ADVERTISEMENT

ಬಿಗ್‌ಬಾಸ್ ಹೋಗಿ ಬಂದ ಮೇಲೆ ನಾನು ಬದಲಾಗಿಲ್ಲ: ಶೈನ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 9:00 IST
Last Updated 18 ಸೆಪ್ಟೆಂಬರ್ 2020, 9:00 IST
ಶೈನ್ ಶೆಟ್ಟಿ
ಶೈನ್ ಶೆಟ್ಟಿ   

‘ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಸಿನಿಮಾಗಳಲ್ಲಿ ನಟಿಸಲು ಹೆಚ್ಚು ಹೆಚ್ಚು ಅವಕಾಶಗಳು ಬರುತ್ತಿವೆ. ಸದ್ಯ ‘ರುದ್ರಪ್ರಯಾಗ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಮೊದಲು ಒಪ್ಪಿಕೊಂಡ ಸಿನಿಮಾವನ್ನು ಮೊದಲು ಮುಗಿಸಬೇಕು ಎಂಬ ಕಾರಣಕ್ಕೆ ಬೇರೆ ಪ್ರಾಜೆಕ್ಟ್‌ಗಳತ್ತ ಗಮನ ಹರಿಸುತ್ತಿಲ್ಲ. ಈ ಸಿನಿಮಾವನ್ನು ಮುಗಿಸಿಕೊಂಡು ಮುಂದೆ ಹೆಜ್ಜೆ ಇಡುವತ್ತ ಯೋಚಿಸಿದ್ದೇನೆ’ ಎನ್ನುತ್ತಾರೆ ನಟ ಹಾಗೂ ಬಿಗ್‌ಬಾಸ್ ವಿಜೇತ ಶೈನ್‌ ಶೆಟ್ಟಿ.

ಸದ್ಯ ಕಾಸ್ಟ್ರೊಲ್‌ ಇಂಡಿಯಾ ಸಂಯೋಜನೆಯ ‘ಪ್ರೊಟೆಕ್ಟ್‌ಇಂಡಿಯಾ ಎಂಜಿನ್’ ಅಭಿಯಾನದೊಂದಿಗೆ ಕೈ ಜೋಡಿಸಿರುವ ಶೈನ್‌ ಪ್ರಜಾವಾಣಿಯೊಂದಿಗೆ ತಮ್ಮ ಈ ಅಭಿಯಾನ, ಸಿನಿ ಜೀವನ ಹಾಗೂ ವೈಯಕ್ತಿಕ ಜೀವನದ ಕುರಿತು ಮಾತನಾಡಿದರು.

‘ಪ್ರೊಟೆಕ್ಟ್‌ಇಂಡಿಯಾ ಎಂಜಿನ್ ಅಭಿಯಾನದೊಂದಿಗೆ ಕೈ ಜೋಡಿಸಿರುವುದಕ್ಕೆ ಖುಷಿ ಇದೆ. ದೇಶದ ಮೆಕ್ಯಾನಿಕ್‌ಗಳ ಕೌಶಲ ವೃದ್ಧಿಗಾಗಿ ಆರಂಭವಾಗಿರುವ ಈ ಅಭಿಯಾನದಲ್ಲಿ ಸಾಥ್ ನೀಡಲು ಅವಕಾಶ ಸಿಕ್ಕಿರುವುದು ಖುಷಿಯ ವಿಚಾರ. ಸಾಮಾಜಿಕ ಕಳಕಳಿ ಹೊಂದಿರುವ ಈ ಅಭಿಯಾನ ಮೆಕ್ಯಾನಿಕ್‌ಗಳಿಗೆ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳಲು ನೆರವಾಗಲಿದೆ’ ಎಂದರು.

ADVERTISEMENT

‘ನನಗೆ ಬಿಗ್‌ಬಾಸ್‌ಗೆ ಹೋಗುವ ಮೊದಲಿನಿಂದಲೂ ಆಟೊದಲ್ಲಿ ಮಾಡುತ್ತಿದ್ದ ಗಲ್ಲಿ ಕಿಚನ್‌ ಅನ್ನು ನಾಲ್ಕು ಚಕ್ರದ ಫುಡ್‌ ಟ್ರಕ್‌ನಲ್ಲಿ ಮಾಡಬೇಕು ಎಂಬ ಆಸೆ ಇತ್ತು. ಅಲ್ಲಿಂದ ಬಂದ ಮೇಲೆ ಸ್ವಲ್ಪ ದಿನದಲ್ಲೇ ಲಾಕ್‌ಡೌನ್ ಆರಂಭವಾಯ್ತು. ಅಲ್ಲದೇ ಅದರ ಕೆಲಸಕ್ಕೆ ನನಗೆ ಸಮಯ ಬೇಕಿತ್ತು. ಲಾಕ್‌ಡೌನ್‌ 1.0, 2.0, 3.0 ಯಂತೆ ನನ್ನ ಗಲ್ಲಿ ಕಿಚನ್ ಕೂಡ 2.0 ಆಗಿದೆ. ಫುಡ್ ಟ್ರಕ್‌ನಲ್ಲಿ ಗಲ್ಲಿ ಕಿಚನ್‌ ನಡೆಸುವ ನನ್ನ ಆಸೆ ನನಸಾಗಿದೆ’ ಎಂಬ ಸಂತಸ ಶೈನ್ ಅವರದ್ದು.

ಲಾಕ್‌ಡೌನ್‌ ಜೀವನದ ಬಗ್ಗೆ ಮಾತನಾಡಿದ ಶೈನ್‌ ’ಬಿಗ್‌ಬಾಸ್‌ ವಿನ್ ಆಗಿದ್ದು ಹೇಗಾಗಿತ್ತು ಎಂದರೆ ಮುಂದೆ ಒಂದಿಷ್ಟು ದಿನ ಸುಮ್ಮನೆ ಕುಳಿತುಕೊಳ್ಳುವ ಕಾಲ ಬರುತ್ತದೆ. ಆಗ ಖರ್ಚಿಗೆ ಹಣ ಬೇಕಾಗುತ್ತದೆ ಎಂಬಂತಿತ್ತು. ಈ ನಡುವೆ ಸಿನಿಮಾ ತಂಡದ ಜೊತೆ ಒಂದಿಷ್ಟು ಕೆಲಸ ಮಾಡಿದ್ದೆ. ಅಲ್ಲದೇ ಬಿಗ್‌ಬಾಸ್‌ ಮನೆಯ ಒಳಗೆ ಸುಮ್ಮನೆ ಕೂರುವುದು, ನಮ್ಮ ನಮ್ಮ ನಡುವೆ ಬಾಂಧವ್ಯ ವೃದ್ಧಿಸಿಕೊಳ್ಳುವುದು ಎಲ್ಲವನ್ನೂ ಕಲಿಸಿತ್ತು. ಬಿಗ್‌ಬಾಸ್ ಮನೆಯ ಒಳಗೆ ಇದ್ದು ಗೆದ್ದರೆ ಒಂದಿಷ್ಟು ಹಣ ಹೆಸರು ಸಿಗುತ್ತದೆ, ಅದರಂತೆ ಈ ಲಾಕ್‌ಡೌನ್‌ನಲ್ಲಿ ಮನೆಯೊಳಗೆ ಗೆದ್ದರೆ ಜೀವನ ಸಿಗುತ್ತದೆ. ಇಲ್ಲಿ ಸುರಕ್ಷತೆಯಿಂದ ಮನೆಯೊಳಗೆ ಇದ್ದರೆ ಜೀವ ಉಳಿಯುತ್ತದೆ. ಇದರಿಂದ ಜೀವನ ಮುಂದೆ ಸಾಗುತ್ತದೆ ಎಂಬುದಷ್ಟೇ ಬಿಗ್‌ಬಾಸ್‌ಗೂ ಲಾಕ್‌ಡೌನ್‌ಗೂ ಇರುವ ವ್ಯತ್ಯಾಸ ಎನ್ನಿಸಿತ್ತು’ ಎಂದರು.

‘ಬಿಗ್‌ಬಾಸ್ ಹೋಗಿ ಬಂದ ಮೇಲೆ ನನ್ನ ಬಾಹ್ಯನೋಟ ಬದಲಾಗಿರಬಹುದು. ಆದರೆ ನಾನು ಆಂತರಿಕವಾಗಿ ಹಿಂದಿನಂತೆಯೇ ಇದ್ದೇನೆ. ನನ್ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ. ಖ್ಯಾತಿ ಬಂತು ಎಂದಾಕ್ಷಣ ಬದಲಾದರೆ ಮುಂದಿನ ದಿನಗಳನ್ನು ಕಳೆಯುವುದು ಕಷ್ಟವಾಗುತ್ತದೆ. ಹಾಗಾಗಿ ನಾನು ಮೊದಲಿನಂತೆಯೇ ಇದ್ದೇನೆ. ಯಾವುದೇ ನಿರೀಕ್ಷೆಗಳಿಲ್ಲದೇ ಇದ್ದ ಹಾಗೇ ಇರುವುದರಿಂದ ಜೀವನದಲ್ಲಿ ನಿರಾಶೆ ಆಗುವುದಿಲ್ಲ’ ಎನ್ನುವುದು ಶೈನ್ ಅನುಭವದ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.