮೂರಕ್ಕಿಳಿಯದ ನಟರ ಸಾಲಿಗೆ ಸೇರಿದ್ದ ಶಾಹಿದ್ ಇಂದು ಬಾಲಿವುಡ್‌ನ ಸ್ಟಾರ್‌ ನಟರ ಎತ್ತರಕ್ಕೆ ಬೆಳೆದು ನಿಲ್ಲುವಂತೆ ಮಾಡಿದ್ದು ‘ಕಬೀರ್‌ ಸಿಂಗ್‌’ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಒಂದು ಚಿತ್ರ ನಟನ ವೃತ್ತಿ ಬದುಕನ್ನು ಹೇಗೆಲ್ಲಾ ಬದಲಿಸಬಹುದು ಎಂಬುದನ್ನು ಈ ಚಿತ್ರ ನಿರೂಪಿಸಿದೆ.

ADVERTISEMENT

‘ಕಬೀರ್‌ ಸಿಂಗ್‌ ನನ್ನ ಪಾಲಿಗೆ ಕೇವಲ ಒಂದು ಚಿತ್ರವಲ್ಲ. ನನ್ನ ಜೀವನದ ಅತ್ಯಂತ ಭಾವನಾತ್ಮಕ ಪಯಣ. ಮರುಜೀವ ನೀಡಿದ ಚಿತ್ರ’ ಎಂದು ಶಾಹಿದ್‌ ಕಪೂರ್‌ ಬಣ್ಣಿಸಿದ್ದಾರೆ. ‘ಕಬೀರ್‌ ಸಿಂಗ್’ ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲು ಕಾರಣರಾದ ನಿಮಗೊಂದು ಪ್ರೀತಿಪೂರ್ವಕ ಸಲಾಂ ಎಂದು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.‌

ಕಳೆದ ವರ್ಷದ ಜೂನ್‌ 21ರಂದು ತೆರೆ ಕಂಡಿದ್ದ ‘ಕಬೀರ್‌ ಸಿಂಗ್’ ಭಾರಿ ವಿವಾದ ಹುಟ್ಟು ಹಾಕಿತ್ತು. ಸ್ತ್ರೀವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸ್ತ್ರೀ ದ್ವೇಷ ಮತ್ತು ಪುರುಷ ಪ್ರಾಬಲ್ಯವನ್ನು ವೈಭವೀಕರಿಸುವ ಚಿತ್ರ ಎಂದು ಮಾಧ್ಯಮಗಳು ಕಟುವಾಗಿ ಟೀಕಿಸಿದ್ದವು. ಇದು ಶಾಹಿದ್‌ಗೆ ನುಂಗಲಾರದ ತುತ್ತಾಗಿತ್ತು.

ತೆಲುಗಿನ ‘ಅರ್ಜುನ್ ರೆಡ್ಡಿ’ಯನ್ನು ನಿರ್ದೇಶಿಸಿದ್ದ ಸಂದೀಪ ವಂಗಾ ಅವರೇ ‘ಕಬೀರ್‌ ಸಿಂಗ್‌’ಗೂ ಆಕ್ಷನ್‌, ಕಟ್‌ ಹೇಳಿದ್ದಾರೆ. ಶಾಹಿದ್‌ ಸಾಥ್ ನೀಡಿದ್ದು ನಟಿ ಕಿಯಾರಾ.

ಈ ಒರಟ ಹೇಗೆ ಇಷ್ಟವಾದ?
‘ಭಯ ಎಂಬ ಪದದ ಅರ್ಥವೇ ಗೊತ್ತಿಲ್ಲದಒರಟು ಒರಟಾದ ವಿಚಿತ್ರ ವ್ಯಕ್ತಿಯ ಪಾತ್ರವನ್ನು ನೀವು ಇಷ್ಟೊಂದು ಇಷ್ಟ ಪಡುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. ನಿರೀಕ್ಷೆಗೂ ಮೀರಿ ಕಬೀರ್‌ನಿಗೆ ಪ್ರೀತಿಯ ಹೊಳೆ ಹರಿಸಿದ್ದೀರಿ. ಕೆಲವು ಪೂರ್ವಗ್ರಹಪೀಡಿತ ಮತ್ತು ಕುತ್ಸಿತ ಮನಸ್ಸುಗಳು ಕಬೀರ್‌ ಸಿಂಗ್‌ನ ಕತ್ತು ಹಿಸಕಲು ತುದಿಗಾಲ ಮೇಲೆ ನಿಂತಿದ್ದವು. ಕಬೀರ್‌ನನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಂಡಿರಿ. ಅದಕ್ಕಾಗಿ ಧನ್ಯವಾದಗಳು...‘ ಎಂದು ಶಾಹಿದ್‌ ಭಾವನಾತ್ಮಕ ಪತ್ರ ಬರೆದಿದ್ದಾರೆ.

‘ಪ್ರೀತಿಯ ಶಾಹಿದ್‌, ನೀವು ಪಾತ್ರಕ್ಕೆ ಜೀವ ತುಂಬಿದ್ದೀರಿ. ಸಂಪೂರ್ಣ ನ್ಯಾಯ ಒದಗಿಸಿದ್ದೀರಿ’ ಎಂದು ಅಭಿಮಾನಿಯೊಬ್ಬ ಶಾಹಿದ್ ಬೆನ್ನು ತಟ್ಟಿದ್ದಾನೆ.

‘ಕಬೀರ್ ಸಿಂಗ್ ಒಬ್ಬ‌ ಸ್ತ್ರೀದ್ವೇಷಿ ಮತ್ತು ದುರಂಹಕಾರಿ ವ್ಯಕ್ತಿ. ಮಹಿಳೆಯ ಮೇಲೆ ದೌರ್ಜನ್ಯ ನಡೆಸುವ ಮತ್ತು ಪುರುಷ ಪ್ರಾಬಲ್ಯ ಮೆರೆಯುವ ಹಿಂಸಾತ್ಮಕ ವ್ಯಕ್ತಿತ್ವವನ್ನು ಇಷ್ಟೊಂದು ವೈಭವೀಕರಿಸುವ ಅಗತ್ಯವಿರಲಿಲ್ಲ. ಮದ್ಯ ವ್ಯಸನಿ ಮತ್ತು ಸಿಡುಕಿನ ವ್ಯಕ್ತಿಯ ಪಾತ್ರಕ್ಕೆ ನೀವು ಪೂರ್ಣ ನ್ಯಾಯ ಒದಗಿಸಿದ್ದೀರಿ. ಅದರಲ್ಲಿ ಎರಡು ಮಾತಿಲ್ಲ’ ಎಂದು ಮತ್ತೊಬ್ಬ ಅಭಿಮಾನಿ ಪ್ರೀತಿಯಿಂದ ಕಿವಿ ಹಿಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.