ಚಿತ್ರ: ಶಕುಂತಲಾ ದೇವಿ (ಹಿಂದಿ),ನಿರ್ಮಾಣ: ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾ,ನಿರ್ದೇಶನ: ಅನು ಮೆನನ್, ತಾರಾಗಣ: ವಿದ್ಯಾ ಬಾಲನ್, ಸಾನ್ಯಾ ಮಲ್ಹೋತ್ರ, ಜಿಶು ಸೆನ್‌ಗುಪ್ತ, ಪ್ರಕಾಶ್ ಬೆಳವಾಡಿ, ಅಮಿತ್
ಶಕುಂತಲಾ ದೇವಿ ಬಹುತೇಕರಿಗೆ ‘ಮಾನವ ಕಂಪ್ಯೂಟರ್’ ಎಂದೇ ಪರಿಚಿತರು. ಅವರ ವೈಯಕ್ತಿಕ ಬದುಕಿನ ಸಂಕೀರ್ಣ ಅಧ್ಯಾಯ ಅಪರಿಚಿತ. ಅವರ ಮಗಳಾದ ಅನುಪಮಾ ಬ್ಯಾನರ್ಜಿಯ ಬರಹಗಳನ್ನಾಧರಿಸಿ ಅಂತಹ ವಿವರಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ‘ಶಕುಂತಲಾ ದೇವಿ’ ಸಿನಿಮಾ ಮೂಲಕ ನಿರ್ದೇಶಕಿ ಅನು ಮೆನನ್ ಮಾಡಿದ್ದಾರೆ.
‘ಸತ್ಯ ಘಟನೆಗಳನ್ನು ಆಧರಿಸಿದ ಈ ಸಿನಿಮಾ ಸಾಕ್ಷ್ಯಚಿತ್ರವಾಗಲೀ, ಜೀವನಚಿತ್ರವಾಗಲೀ ಅಲ್ಲ’ ಎಂಬ ಒಂದು ಸಾಲಿನ ಒಕ್ಕಣೆ ಸಿನಿಮಾ ಶುರುವಾದಾಗ ಕಾಣುತ್ತದೆ. ಪಾತ್ರ ಪೋಷಣೆಯಲ್ಲಿ ಸ್ಪಷ್ಟ ನಿಲುವಿಗೆ ಬರಲು ನಿರ್ದೇಶಕಿಗೆ ಆಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.
ಶಾಲೆಯಲ್ಲಿ ಕಲಿಯದ ಶಕುಂತಲಾ ದೇವಿ ಸ್ವಯಂ ಗಣಿತ ಪ್ರತಿಭೆ. ಎಂಥ ಅಂಕಿಗಳ ಆಟ ಕೊಟ್ಟರೂ ಥಟ್ಟನೆ ಪರಿಹರಿಸಬಲ್ಲ ಚತುರಮತಿ. ಇದನ್ನೇ ಅವರ ಅಪ್ಪ ಬಂಡವಾಳ ಮಾಡಿಕೊಳ್ಳುತ್ತಾನೆ. ಗಣಿತದ ಸಮಸ್ಯೆ ಬಗೆಹರಿಸುವ ಶೋಗಳನ್ನು ಆಯೋಜಿಸಿ ಹಣ ಮಾಡುತ್ತಾನೆ.
ಬಾಲ್ಯದಿಂದಲೂ ನಿರ್ಭಿಡೆಯಿಂದ ತನ್ನದೇ ಲೋಕದಲ್ಲಿ ವಿಹರಿಸಲು ಬಯಸುವ ಶಕುಂತಲಾ, ಕುಟುಂಬದವರ ಬಂಧನದಿಂದ ಕಳಚಿಕೊಳ್ಳುತ್ತಾಳೆ. ವಿದೇಶಗಳಲ್ಲಿ ಸದ್ದು ಮಾಡುತ್ತಾಳೆ. ಹಣವನ್ನೂ ಸಂಪಾದಿಸುತ್ತಾಳೆ. ಪುರುಷರ ಸಾಂಪ್ರದಾಯಿಕ ಮನಸ್ಥಿತಿಗೆ ಒಗ್ಗಿಕೊಳ್ಳಲಾಗದ್ದನ್ನೂ ಧೈರ್ಯವಾಗಿಯೇ ಹೇಳಿಬಿಡುವ ಜಾಯಮಾನ ಅವಳದು. ಎಂಥ ಲೆಕ್ಕ ಕೊಟ್ಟರೂ ಉತ್ತರ ಹೇಳಿ, ‘ಆ್ಯಮ್ ಐ ರೈಟ್?’ ಎಂದು ಕೇಳುವ ಆಕೆ ಮಗಳ ವಿಷಯದಲ್ಲಿ ಮಾಡಿದ್ದು ಸರಿಯೋ, ತಪ್ಪೋ ಎಂಬ ಜಿಜ್ಞಾಸೆಯನ್ನು ತೆರೆಮೇಲೆ ತರುವ ತ್ರಾಸದಾಯಕ ಕೆಲಸಕ್ಕೆ ನಿರ್ದೇಶಕಿ ಕೈಹಾಕಿದ್ದಾರೆ.
ಶಕುಂತಲಾ ದೇವಿ ಅವರ ಗಣಿತದ ಜಾಣತನವನ್ನು ತೋರಿಸುವ ಸನ್ನಿವೇಶಗಳಲ್ಲಿ ಗ್ರಾಫಿಕ್ಸ್ ಮೊರೆ ಹೋಗಿರುವ ಕ್ರಮ ದೃಶ್ಯವತ್ತಾಗಿ ಅವಶ್ಯಕವೇನೋ ಹೌದು. ಆದರೆ, ಅದು ಒಂದು ಹಂತದ ನಂತರ ಪುನರಾವರ್ತನೆ ಎನಿಸುತ್ತದೆ. ಶಕುಂತಲಾ ದೇವಿಯ ಬಾಲ್ಯದಿಂದ ಯೌವನದವರೆಗಿನ ಪಯಣದ ದೃಶ್ಯಗಳೆಲ್ಲ ನಾಟಕವನ್ನು ನೋಡಿದಂತೆ ಕಾಣುತ್ತವೆ.
ಕೇಂದ್ರ ಪಾತ್ರದಲ್ಲಿ ವಿದ್ಯಾ ಬಾಲನ್ ಹಲವು ಭಾವಗಳನ್ನು ತುಳುಕಿಸುತ್ತಾ ಹಿಡಿದಿಟ್ಟುಕೊಳ್ಳುತ್ತಾರೆ. ಆದರೆ, ಅವರ ಪಾತ್ರ ಪೋಷಣೆಯಲ್ಲಿನ ಗೋಜಲುಗಳೇ ಕೊನೆ ಕೊನೆಗೆ ಮಿತಿಗಳೂ ಆಗಿವೆ. ಸಾನ್ಯಾ, ಪ್ರಕಾಶ್ ಬೆಳವಾಡಿ, ಜಿಶು ಸೆನ್‌ಗುಪ್ತ ಅಭಿನಯ ಔಚಿತ್ಯಪೂರ್ಣ.
ಶಕುಂತಲಾ ದೇವಿಯವರ ವೈಯಕ್ತಿಕ ಬದುಕಿನ ಪುಟಗಳ ಅನಾವರಣದ ಕುತೂಹಲಕಾರಿ ಅಂಶಗಳ ನಿರೂಪಣೆಯಲ್ಲಿ ಗಟ್ಟಿಬಂಧವಿಲ್ಲ. ಕೆಲವು ವ್ಯಕ್ತಿಚಿತ್ರಗಳನ್ನು ಸಿನಿಮಾ ಆಗಿಸುವುದು ಎಷ್ಟು ಕಷ್ಟ ಎಂದು ಇದರಿಂದಲೇ ತಿಳಿಯುತ್ತದೆ. ‘ಸೂಪರ್ 30’ ಹಿಂದಿ ಸಿನಿಮಾದಲ್ಲಿನ ಭಾವತೀವ್ರತೆ ಇದರಲ್ಲಿ ಇಲ್ಲ ಎನಿಸಿದರೆ ಅದೂ ಸಹಜವೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.