ನವದೆಹಲಿ : ಬಾಲಿವುಡ್ ನಟ ಶಾರುಖ್ ಖಾನ್ ವಿಶ್ವದಾದ್ಯಂತ ಅನೇಕ ಅಭಿಮಾನಿಗಳನ್ನು ಪಡೆದಿದ್ದಾರೆ. ಶಾರುಖ್ ಖಾನ್ ಭೇಟಿಗಾಗಿ ಅವರ ಅಭಿಮಾನಿಗಳು ಹರಸಾಹಸ ಪಡುತ್ತಾರೆ. ಅಲ್ಲದೇ ತಮ್ಮ ನೆಚ್ಚಿನ ನಾಯಕನ ನೋಡುವ ಇಂಗಿತವನ್ನು ಕೊನೆತನಕ ವ್ಯಕ್ತಪಡಿಸುತ್ತಾರೆ. ಇದೀಗ ಶಾರುಖ್ ಖಾನ್ ಕ್ಯಾನ್ಸರ್ ಪೀಡಿತ ಮಹಿಳಾ ಅಭಿಮಾನಿಯೊಬ್ಬರಿಗೆ ವಿಡಿಯೊ ಕರೆ ಮಾಡಿ ಸುಮಾರು 30 ನಿಮಿಷಗಳ ಕಾಲ ಮಾತನಾಡಿ ಅವರ ಕೊನೆ ಆಸೆ ಪೂರೈಸಿದ್ದಾರೆ.
ಕೋಲ್ಕತ್ತ ಮೂಲದ ಪ್ರಿಯಾ ಚಕ್ರವರ್ತಿ ಎಂಬುವವರ ತಾಯಿ ಶಿವಾನಿ ಚಕ್ರವರ್ತಿ(60) ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಸಾಯುವ ಮೊದಲು ಶಾರುಖ್ ಖಾನ್ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ತಮ್ಮ ತಾಯಿಯ ಕೊನೆ ಆಸೆ ಪೂರೈಸುವ ಸಲುವಾಗಿ ಮಗಳು ಪ್ರಿಯಾ ಟ್ವಿಟರ್ ಅಭಿಯಾನವನ್ನು ಪ್ರಾರಂಭಿಸಿದರು. ಶಾರುಖ್ ಖಾನ್ ಭೇಟಿ ಮಾಡುವ ಅವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡಿದ್ದರು.
ಕೊನೆಗೂ ಅಭಿಯಾನ ಕೋರಿಕೆಗೆ ಶಾರುಖ್ ಖಾನ್ ಸ್ಪಂದಿಸಿದ್ದಾರೆ. ವಿಡಿಯೋ ಕರೆ ಮೂಲಕ ಶಿವಾನಿ ಚಕ್ರವರ್ತಿ ಅವರ ಜೊತೆ ಸುಮಾರು 30 ನಿಮಿಷಗಳ ಕಾಲ ಶಾರುಖ್ ಮಾತನಾಡಿದ್ದಾರೆ. ಈ ಬಗ್ಗೆ ಪ್ರಿಯಾ ಚಕ್ರವರ್ತಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
‘ನನ್ನ ತಾಯಿ ಪೂರ್ಣ ಗುಣಮುಖರಾಗಲಿ ಎಂದು ಶಾರುಖ್ ಖಾನ್ ಪ್ರಾರ್ಥಿಸಿದ್ದಾರೆ. ನನ್ನ ತಾಯಿಗಾಗಿ ದುವಾ ಓದಿದರು. ನನ್ನ ಮದುವೆಗೆ ಬರುವುದಾಗಿ ತಾಯಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಕೋಲ್ಕತ್ತಗೆ ಭೇಟಿ ನೀಡಿದ ವೇಳೆ ತಾಯಿ ಮಾಡಿದ ಮೀನು ಸಾರು ತಿನ್ನುವುದಾಗಿ ಹೇಳಿದ್ದಾರೆ‘ ಎಂದು ಪ್ರಿಯಾ ಚಕ್ರವರ್ತಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕ್ಯಾನ್ಸರ್ ಪೀಡಿತ ಅಭಿಮಾನಿಯ ಜೊತೆ ಶಾರುಖ್ ಖಾನ್ ಮಾತನಾಡಿರುವ ವಿಷಯ ತಿಳಿದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಖಾನ್ ಮತ್ತು ಶಿವಾನಿ ಅವರ ವಿಡಿಯೊ ಕರೆಯ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.