ಮುಂಬೈ: ‘ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ‘ಕೊಲ್ಲುವ ಉದ್ದೇಶದಿಂದಲೇ’ ಅವರ ನಿವಾಸದತ್ತ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡು ಹಾರಿಸಿದ್ದ ಆರೋಪದಡಿ ವಿಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಎಂಬವರನ್ನು ಪೊಲೀಸರು ಸೋಮವಾರ ತಡರಾತ್ರಿ ಗುಜರಾತ್‌ನಲ್ಲಿ ಬಂಧಿಸಿದ್ದಾರೆ. ಇಬ್ಬರೂ ಬಿಹಾರದವರು.
ಗುಜರಾತ್‌ನ ಕಛ್ ಜಿಲ್ಲೆಯ ಮಾತಾ ನೊ ಮದ್ ಗ್ರಾಮದಲ್ಲಿ ಆರೋಪಿಗಳನ್ನು ರಾತ್ರಿ ಬಂಧಿಸಿದ್ದು, ಮುಂಬೈನಲ್ಲಿ ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಪ್ರಕಾರ, ಗುಪ್ತಾ ಬೈಕ್ ಚಾಲನೆ ಮಾಡುತ್ತಿದ್ದರೆ, ಹಿಂಬದಿ ಸವಾರನಾಗಿದ್ದ ಸಾಗರ್, ನಟನ ಮನೆಯನ್ನು ಗುರಿಯಾಗಿಸಿ ಗುಂಡು ಹಾರಿಸಿದ್ದರು.
ಕೃತ್ಯವನ್ನು ಎಸಗುವ ಮೊದಲ ಆರೋಪಿಗಳು ಸಲ್ಮಾನ್ ಖಾನ್ ನಿವಾಸದ ಬಳಿ ಮೂರು ಬಾರಿ ಸುತ್ತಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ಹಿಂದಿನ ಸಂಚು ಪತ್ತೆಗೆ ಇಬ್ಬರನ್ನೂ 14 ದಿನ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಮನವಿ ಮಾಡಿದರು. ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಲ್.ಎಸ್.ಪಾಡೆನ್ ಅವರು ಏ.25ರವರೆಗೂ ಆರೊಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಿದರು.
ವಶಕ್ಕೆ ನೀಡುವಂತೆ ಕೋರಿ ಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ಪೊಲೀಸರು, ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲಲೆಂದೇ ಇಬ್ಬರೂ ಸಲ್ಮಾನ್ ನಿವಾಸದತ್ತ ಗುಂಡು ಹಾರಿಸಿದ್ದರು ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ಇಬ್ಬರೂ ತಾವೇ ಗುಂಡಿನ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸಲ್ಮಾನ್ ಖಾನ್ ಹೊರತುಪಡಿಸಿ ಬೇರೆ ಪ್ರಮುಖರ ಕೊಲೆಗೂ ಸಂಚು ನಡೆಸಿದ್ದರಾ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಹೀಗಾಗಿ, ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಕೋರಿದ್ದರು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ),120–ಬಿ (ಕ್ರಿಮಿನಲ್ ಸಂಚು), 34 (ಒಂದೇ ಉದ್ದೇಶದಿಂದ ಕೃತ್ಯ ಎಸಗಲು ಹಲವರು ಒಟ್ಟುಗೂಡಿರುವುದು)ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸಂಬಂಧಿತ ಸೆಕ್ಷನ್ ಅನ್ವಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಭಾನುವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಮುಂಬೈನ ಬಾಂದ್ರಾದಲ್ಲಿರುವ, ನಟ ಸಲ್ಮಾನ್ ಖಾನ್ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರು. ಬಳಿಕ ಬೈಕ್ ಅನ್ನು ಮೌಂಟ್ ಮೇರಿ ಚರ್ಚ್ ಬಳಿ ಬಿಟ್ಟು ಪರಾರಿಯಾಗಿದ್ದರು.
‘ಕೃತ್ಯವು ಗ್ಯಾಂಗ್‌ಸ್ಟರ್ ಸಹೋದರಅನ್ಮೋಲ್ ಬಿಷ್ಣೋಯ್ ಪಾತ್ರ‘ ಮುಂಬೈ: ‘ಗುಂಡಿನ ದಾಳಿ ಕೃತ್ಯದ ಹೊಣೆ ಹೊತ್ತು ಈಗ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಮ್ಮ ಅನ್ಮೋಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಸದ್ಯ ಮೇಲ್ನೋಟಕ್ಕೆ ಈ ಕೃತ್ಯದಲ್ಲಿ ಅನ್ಮೋಲ್ ಬಿಷ್ಣೋಯ್ ಪಾತ್ರ ಇರುವ ಶಂಕೆಯು ಮೂಡಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ವಿವರಿಸಿದ್ದಾರೆ. ‘ಪ್ರಾಥಮಿಕ ತನಿಖೆ ಪ್ರಕಾರ ಆರೋಪಿಗಳಾದ ಸಾಗರ್ ಮತ್ತು ವಿಕಿ ಇಬ್ಬರನ್ನೂ ಈ ಕೃತ್ಯ ಎಸಗಲು ಲಾರೆನ್ಸ್ ಬಿಷ್ಣೋಯ್ ನೇತೃತ್ವದ ತಂಡ ನಿಯೋಜಿಸಿತ್ತು’ ಎಂದು ಐಜಿಪಿ ಮಹೇಂದ್ರ ಬಗಾಡಿಯಾ ಹೇಳಿದರು. ಸಾಗರ್ ಎಂಬಾತ ಸಲ್ಮಾನ್ ನಿವಾಸದತ್ತ ಗುಂಡು ಹಾರಿಸಿದ್ದ. ವಿಕಿ ಎಂಬಾತ ಗ್ಯಾಂಗ್‌ನ ಸದಸ್ಯರ ಜೊತೆ ಸಂಪರ್ಕದಲ್ಲಿದ್ದ ಎಂದು ಅವರು ವಿವರಿಸಿದ್ದಾರೆ. ಗುಂಡಿನ ದಾಳಿ ಬಳಿಕ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಕೃತ್ಯದ ಹೊಣೆ ಹೊತ್ತಿಕೊಂಡಿದ್ದ. ತನಿಖೆಯಲ್ಲಿ ಉಲ್ಲೇಖಿತ ಖಾತೆಯನ್ನು ವಿದೇಶಿ ನೆಲದಿಂದ ನಿರ್ವಹಣೆ ಮಾಡಲಾಗುತ್ತಿದೆ ಎಂಬುದು ತಿಳಿದುಬಂದಿತ್ತು ಎಂದು ಪೊಲೀಸರು ರಿಮಾಂಡ್ ನೋಟ್‌ನಲ್ಲಿ ಕೋರ್ಟ್‌ಗೆ ತಿಳಿಸಿದ್ದಾರೆ. ಆರೋಪಿಗಳು ಫೇಸ್‌ಬುಕ್ ಖಾತೆ ನಿರ್ವಹಣೆಗೆ ಬಳಿಸಿದ್ದ ಐ.ಪಿ (ಇಂಟರ್‌ನೆಟ್ ಪ್ರೊಟೊಕಾಲ್) ವಿಳಾಸದ ಮೂಲ ಪೋರ್ಚುಗಲ್ ಆಗಿದೆ. ಈ ಬಗ್ಗೆಯೂ ತನಿಖೆಯು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.