ಜೂನ್ 10ಕ್ಕೆ 777 ಚಾರ್ಲಿ ರಿಲೀಸ್ ಆಗ್ತಿದೆ. ಅದರಲ್ಲಿ ಹುಬ್ಬಳ್ಳಿಯ ಬಾಲ ಕಲಾವಿದೆ ಶಾರ್ವರಿ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾಳೆ. ಚಿತ್ರ ಬಿಡುಗಡೆಗೆ ಮೊದಲು ಮಾತಿಗೆ ಸಿಕ್ಕ ಈ ಚಿನಕುರುಳಿ ಏನ್ ಮಾಡಿದ್ದಾಳೆ ಗೊತ್ತಾ? ಮೇಕಿಂಗ್ ಆಫ್ 777 ಚಾರ್ಲಿಯ ಒಂದಷ್ಟು ಘಟನೆಗಳನ್ನು ಸ್ವಾರಸ್ಯಕರವಾಗಿ ಯಥಾವತ್ತು ಹಂಚಿಕೊಂಡಿದ್ದಾಳೆ. ಶಾರ್ವರಿ ಏನೇನು ಹೇಳಿದ್ಲು... ಅವಳ ಮಾತುಗಳಲ್ಲೇ ಕೇಳಿ...
ಒಂದೊಂದು ದೃಶ್ಯಕ್ಕೂ 20 ಟೇಕ್!
ಚಾರ್ಲಿಯಲ್ಲಿ ಕೆಲವು ಸೀನ್‌ನಲ್ಲಿ ನಾನು, ಚಾರ್ಲಿ ಮತ್ತೆ ರಕ್ಷಿತ್ ಸರ್ ಮೂವರು ಒಟ್ಟಿಗೆ ಆ್ಯಕ್ಟ್ ಮಾಡೋದಿತ್ತು. ಅದರಲ್ಲಿ ನಂದು, ಚಾರ್ಲಿದು ಆ್ಯಕ್ಟ್ ಓಕೆ ಆದ್ರೆ ರಕ್ಷಿತ್ ಸರ್‌ದು ಓಕೆ ಆಗ್ತಿರ್ಲಿಲ್ಲ. ರಕ್ಷಿತ್‌ಶೆಟ್ಟಿ ಸರ್, ಚಾರ್ಲಿದು ಓಕೆ ಆದ್ರೆ ನಂದು ಆಗ್ತಿರ್ಲಿಲ್ಲ. ನಂದು, ರಕ್ಷಿತ್ ಸರ್ ಆ್ಯಕ್ಟಿಂಗ್ ಓಕೆ ಆದ್ರೆ, ಚಾರ್ಲಿದು ಆಗ್ತಿದ್ದಿಲ್ಲ. ಹೀಗೆ ಒಂದು ಸೀನ್‌ಗೆ 20 ಶಾಟ್ಸ್ ತಗೊಂಡಿದಿತ್ತು. ಅದ್ರಲ್ಲು ರಕ್ಷಿತ್ ಶೆಟ್ಟಿ ಸರ್ ನನ್ನ ಗಮನ ಬೇರೆಡೆಗೆ ಡೈವರ್ಟ್ ಮಾಡೋಕೆ ಅಲ್ ನೋಡು, ಇಲ್ ನೋಡು ಅನ್ನೋವ್ರು. ತಿರುಗಿ ನೋಡಿದ್ರೆ, ‘ಶರ್ವರಿ ಎಲ್ಲೇನ್ ನೋಡ್ತಿಯಾ, ಶಾರ್ವರಿ ಕಾನ್ಸಂಟ್ರೇಟ್’ ಅನ್ನೋರು. ಒಟ್ನಲ್ಲಿ ಮಜಾ ತಗೋತಿದ್ರು. ಆಗ ನಕ್ಕು ನಕ್ಕು ಇಟ್ಟಿದ್ವಿ. ಆ ಸೀನ್‌ನಲ್ಲಿ ಮಜಾ ಬಂತು.
ಚಾರ್ಲಿ ನೆಕ್ಕಲು ಮುಖಕ್ಕೆ ಪೆಡಿಗ್ರಿ
ಒಂದು ಸೀನ್‌ನಲ್ಲಿ ಚಾರ್ಲಿ ಬಂದು ನನ್ನ ಮುಖ, ಕುತ್ತಿಗೆ ನೆಕ್ಕಬೇಕಿತ್ತು. ಆದ್ರೆ ಅದು ಸುಮ್ನೆ ಬಂದು ಮಾಡೋದಿಲ್ವಲ್ಲ. ಅದಕ್ಕೆ ನನ್ನ ಮುಖ, ಕುತ್ತಿಗೆ ಮೇಲೆಲ್ಲ ಪೆಡಿಗ್ರಿ ಹಚ್ಚಿದ್ರು. ಮುಖಕ್ಕೆಲ್ಲ ಪೆಡಿಗ್ರಿ ಹಚ್ಚಿದ ಮೇಲೆ ಚಾರ್ಲಿ ಬಂದು ನೆಕ್ಕೊಕೆ ಶುರು ಮಾಡೋಳು... ನನಗೆ ಗಿಗಳಿಕೆ ಆಗೋದು. ತಕ್ಷಣ ನಗು ಬಂದ್‌ಬಿಡೋದು. ಕಟ್ ಕಟ್... ಮತ್ತೆ ಶಾಟ್ ಟೇಕ್... ಹೀಗೆ ಶಾಟ್ ಓಕೆ ಆಗೋಕೆ ಒಂದು ದಿನಾನೇ ಬೇಕಾಯ್ತು. ನನ್ ಮುಖಕ್ಕೆ ಹಚ್ಚಿದ್ದು ವೆಜ್ ಪೆಡಿಗ್ರಿ ಅಲ್ಲ; ಚಿಕನ್ ಪೆಡಿಗ್ರಿ ಅನ್ನೊದು ನಂಗೆ ನಂತರ ಗೊತ್ತಾಯ್ತು.
ಚಾರ್ಲಿ ಮತ್ತು ನನ್ ಸ್ಕೂಲ್ ಬ್ಯಾಗು
ಮತ್ತೊಂದು ಸೀನ್‌ನಲ್ಲಿ ಏನಂದ್ರೆ, ನಾನು ಚಾರ್ಲಿಯನ್ನ ನನ್ನ ಸ್ಕೂಲ್ ಬ್ಯಾಗ್‌ನಲ್ಲಿ ಹೊತ್ತುಕೊಂಡು ಬರಬೇಕು. ನಾನು ಸ್ಕೂಲ್ ಸಂಬಂಧ ಒಂದು ಬ್ಯಾಗ್ ತಗೊಂಡಿದ್ದೆ. ಅದು ದೊಡ್ಡದಿತ್ತು. ನಾನು ಅದ್ರಲ್ಲೇ ಬಟ್ಟೆ ತುಂಬ್ಕೊಂಡು ಹೋಗಿದ್ದೆ. ಆ ಬ್ಯಾಗನ್ನೇ ಚಾರ್ಲಿನಾ ತುಂಬೋಕೆ ತಗೊಳ್ಳೊದಾ. ತಗೊಂಡಿದ್ದು ಮಾತ್ರ ಅಲ್ಲ; ಅದನ್ನ ಅರ್ಧ ಕಟ್ ಮಾಡ್ಬಿಟ್ರು. ನಂಗೆ ಎಷ್ಟು ಅಳು ಬಂತು ಅಂದ್ರೆ, ಅಂತದ್ದೇ ಸ್ಕೂಲ್ ಬ್ಯಾಗ್ ತಂದು ಕೊಡ್ತಿವಿ ಅಂತ ಹೇಳಿದ ಮೇಲೆ ನಾನು ಸುಮ್ನಾಗಿದ್ದು. ಆದ್ರೂ ಹೊಸ ಸ್ಕೂಲ್ ಬ್ಯಾಗು ನನ್ನ ಬ್ಯಾಗ್ ಥರಾ ಇರ್ಲಿಲ್ಲ ಅನ್ನೋದೆ ಬೇಜಾರು.
ನಗು, ಅಳು, ಉದ್ವೇಗ...
ಈ ಸಿನಿಮಾದಲ್ಲಿ ಅಳೋದು, ನಗೋದು, ಎಮೋಷನಲ್ ಆಗಿ ನಟಿಸುವ ಸೀನ್‌ಗಳು ಇವೆ.ಒಂದು ಸ್ಪೇಷಲ್ ಸೀನ್‌ನಲ್ಲಿ ಅಳೋದಿತ್ತು. ಮೊದ್ಲೇ ನಂಗೆ ಅಳೋದು ಕಷ್ಟ. ಅದು ನ್ಯಾಚುರಲ್ ಆಗೇ ಬರಲಿ ಅಂತ ನನಗೆ ಟ್ರೇನರ್ ಎಕ್ಸಪ್ಲೇನ್ ಮಾಡಿದ್ರು. ಮೊದ್ಲೆಲ್ಲ ಗ್ಲಿಸರಿನ್ ಹಾಕಿ ಅಳ್ಸಿದ್ರು. ಆದರೆ ಆ ಸೀನ್‌ನಲ್ಲಿ ಮಾತ್ರ ನ್ಯಾಚುರಲ್ ಆಗಿ ಬರ್ಬೇಕು ಅಂತ ಏನೆಲ್ಲ ಗಿಮಿಕ್ ಮಾಡಿದ್ರು. ಕೊನೆಗೂ ಅವರು ಅಂದಕೊಂಡ ಹಾಗೇ ಸೀನ್ ಬರ್ಲಿಲ್ಲ ಅಂತ, ನಾಳೆಯಿಂದ ಚಾರ್ಲಿ ಇರಲ್ಲ ನೋಡು ಅಂತ ಹೇಳಿದ್ರು. ಅದನ್ನ ಫೀಲ್ ಮಾಡಿ ಫೀಲ್ ಮಾಡಿ ಖರೇನ ಅಳೂ ಬಂದ್‌ಬಿಡ್ತು. ಕೊನೆಗೂ ಆ ಸೀನ್‌ಗೆ ಬೇಕಿದ್ದ ಅಳು ನ್ಯಾಚುರಲ್ ಆಗಿ ಬಂತು. ಅದು ಕೂಡ ನಂಗೆ ತುಂಬಾ ಇಷ್ಟ ಆಯ್ತು. ಆದ್ರು ಆ ಸೀನ್ ಮಾಡೋ ಟೈಮ್ ನನ್ ಮುಂದಿನ ಎರಡು ಹಲ್ಲು ಬಿದ್ದೋಗಿರೋದ್ರಿಂದ ನಂಗೆ ನಗೋದು ಕೂಡ ಅಷ್ಟು ಸಮಾಧಾನ ಆಗ್ಲಿಲ್ಲ.
ಮೊದಲೇ ಶಾರ್ವರಿಗೆ ನಾಯಿ ಅಂದ್ರೆ ಪಂಚಪ್ರಾಣ. 777 ಚಾರ್ಲಿ ಸಿನಿಮಾ ಮುಗಿಯೋದ್ರಲ್ಲಿ ಶಾರ್ವರಿ–ಚಾರ್ಲಿಯ ದೋಸ್ತಿ ಗಟ್ಟಿಯಾಗಿತ್ತು. ಚಾರ್ಲಿ ಬಿಟ್ಟು ಶಾರ್ವರಿ ಇಲ್ಲ; ಶಾರ್ವರಿ ಬಿಟ್ಟು ಚಾರ್ಲಿ ಇಲ್ಲ ಅನ್ನೋ ಮಟ್ಟಿಗೆ.
ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿರುವ ಈ ಬಾಲ ಕಲಾವಿದೆ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಲು ಸಿನಿಮಾ ಒಂದಕ್ಕೆ ಆಯ್ಕೆಯಾಗಿದ್ದಳು. ಆದರೆ ಪುನೀತ್ ಸರ‍್ರೆ ಇಲ್ವಲ್ಲ ಅನ್ನೊ ಬೇಜಾರು ಶಾರ್ವರಿಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.