ಮುಂಬೈ: ಪತ್ನಿ ಆಲಿಯಾ ಸಿದ್ಧಿಕಿ ತಮ್ಮ ವಿರುದ್ಧ ಮಾಡಿರುವ ಅತ್ಯಾಚಾರ ಮತ್ತು ಅಧಿಕಾರ ಬಳಸಿಕೊಂಡು ಮಕ್ಕಳನ್ನು ಸುಪರ್ದಿಗೆ ಪಡೆಯಲು ಯತ್ನದ ಆರೋಪಗಳ ಕುರಿತಂತೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಮೌನ ಮುರಿದಿದ್ದಾರೆ.
ಇತ್ತೀಚೆಗೆ ನವಾಜುದ್ದೀನ್ ನಿವಾಸದ ಬಳಿಯಿಂದ ವಿಡಿಯೊ ಹಂಚಿಕೊಂಡಿದ್ದ ಆಲಿಯಾ, ನನ್ನನ್ನು ಮನೆಯ ಒಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದರು.
ಈ ಬಗ್ಗೆ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ನವಾಜುದ್ದೀನ್, ಮೌನವಾಗಿರುವುದರಿಂದ ನನ್ನನ್ನು ಕೆಟ್ಟವನೆಂಬಂತೆ ಎಲ್ಲೆಡೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ನನ್ನ ಮಕ್ಕಳಿಗೆ ತಿಳಿದರೆ ಕೆಟ್ಟ ಪರಿಣಾಮ ಬೀರಬಹುದೆಂದು ಸುಮ್ಮನಿದ್ದೆ. ಏಕಪಕ್ಷೀಯ ಹೇಳಿಕೆ, ತಿರುಚಿದ ವಿಡಿಯೊದಿಂದ ಸೋಶಿಯಲ್ ಮೀಡಿಯಾ, ಮಾಧ್ಯಮದಲ್ಲಿ ನನ್ನ ಮಾನಹರಣವಾಗುತ್ತಿರುವುದರಿಂದ ಕೆಲವು ಜನರು ನಿಜವಾಗಿಯೂ ಖುಷಿಪಡುತ್ತಿದ್ದಾರೆ.
ನಮ್ಮಿಬ್ಬರ ಸಂಬಂಧದ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಹಲವು ವರ್ಷಗಳಿಂದ ನಾನು ಮತ್ತು ಆಲಿಯಾ ಒಟ್ಟಿಗೆ ವಾಸಿಸುತ್ತಿಲ್ಲ. ನಮಗೆ ವಿಚ್ಛೇದನ ಸಿಕ್ಕಿದೆ. ಮಕ್ಕಳಿಗಾಗಿ ನಾವು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ.
ನನ್ನ ಮಕ್ಕಳು ಭಾರತದಲ್ಲಿ ಎಲ್ಲಿದ್ದಾರೆ ಎಂಬುದು ಯಾರಿಗಾದರೂ ತಿಳಿದಿದೆಯೇ? 45 ದಿನಗಳಿಂದ ಅವರು ದುಬೈನ ಶಾಲೆಗೆ ಹೋಗಿಲ್ಲ. ಸುದೀರ್ಘ ಗೈರುಹಾಜರಿ ಬಗ್ಗೆ ನನಗೆ ಶಾಲೆಯಿಂದ ಪತ್ರ ಬರುತ್ತಿದೆ. ನನ್ನ ಮಕ್ಕಳನ್ನು ಬಚ್ಚಿಡಲಾಗಿದೆ. 45 ದಿನಗಳಿಂದ ಶಾಲೆ ತಪ್ಪಿಸಿಕೊಂಡಿದ್ದಾರೆ.
ಹಣದ ದುರುದ್ದೇಶದಿಂದ ಕಳೆದ 4 ತಿಂಗಳ ಹಿಂದೆ ದುಬೈನಲ್ಲಿ ಮಕ್ಕಳನ್ನು ಬಿಟ್ಟು ಹೋಗಿದ್ದಳು. ಮಕ್ಕಳೊಂದಿಗೆ ಆಲಿಯಾ ದುಬೈಗೆ ತೆರಳುವ ಮುನ್ನ ಶಾಲಾ ಶುಲ್ಕ, ಮೆಡಿಕಲ್, ಪ್ರವಾಸ ಮುಂತಾದ ವೆಚ್ಚಗಳನ್ನು ಹೊರತುಪಡಿಸಿ 2 ವರ್ಷಗಳಿಂದ ಸರಾಸರಿ ತಿಂಗಳಿಗೆ ₹10 ಲಕ್ಷದಂತೆ 5–7 ಕೋಟಿ ರೂಪಾಯಿಯನ್ನು ಕೊಟ್ಟಿದ್ದೇನೆ. ಆಕೆ ನನ್ನ ಮಕ್ಕಳ ತಾಯಿಯಾಗಿರುವುದರಿಂದ ಆದಾಯದ ಮೂಲ ಸೃಷ್ಟಿಸಲು ಆಕೆಯ ಮೂರು ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ಫೈನಾನ್ಸ್ ಮಾಡಿದ್ದೇನೆ ಎಂದು ಸಿದ್ಧಿಕಿ ಹೇಳಿದ್ದಾರೆ.
ಮನೆಗೆ ತೆರಳಲು ಅವಕಾಶ ನೀಡಿಲ್ಲ ಎಂಬ ಆಲಿಯಾ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧಿಕಿ, ನನ್ನ ಮಕ್ಕಳು ಭಾರತಕ್ಕೆ ಬಂದಾಗಲೆಲ್ಲ ಅವರ ಅಜ್ಜಿಯ ಮನೆಯಲ್ಲಿ ಇರುತ್ತಾರೆ. ಅವರನ್ನು ಯಾರಾದರೂ ಹೇಗೆ ಮನೆಯಿಂದ ಹೊರಹಾಕಲು ಸಾಧ್ಯ. ಒಂದು ಪಕ್ಷ ಹೊರಗೆ ಹಾಕಿದ್ದರೆ ಆಕೆ ಆ ವಿಡಿಯೊವನ್ನು ಏಕೆ ಚಿತ್ರೀಕರಿಸಲಿಲ್ಲ. ಎಲ್ಲಿಯೋ ಬೇರೆ ಕಡೆ ವಿಡಿಯೊ ಮಾಡಿ ನನ್ನನ್ನು ಬ್ಲಾಕ್‌ಮೇಲ್ ಮಾಡಲು ಯತ್ನಿಸುತ್ತಿದ್ದಾಳೆ. ನನ್ನ ಮಾನ ಹರಣದ ಮೂಲಕ ನಟನಾವೃತ್ತಿಜೀವನವನ್ನು ಹಾಳು ಮಾಡಿ, ತನ್ನ ಕಾನೂನುಬಾಹಿರ ಬಯಕೆ ಈಡೇರಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ ಎಂದು ಸಿದ್ಧಿಕಿ ಆರೋಪಿಸಿದ್ದಾರೆ.
ಅಂತಿಮವಾಗಿ ಹೇಳುವುದೇನೆಂದರೆ, ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು. ಈ ಗ್ರಹದಲ್ಲೂ ಯಾವೊಬ್ಬ ಪೋಷಕರೂ ಸಹ ತಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವುದನ್ನು ಬಯಸುವುದಿಲ್ಲ. ನಾನು ಗಳಿಸಿರುವುದೆಲ್ಲ ನನ್ನ ಮಕ್ಕಳಿಗಾಗಿ. ಅದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನ್ನ ಮಕ್ಕಳು ವಾಪಸ್ ಬರುವ ನಿರೀಕ್ಷೆ ಇದೆ ಎಂದು ನವಾಜುದ್ದೀನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.