‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ನಿರ್ದೇಶಕ ಹೇಮಂತ್ ಎಂ. ರಾವ್ ‘ಸೆಂಚುರಿ ಸ್ಟಾರ್’ ಶಿವರಾಜ್‌ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವುದು ಖಚಿತವಾಗಿತ್ತು. ಕಳೆದ ವಾರವಷ್ಟೇ ಸಿನಿಮಾದ ಶೀರ್ಷಿಕೆ ಘೋಷಣೆಯಾಗಿತ್ತು. ಇದೀಗ ಆ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರ ಪಾತ್ರ ಹೇಗಿರಲಿದೆ ಎನ್ನುವ ಫಸ್ಟ್‌ಲುಕ್ ಬಿಡುಗಡೆಯಾಗಿದೆ. 12ನೇ ಶತಮಾನದಲ್ಲಿ ನಡೆಯುವ ಕಾಲ್ಪನಿಕ ಕಥೆಯಲ್ಲಿ ಭೈರವ ಎಂಬ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಹೇಮಂತ್ ತಮ್ಮ ಬರವಣಿಗೆಯ ಶಕ್ತಿಯಿಂದಲೇ ಸಿನಿಮಾಗಳಿಗೆ ಜೀವ ತುಂಬುವವರು. ‘ಭೈರವನ ಕೊನೆ ಪಾಠ’ ಕಥೆ ಹುಟ್ಟಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ‘ಶಿವರಾಜ್‌ಕುಮಾರ್ ಅವರ ಅಭಿಮಾನಿಯಾಗಿ ಅವರ ಸಿನಿಮಾಗಳನ್ನು ನೋಡಿದ್ದೇನೆ. 125ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ಎಲ್ಲ ಮಾದರಿಯ ಪಾತ್ರಗಳನ್ನು ಮಾಡಿದ್ದಾರೆ. ಹೀಗಾಗಿ ಹೊಸತೇನನ್ನಾದರೂ ಸೃಷ್ಟಿಸಬೇಕಿತ್ತು. ನಿರ್ಮಾಪಕ ವೈಶಾಕ್ ಜೊತೆ ಮಾತನಾಡಿದ ಬಳಿಕ ಕಥೆಯ ಎಳೆ ಹೇಳಿದ್ದೆ. ಇದು ಶಿವರಾಜ್‌ಕುಮಾರ್ ಅವರಿಗೆ ಫ್ರೆಶ್ ಆಗಿರುತ್ತದೆ ಎಂದುಕೊಂಡೆವು. ನಾನು ಶೇಕ್ಸ್‌ಪಿಯರ್ ಕಥೆ ಆಧರಿಸಿದ ನಾಟಕಗಳ ಅಭಿಮಾನಿ. ಅವರ ಬರವಣಿಗೆಯ ಪ್ರಭಾವ ನನ್ನ ಮೇಲೆ ಬಹಳಷ್ಟಿದೆ. ಅಲ್ಲಿ ಪಾತ್ರಗಳ ವಿಸ್ತರಣೆ ಕಂಡು ಚಕಿತನಾಗಿದ್ದೆ. ಈ ರೀತಿಯ ಸ್ಪೇಸ್‌ನಲ್ಲಿ ಸಿನಿಮಾ ಮಾಡಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು’ ಎನ್ನುತ್ತಾರೆ ಹೇಮಂತ್.
‘ಕಾಲ್ಪನಿಕ ಆದರೆ ಫ್ಯಾಂಟಸಿ ಅಲ್ಲ’: ಭಿನ್ನ ಲುಕ್‌ನಲ್ಲಿ ಶಿವರಾಜ್‌ಕುಮಾರ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯದಂತಿದೆ ಫಸ್ಟ್‌ಲುಕ್. ಇದಕ್ಕಾಗಿ ಸ್ಟುಡಿಯೊ ಬದಲು ಚಿಕ್ಕಬಳ್ಳಾಪುರದ ಬಳಿಯ ಗುಡಿಬಂಡೆ ಕೋಟೆಯಲ್ಲೇ ಫೊಟೋಶೂಟ್ ನಡೆಸಲಾಗಿತ್ತು. ಇದಕ್ಕಾಗಿ ಶಿವರಾಜ್‌ಕುಮಾರ್ ನೂರಾರು ಮೆಟ್ಟಿಲುಗಳನ್ನು ಹತ್ತಿ ಹೋಗಿದ್ದರು. ‘ಈ ಸಿನಿಮಾ ಕಥೆ 12–13ನೇ ಶತಮಾನದಲ್ಲಿ ನಡೆಯುವಂತಹದ್ದು. ಇದು ಪೂರ್ಣವಾದ ಕಾಲ್ಪನಿಕ ಕಥೆ. ಆದರೆ ‘ಬಾಹುಬಲಿ’ ಸಿನಿಮಾದಂತೆ ಫ್ಯಾಂಟಸಿ ಕಥೆಯಲ್ಲ. ನಮ್ಮ ನಾಡಿನಲ್ಲಿ ನೂರಾರು ರಾಜರು ಆಳ್ವಿಕೆ ನಡೆಸಿದ್ದಾರೆ. ಅವರಲ್ಲಿ ಕೆಲವರ ಕಥೆಯಷ್ಟೇ ನಮಗೆ ತಿಳಿದಿದೆ. ಕೆಲವರು ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದಾರೆ. ‘ಭೈರವನ ಕೊನೆ ಪಾಠ’ ಒಂದು ರಾಜನ ಕಥೆಯಲ್ಲ, ಬದಲಾಗಿ ಅದು ಒಂದು ಸಾಮ್ರಾಜ್ಯದ ಕಥೆ’ ಎಂದು ಹೇಮಂತ್ ವಿವರಿಸಿದರು.
‘ಸದ್ಯ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಹಂತ ಹಂತವಾಗಿ ಕಲಾವಿದರನ್ನು ಪರಿಚಯಿಸಲಾಗುವುದು. ಸಿನಿಮಾದಲ್ಲಿ ಸೆಟ್ ಹಾಗೂ ಗ್ರಾಫಿಕ್ಸ್ ಪ್ರಮುಖವಾಗಿರಲಿದೆ. ದೊಡ್ಡ ಪ್ರಮಾಣದಲ್ಲಿ ಸೆಟ್ ಕೆಲಸಗಳು ನಡೆಯಬೇಕಿದೆ. ಇದು ದೊಡ್ಡ ಸ್ಕೇಲ್‌ನ ಸಿನಿಮಾ. ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಬೇರೆ ಭಾಷೆಯ ಕಲಾವಿದರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ’ ಎಂದು ತಿಳಿಸಿದರು.
‘ಚಿತ್ರ ಅದ್ದೂರಿಯಾಗಿ ಮೂಡಿಬರಲಿದೆ. ಸೆಟ್‌ಗಳು, ಸ್ಥಳಗಳು ಎಲ್ಲವನ್ನೂ ದೊಡ್ಡದಾಗಿ ಪ್ಲ್ಯಾನ್ ಮಾಡಲಾಗಿದೆ’ ಎಂದಿದ್ದಾರೆ ಚಿತ್ರದ ನಿರ್ಮಾಪಕ ಡಾ.ವೈಶಾಕ್ ಜೆ. ಗೌಡ.
1986ರಲ್ಲಿ ‘ಆನಂದ್’ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಕಾಲಿಟ್ಟ ಶಿವರಾಜ್‌ಕುಮಾರ್, ಸದ್ಯ ಚಂದನವನದಲ್ಲಿ 38 ವರ್ಷ ಪೂರೈಸಿ ಮುನ್ನಡೆಯುತ್ತಿದ್ದಾರೆ. 125ನೇ ಸಿನಿಮಾ ಪೂರೈಸಿದ ಸಂಭ್ರಮದಲ್ಲಿರುವ ಶಿವರಾಜ್‌ಕುಮಾರ್ ಅವರ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ ನೋಡಿದರೆ ಅವರ ವಯಸ್ಸು ಮರೆಯಾಗುತ್ತದೆ. 2023ರಲ್ಲಿ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಶಿವರಾಜ್‌ಕುಮಾರ್ ತೆಲುಗಿನಲ್ಲೂ ಒಂದು ಸಿನಿಮಾ ಮಾಡುತ್ತಿದ್ದಾರೆ.
ಸದ್ಯ ಗೀತಾ ಪಿಕ್ಚರ್ಸ್ ಲಾಂಛನದಡಿ ನಿರ್ಮಾಣವಾಗಿರುವ ‘ಭೈರತಿ ರಣಗಲ್’, ಅರ್ಜುನ್ ಜನ್ಯ ನಿರ್ದೇಶನದ ‘45’, ಧನಂಜಯ ಅವರ ಜೊತೆಗೆ ‘ಉತ್ತರಕಾಂಡ’ ಸಿನಿಮಾಗಳು ಶಿವರಾಜ್‌ಕುಮಾರ್ ಕೈಯಲ್ಲಿವೆ. ‘ಉತ್ತರಕಾಂಡ’ದ ‘ಮಾಲೀಕ’ನ ಪರಿಚಯವೂ ಅಭಿಮಾನಿಗಳಿಗೆ ದೊರಕಿದೆ. ‘ಭೈರತಿ ರಣಗಲ್’ ಟೀಸರ್ ಜನ್ಮದಿನದಂದು ಬಿಡುಗಡೆಯಾಗಲಿದೆ. ಈ ಸಿನಿಮಾಗಳು ಕ್ರಮವಾಗಿ ತೆರೆಗೆ ಬರುವ ಸಾಧ್ಯತೆ ಇದೆ. ಶಿವರಾಜ್‌ಕುಮಾರ್ ಅವರ 131ನೇ ಸಿನಿಮಾಗೆ ತೆಲುಗಿನ ಕಾರ್ತಿಕ್ ಅದ್ವೈತ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದರ ಫಸ್ಟ್‌ಲುಕ್ ಜುಲೈ 12ರ ಸಂಜೆ ಬಿಡುಗಡೆಯಾಗಲಿದೆ. ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ, ನಂದಕಿಶೋರ್ ಆ್ಯಕ್ಷನ್ ಕಟ್ ಹೇಳಲಿರುವ ‘ಶಿವಗಣ’ವೂ ಘೋಷಣೆಯಾಗಿದೆ. ಇದರಲ್ಲಿ ಶಿವರಾಜ್‌ಕುಮಾರ್ ಹಾಗೂ ಗಣೇಶ್ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. ಇದಾದ ಬಳಿಕ ಶಿವರಾಜ್‌ಕುಮಾರ್ ‘ಟಗರು–2’ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ.
ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟಿಸುತ್ತಿರುವ, ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ ‘45’ ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ‘ಬಹುಕೋಟಿ ವೆಚ್ಚದಲ್ಲಿ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಸದ್ಯದಲ್ಲೇ ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶಗಳ ಚಿತ್ರೀಕರಣ 30 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ. ಇಷ್ಟು ದಿನಗಳ ಕಾಲ ಅಪಾರ ವೆಚ್ಚದಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿರುವುದು ಕನ್ನಡದಲ್ಲಿ ಇದೇ ಮೊದಲಿರಬಹುದು’ ಎಂದಿದೆ ಚಿತ್ರತಂಡ.
45 ಸಿನಿಮಾದ ಬಗ್ಗೆ ಮಾತನಾಡಿರುವ ಶಿವರಾಜ್‌ಕುಮಾರ್, ‘ಜನ್ಮದಿನ ಎನ್ನುವುದು ತಂದೆ ತಾಯಿ ನಮಗೆ ನೀಡಿರುವ ಗಿಫ್ಟ್. ಅವರಿಗೆ ನಾವು ಯಾವಾಗಲೂ ಚಿರಋಣಿಯಾಗಿರಬೇಕು. ಇಂದು ನನ್ನ ಅರವತ್ತೆರಡನೇ ಜನ್ಮದಿನ. ಇಷ್ಟು ವರ್ಷಗಳಿಂದ ಸಾವಿರಾರು ಅಭಿಮಾನಿಗಳು ನಮ್ಮ ಮನೆಗೆ ಬಂದು ನನ್ನ ಜನ್ಮದಿನವನ್ನು ಸಂಭ್ರಮಿಸಿದ್ದೀರಿ. ಈ ಸಲದ ಜನ್ಮದಿನಕ್ಕೆ ನಾನು ನಿಮಗೊಂದು ಸ್ಪೆಷಲ್ ಗಿಫ್ಟ್ ಕೊಡಲಿದ್ದೇನೆ. ಅದೇನೆಂದರೆ ‘45’ ಚಿತ್ರದ ನನ್ನ ಫಸ್ಟ್‌ಲುಕ್ ರಿಲೀಸ್ ಆಗಲಿದೆ’ ಎಂದಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ.
‘ಅಭಿಮಾನಿಗಳ ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಜನ್ಮದಿನದಂದು ಅಭಿಮಾನಿಗಳ ಜೊತೆ ಇರಲು ಸಾಧ್ಯವಾಗುವುದಿಲ್ಲ. ವರ್ಷವಿಡೀ ಒಟ್ಟಿಗೆ ಪ್ರತಿದಿನ ಸೆಲೆಬ್ರೇಟ್ ಮಾಡೋಣ’ ಎಂದು ‘ಎಕ್ಸ್’ನಲ್ಲಿ ಶಿವರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ.
ಅಪ್ಪಾಜಿ ಈ ರೀತಿಯ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ಭೈರವ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಹೇಮಂತ್ ಎಂ ರಾವ್ ಮತ್ತು ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆಶಿವರಾಜ್ಕುಮಾರ್ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.