ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿಯಾಗಿದ್ದ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಜಾಮೀನು ಮಂಜೂರಾದ ಬೆನ್ನಲ್ಲೇ ಪತ್ನಿ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿಸೂಕ್ತಿಯೊಂದನ್ನು ಉಲ್ಲೇಖಿಸಿ ಪೋಸ್ಟ್ ಹಾಕಿದ್ದಾರೆ.
’ಚಂಡಮಾರುತದ ಬಳಿಕಸುಂದರ ಸಂಗತಿಗಳೂ ಸಂಭವಿಸಬಹುದು ಎಂಬುದನ್ನು ಸಾಬೀತುಪಡಿಸಲು ಕಾಮನಬಿಲ್ಲು ಮೂಡುತ್ತದೆ’ ಎಂದು ಯಾವುದನ್ನು ನಿರ್ದಿಷ್ಟಪಡಿಸದೆ ಶಿಲ್ಪಾ ಶೆಟ್ಟಿ,ವಾಸ್ತುಶಿಲ್ಪಿ ಹಾಗೂ ಸುಧಾರಣವಾದಿ ರೋಗರ್ ಲೀ ಅವರ ಸೂಕ್ತಿಯನ್ನು ಪೋಸ್ಟ್ ಮಾಡಿದ್ದಾರೆ.
ಕೆಟ್ಟ ವಾತಾವರಣ ತಿಳಿಯಾದ ಬಳಿಕ ಹೊಸ ಬೆಳಕು ಮೂಡುತ್ತದೆ, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಅರ್ಥದಲ್ಲಿ ಶಿಲ್ಪಾ ಶೆಟ್ಟಿ ಈ ಪೋಸ್ಟ್ ಮಾಡಿರಬಹುದು ಎಂದು ಅಭಿಮಾನಿಗಳು ಪೋಸ್ಟ್ ಬಗ್ಗೆ ಹೇಳುತ್ತಿದ್ದಾರೆ.
ರಾಜ್ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.ಜಾಮೀನು ಪಡೆಯಲು ರಾಜ್ ಕುಂದ್ರಾ ₹50 ಸಾವಿರ ಭದ್ರತೆ ಒದಗಿಸಬೇಕು ಎಂದು ಕೋರ್ಟ್ ಹೇಳಿತ್ತು.
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಜುಲೈ 19ರ ರಾತ್ರಿ ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಕಳೆದ ವಾರ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು 1,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು.ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯವರ ಪಾತ್ರ ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾಗುವುದಕ್ಕೂ ಮುಂಚೆ ರಾಜ್ ಕುಂದ್ರಾ ಕವಿತಾರನ್ನು ಮದುವೆಯಾಗಿ ಲಂಡನ್‌ನಲ್ಲಿ ನೆಲೆಸಿದ್ದರು. ಕವಿತಾಗೆ 2006ರಲ್ಲಿ ವಿಚ್ಛೇದನ ನೀಡಿ 2009ರಲ್ಲಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.