ಸಿನಿಮಾ ಪ್ರಚಾರ ಎಂದರೆ ಬೆಂಗಳೂರು... ಬೆಂಗಳೂರು ಎಂದರೆ ಸಿನಿಮಾ ಪ್ರಚಾರ ಅನ್ನುವ ಕಾಲವೊಂದಿತ್ತು. ಆದರೆ ಇದೀಗ ಬೆಣ್ಣದೋಸೆ ನಗರಿ ದಾವಣಗೆರೆಯೂ ಸಿನಿಮಾ ಪ್ರಚಾರ ತಂಡಗಳಿಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ದಶಕದಿಂದ ಈಚೆಗೆ ವರ್ಷಕ್ಕೆ ಐದಾರು ಸಿನಿಮಾ ತಂಡಗಳು ದಾವಣಗೆರೆಯಲ್ಲಿ ಪ್ರಚಾರ ಮಾಡುತ್ತಿದ್ದವು. ಆದರೆ ಇದೀಗ ಆ ಸಂಖ್ಯೆ ಶೇಕಡಾ ಐದಾರುಪಟ್ಟು ಹೆಚ್ಚಾಗಿದೆ. ಫೆ. 2019ರಿಂದ ಫೆ. 2020ರ ವರೆಗೆ 25 ಸಿನಿಮಾ ತಂಡಗಳು ಬೆಣ್ಣದೋಸೆ ನಗರಿಗೆ ಬಂದು ಪ್ರಚಾರ ನಡೆಸಿವೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಬೆಣ್ಣದೋಸೆ ನಗರಿಗೆ ಬಂದು ತಮ್ಮ ನಿರ್ದೇಶನದ ಸಿನಿಮಾ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’
ಬಗ್ಗೆ ಪ್ರಚಾರ ಮಾಡಿದ್ದರು.
ಮೊದಲು ದಾವಣಗೆರೆ ಕಂಪನಿ ನಾಟಕಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಕಾಲ ಕಳೆದಂತೆ ಹಲವು ನಾಟಕ ಕಂಪನಿಗಳು ಮುಚ್ಚಿದವು. ಈಗ ಒಂದೆರೆಡು ನಾಟಕ ಕಂಪನಿಗಳು ಇವೆ.ಇತ್ತ ನಾಟಕಗಳನ್ನು ನೋಡುವವರ ಸಂಖ್ಯೆ ಇಳಿಮುಖವಾದಂತೆ ಅತ್ತ ಸಿನಿಮಾ ವೀಕ್ಷಕರ ಸಂಖ್ಯೆ ಹೆಚ್ಚಾಗತೊಡಗಿತು. ಥಿಯೇಟರ್‌ಗಳು ತುಂಬಿ ತುಳುಕುತ್ತಿದ್ದವು.
‘ಕನ್ನಡ ಚಲನಚಿತ್ರದ ಶಕ್ತಿ ಕೇಂದ್ರ ದಾವಣಗೆರೆ ಎನ್ನುವುದು ಅತಿಶಯೋಕ್ತಿ ಅಲ್ಲ. ಏಕೆಂದರೆ ಇಲ್ಲಿ ಕನ್ನಡ ಸಿನಿಮಾ ಅಭಿಮಾನಿಗಳ ಸಂಖ್ಯೆ ಬಹಳ ದೊಡ್ಡದಿದೆ. ಹೀಗಾಗಿ ಸಿನಿಮಾ ಪ್ರಚಾರಕ್ಕೆದಾವಣಗೆರೆ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ಸಿನಿಮಾ ಕಲೆಕ್ಷನ್ ಚೆನ್ನಾಗಿ ಆಗಿದೆ ಎಂದರೆ ಆ ಚಿತ್ರ ಯಶಸ್ವಿಯಾಯಿತು ಎಂದು ನಿರ್ಧರಿಸುತ್ತಾರೆ. ಇದೀಗ ಅಮೆಜಾನ್, ನೆಟ್‌ಫ್ಲಿಕ್ಸ್‌ನಿಂದಾಗಿ ಸಿನಿಮಾ ನೋಡುಗರ ಸಂಖ್ಯೆ ದಾವಣಗೆರೆಯಲ್ಲೂ ಕಡಿಮೆ ಆಗುತ್ತಿದೆ’ ಎನ್ನುತ್ತಾರೆದಾವಣಗೆರೆ ಚಲನಚಿತ್ರ ಪ್ರತಿನಿಧಿಮಂಜುನಾಥ ಪಿ.ಎಚ್.
ನಗರದ ಗಾಜಿನ ಮನೆಯಲ್ಲಿ ಮೊದಲ ಬಾರಿಗೆ ‘ನೋಟಗಾರ’ ಚಲನಚಿತ್ರದ ಹಾಡಿನ ಶೂಟಿಂಗ್ ನಡೆದಿದೆ.ಮಂಜು ಹೆದ್ದೂರ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಗೀತೆ ದೃಶ್ಯಾವಳಿಯನ್ನು ಮದನ್, ಹರಿಣಿ ನೃತ್ಯ ಸಂಯೋಜನೆಯಲ್ಲಿ ಕ್ಯಾಮೆರಾ ಮ್ಯಾನ್ ಎಂ.ಬಿ. ಅಳ್ಳಿಕಟ್ಟಿ ಸೆರೆ ಹಿಡಿದಿದ್ದರು. ದಾವಣಗೆರೆಯವರೇ ಆದ ಎ.ಎಚ್. ಪರಮೇಶಿ, ಹರ್ಷ ಬೆಳ್ಳೂಡಿ ಚಿತ್ರದ ನಿರ್ಮಾಪಕರಾಗಿದ್ದರು.
ಪ್ರಚಾರ ಮಾಡಿದ ಸಿನಿಮಾ ತಂಡಗಳು: ಇಂಡಿಯಾ ವರ್ಸಸ್ ಇಂಗ್ಲೆಂಡ್, ಕಿಸ್, ಮುಂದಿನ ನಿಲ್ದಾಣ, ನೋಟಗಾರ, ಜಬಾರ್, ರಾಜಲಕ್ಷ್ಮೀ, ಥರ್ಡ್ ಕ್ಲಾಸ್, ಭಾನು ವೆಡ್ಸ್ ಭೂಮಿ, ಜರ್ಸಿ, ಗಡಿನಾಡು, ಆನೆಬಲ, ಕಾಣದಂತೆ ಮಾಯವಾದನು, ನಾವೆಲ್ರೂ ಆಫ್ ಬಾಯ್ಲ್ಡ್, ಬಿಲ್‌ಗೇಟ್ಸ್, ತುಂಡ್ ಹೈಕ್ಳು ಸಹವಾಸ, ಹಫ್ತಾ, ವೀಕೆಂಡ್, ಪಡ್ಡೆಹುಲಿ, ಗಿರ್‌ಗಿಟ್ಲೆ, ಪಂಚತಂತ್ರ, ಮನರೂಪ ಸಿನಿಮಾ ತಂಡಗಳು ಗಾಜಿನ ಮನೆ ನಗರಿಯಲ್ಲಿ ಪ್ರಚಾರ ಮಾಡಿವೆ.
ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ಆಡಿಯೊ ಬಿಡುಗಡೆ ದಾವಣಗೆರೆಯ ಸರ್ಕಾರಿ ಮೈದಾನದಲ್ಲಿ 2016ರ ಡಿಸೆಂಬರ್ 25ರಂದು ನಡೆದಿತ್ತು. 2019 ಮಾರ್ಚ್ 3ರಂದು ನಟ ಪುನೀತ್ ರಾಜ್‌ಕುಮಾರ್ ದಾವಣಗೆರೆಗೆ ಬಂದು ರೋಡ್ ಷೋ ಮೂಲಕ ‘ನಟಸಾರ್ವಭೌಮ‘ ಚಿತ್ರದ ಪ್ರಚಾರ ಮಾಡಿದ್ದರು. ನಟ–ನಟಿಯರು, ಸಿನಿಮಾ ಪ್ರೊಮೋಷನ್ಸ್ ನಡೆದಾಗಲೆಲ್ಲ, ಊರ ತುಂಬಾ ಫ್ಲೆಕ್ಸ್, ಬ್ಯಾನರ್‌ಗಳಿರುತ್ತವೆ. ಸುದೀಪ್, ದರ್ಶನ್, ಪುನೀತ್, ಶಿವರಾಜ್‌ಕುಮಾರ್, ಯಶ್ ಸೇರಿ ತಮ್ಮ ನೆಚ್ಚಿನ ನಟನ ಸಿನಿಮಾ ಬಂದಾಗ ಅವರ ಅಭಿಮಾನಿಗಳ ಸಂಘಗಳು ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿಸುವುದು ಸಂಪ್ರದಾಯವಾಗಿಬಿಟ್ಟಿದೆ.
ವಿಭಿನ್ನ ಸಂಭ್ರಮಾಚರಣೆ: ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರ ಬಿಡುಗಡೆಯಾದಾಗ ದಾವಣಗೆರೆಯ ಸುದೀಪ್ ಅಭಿಮಾನಿ ಸಂಘ ಪೈಲ್ವಾನ್‍ಗಳನ್ನು ಸನ್ಮಾನ ಮಾಡುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದ್ದರು. ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅವರು ನಟಿಸಿದ‘ದಿ ವಿಲನ್’ ಸಿನಿಮಾ ತೆರೆ ಕಂಡಾಗ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ಕೋಣ, ಕುರಿಯನ್ನು ಬಲಿ ಕೊಟ್ಟು, ರಕ್ತಾಭಿಷೇಕ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.