ADVERTISEMENT

ರಮ್ಯಾ ಕೃಷ್ಣ ಜನ್ಮದಿನಕ್ಕೆ ‘ಶಿವಗಾಮಿ’ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 8:58 IST
Last Updated 14 ಸೆಪ್ಟೆಂಬರ್ 2019, 8:58 IST
‘ಶಿವಗಾಮಿ’ ಚಿತ್ರದಲ್ಲಿ ರಮ್ಯಾ ಕೃಷ್ಣ
‘ಶಿವಗಾಮಿ’ ಚಿತ್ರದಲ್ಲಿ ರಮ್ಯಾ ಕೃಷ್ಣ   

ನಿರ್ದೇಶಕ ರಾಜಮೌಳಿ ‘ಬಾಹುಬಲಿ’ ಚಿತ್ರದಲ್ಲಿ ಸೃಷ್ಟಿಸಿದ ಶಿವಗಾಮಿ ಪಾತ್ರವನ್ನು ಭಾರತೀಯ ಸಿನಿಪ್ರೇಕ್ಷಕರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಪವರ್‌ಫುಲ್‌ ಪಾತ್ರಕ್ಕೆ ಜೀವ ತುಂಬಿದ್ದು ಹಿರಿಯ ನಟಿ ರಮ್ಯಾ ಕೃಷ್ಣ.

ಅಂದಹಾಗೆ ರಮ್ಯಾ ಕೃಷ್ಣ ಅವರು ಈ ಪಾತ್ರಕ್ಕೆ ರಾಜಮೌಳಿ ಅವರ ಮೊದಲ ಆಯ್ಕೆಯಾಗಿರಲಿಲ್ಲವಂತೆ. ಶ್ರೀದೇವಿ ಅವರನ್ನು ಶಿವಗಾಮಿಯಾಗಿ ತೆರೆಯ ಮೇಲೆ ತೋರಿಸಲು ಅವರು ಇಚ್ಛಿಸಿದ್ದರಂತೆ. ಆದರೆ, ಸಂಭಾವನೆಯಲ್ಲಿ ಹೊಂದಾಣಿಕೆಯಾಗದಿದ್ದರಿಂದ ಆ ಪಾತ್ರ ರಮ್ಯಾಕೃಷ್ಣಗೆ ಒಲಿಯಿತು ಎನ್ನುವುದು ಈಗ ಹಳೆಯ ಸುದ್ದಿ. ಆದರೆ, ಹೊಸ ಸುದ್ದಿ ಅದಲ್ಲ. ಸೆ. 15ಕ್ಕೆ ರಮ್ಯಾ ಕೃಷ್ಣ ಅವರ ಜನ್ಮ ದಿನ. ಅಂದು ಅವರು ಮುಖ್ಯ ಭೂಮಿಕೆಯಲ್ಲಿರುವ ‘ಶಿವಗಾಮಿ’ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ.

ಶ್ರೀವಿಘ್ಣೇಶ್ ಕಾರ್ತಿಕ್ ಸಿನಿಮಾಸ್ ಲಾಂಛನದಡಿ ಜಿ. ಶ್ರೀಧರ್‌ ನಿರ್ಮಿಸಿರುವ ಈ ಚಿತ್ರದ ‘ಆಡುವೆ ನಾನು ರತಿ ಶಿವಗಾಮ’ ಹಾಡು ಅಂದು ಸಂಜೆ ಆದಿತ್ಯ ಮ್ಯೂಸಿಕ್‌ನಲ್ಲಿ ಬಿಡುಗಡೆಯಾಗಲಿದೆ. ವಿ. ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡಿಗೆ ಅನುರಾಧ ಭಟ್ ಧ್ವನಿಯಾಗಿದ್ದಾರೆ.

ADVERTISEMENT

ಮಧು ಮಿಣಕನಗುರ್ಕಿ ಈ ಚಿತ್ರ ನಿರ್ದೇಶಿಸಿದ್ದಾರೆ. ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ನೊಗವನ್ನೂ ಅವರೇ ಹೊತ್ತಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈಗಾಗಲೇ, ಚಿತ್ರದ ಪ್ರಥಮ ಪ್ರತಿಯೂ ಸಿದ್ಧವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳದಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆದಿದೆ.

ರಮ್ಯಾ ಕೃಷ್ಣ ಚಿತ್ರದಲ್ಲಿ 9ನೇ ಶತಮಾನದ ರಾಣಿಯಾಗಿ ಕಾಣಿಸಿಕೊಂಡಿದ್ದಾರಂತೆ. ಜೊತೆಗೆ ಅವರದು ಅಗ್ರೆಸಿವ್‌ ಆದ ಪಾತ್ರ. ಚಿತ್ರದಲ್ಲಿ ಕಾಮಿಡಿ ಮತ್ತು ಹಾರರ್‌ ಕೂಡ ಇದೆ. ಮಧು ಅವರು ಎರಡು ಕಾಲಘಟ್ಟದ ಕಥೆ ಹೆಣೆದಿದ್ದಾರೆ. 9ನೇ ಶತಮಾನ ಮತ್ತು 21ನೇ ಶತಮಾನದ ಕಥೆಗಳೆರಡರಲ್ಲೂ ರಮ್ಯಾ ಕೃಷ್ಣ ಕಾಣಿಸಿಕೊಂಡಿದ್ದಾರೆ.

ವೀರ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಬಾಲ್ ರೆಡ್ಡಿ ಅವರದು. ಪ್ರವೀಣ್ ತೇಜ್, ಪಾಯಲ್, ರವಿಕಾಳೆ, ಮಧು, ಅವಿನಾಶ್, ರೋಲರ್ ರಘು, ಮಧುಮಣಿ, ಮಿಮಿಕ್ರಿ ರಿತೇಶ್, ಕುರಿಬಾಂಡ್ ರಂಗ, ಸಿದ್ದರಾಜ್ ಕಲ್ಯಾಣಕರ್, ಗುರುರಾಜ ಹೊಸಕೋಟೆ, ಅನಂತವೇಲು, ಆಲಿಸಾ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.