ADVERTISEMENT

ಎಲ್ಲದಕ್ಕೂ ಕಾಲ ಕೂಡಿ ಬರಬೇಕು: ಭೈರತಿ ರಣಗಲ್ ಬಗ್ಗೆ ಶಿವಣ್ಣ ಮಾತು

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 0:45 IST
Last Updated 2 ಜೂನ್ 2023, 0:45 IST
ನರ್ತನ್‌, ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌, ನಿವೇದಿತಾ
ನರ್ತನ್‌, ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌, ನಿವೇದಿತಾ   

‘ಜೀವನದಲ್ಲಿ ಎಲ್ಲದಕ್ಕೂ ಕಾಲ ಕೂಡಿಬರಬೇಕು. ‘ಭೈರತಿ ರಣಗಲ್’ಗೆ ಈಗ ಕಾಲ ಕೂಡಿ ಬಂದಿದೆ. ನನ್ನ ಚಿತ್ರರಂಗದ ವೃತ್ತಿ ಬದುಕಿನಲ್ಲಿ ನೆನಪಿಟ್ಟುಕೊಳ್ಳಬೇಕಾದ ನಾಲ್ಕು ಪ್ರಮುಖ ಪಾತ್ರಗಳಲ್ಲಿ ಈ ಪಾತ್ರ ಕೂಡ ಒಂದು’ ಹಾಗಂದವರು ಶಿವರಾಜಕುಮಾರ್.

ಶಿವರಾಜ್‌ಕುಮಾರ್‌ ಈ ಮಾತಿಗೆ ವೇದಿಕೆಯಾಗಿದ್ದು ‘ಮಫ್ತಿ’ ನರ್ತನ್‌ ನಿರ್ದೇಶನದ ‘ಭೈರತಿ ರಣಗಲ್’ ಚಿತ್ರದ ಮುಹೂರ್ತ. ‘ಮಫ್ತಿ’ ಆಗಿ 6 ವರ್ಷ ಅಂತರ ಏಕೆ ಎಂದು ನರ್ತನ್‌ಗೆ ಕೇಳಿದ ಪ್ರಶ್ನೆಗೆ ಶಿವರಾಜ್‌ಕುಮಾರ್‌ ಉತ್ತರಿಸಿದರು. ‘ಬದುಕಿನಲ್ಲಿ ಕೆಲವೊಮ್ಮೆ ಏನೇನೋ ಆಗುತ್ತೆ. ಯಾರಿಗೋ ಕಾಯುತ್ತೇವೆ. ಆದರೆ ಕಾಲ ಕೂಡಿ ಬಂದಾಗ ಎಲ್ಲವೂ ಅದಾಗಿಯೇ ಆಗುತ್ತದೆ. ಯಾರ ಕೈಗೆ ಸೇರಬೇಕೋ ಅವರಿಗೆ ಸೇರುತ್ತದೆ.  ‘ಭೈರತಿ ರಣಗಲ್’ ನಮ್ಮ ಗೀತಾ ಪಿಕ್ಚರ್ಸ್‌ನಿಂದಲೇ ನಿರ್ಮಾಣಮಾಡಬೇಕು ಎಂದು ಮೊದಲೇ ನಿರ್ಧಾರ ಮಾಡಿದ್ದೆವು. ಈಗ ಸಮಯ ಬಂದಿದೆ’ ಎಂದರು.

ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಚಿತ್ರ ನಿರ್ಮಿಸುತ್ತಿದ್ದಾರೆ. ‘ಮಫ್ತಿ’ ಚಿತ್ರದ ಶಿವರಾಜಕುಮಾರ್ ಅವರ ಭೈರತಿ ರಣಗಲ್ ಪಾತ್ರ ಇನ್ನೂ ಎಲ್ಲರ ಮನದಲ್ಲಿದೆ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಇದು ‘ಮಫ್ತಿ’ಯ ಹಿಂದಿನ ಕಥೆ. ಅಂದರೆ ಭೈರತಿ ರಣಗಲ್ ಮೊದಲು ಹೇಗಿದ್ದರು ಎಂಬ ಕಥೆ’ ಎಂದು ನಿರ್ದೇಶಕ ನರ್ತನ್‌ ಮಾಹಿತಿ ನೀಡಿದರು.

ADVERTISEMENT

‘ಅಂದಹಾಗೆ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ವಯಸ್ಸು ಸುಮಾರು 32 ಅಂದುಕೊಳ್ಳಿ. ಎಲ್ಲರೂ ನನ್ನ ಕೈಯಲ್ಲಿ ಲಾಂಗ್‌ ಹಿಡಿಸಲು ಬಯುತ್ತಾರೆ. ಎಲ್ಲ ನಿರ್ದೇಶಕ, ನಿರ್ಮಾಪಕರು ನನ್ನನ್ನು ಕಾಲೇಜು ಹುಡುಗ ಎಂದುಕೊಂಡು ಬಿಟ್ಟಿದ್ದಾರೆ. ನಿರ್ದೇಶಕ, ನಿರ್ಮಾಪಕರು ಹೇಳಿದಂತೆ ನಟ ಕೇಳಬೇಕು’ ಎಂದು ಗೀತಾ ಅವರ ಕಡೆಗೆ ನೋಡಿ ನಕ್ಕರು ಶಿವಣ್ಣ.

ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ‘ಇನ್ನೊಬ್ಬ ಸ್ಟಾರ್‌ ಇರುತ್ತಾರೆ. ಯಾರು ಎಂಬುದನ್ನು ಶೀಘ್ರದಲ್ಲಿಯೇ ಹೇಳುತ್ತೇವೆ. ನಮ್ಮ ರೇಟು, ಡೇಟಿಗೆ ಹೊಂದಿಕೆಯಾಗುವ ನಾಯಕಿ ಸಿಕ್ಕರೆ ಕನ್ನಡದ ನಾಯಕಿಯೇ ಚಿತ್ರದಲ್ಲಿ ಇರುತ್ತಾರೆ’ ಎಂದರು ನರ್ತನ್‌.

‘ಮಫ್ತಿ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸಲು ಒಪ್ಪಿಗೆ ಕೊಟ್ಟಿರಲಿಲ್ಲ. ಕಾರಣ ಚಿತ್ರದಲ್ಲಿ ಅವರ ಕಾಲಾವಧಿ ಕಡಿಮೆ ಇತ್ತು. ಆದರೆ ಕಥೆ ಕೇಳಿ, ಪಾತ್ರದ ವಿವರ ನೋಡಿದಾಗ ಶಿವರಾಜ್‌ಕುಮಾರ್‌ ಈ ಪಾತ್ರ ಮಾಡುವೆ ಎಂದರು. ನಂತರ ನಡೆದಿದ್ದು ಇತಿಹಾಸ. ಆ ಬಳಿಕ ಭೈರತಿ ರಣಗಲ್ ನಮ್ಮ ಸಂಸ್ಥೆಯಿಂದಲೇ ಮಾಡಬೇಕೆಂದು ನಿರ್ಧಾರ ಮಾಡಿದೆವು. ಜೂನ್‌ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದು ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌ ಹೇಳಿದರು.

ನಿವೇದಿತಾ ಶಿವರಾಜಕುಮಾರ್, ಕೆ.ಪಿ.ಶ್ರೀಕಾಂತ್, ಛಾಯಾಗ್ರಹಕ ನವೀನ್ ಕುಮಾರ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.