ADVERTISEMENT

ದ.ಭಾ ಕಿರುಚಿತ್ರಗಳ ಉತ್ಸವ: ಕನ್ನಡದ ಜಿಪಿಎಸ್‌, ಮಲಯಾಳದ ನೂರಾಗೆ ಪ್ರಶಸ್ತಿ

ಸ್ಮೈಫಾದಲ್ಲಿ ತಾರಾಮೇಳ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 12:37 IST
Last Updated 3 ಸೆಪ್ಟೆಂಬರ್ 2019, 12:37 IST
ಮಲಯಾಳದ ‘ನೂರಾ’ ಕಿರುಚಿತ್ರದಲ್ಲಿನ ನಟನೆಗಾಗಿ ಬಾಲ ನಟ ಅತುಲ್‌ ಕೃಷ್ಣಗೆ ಸ್ಮೈಫಾದಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕನ್ನಡದ ಹಿರಿಯ ನಟ ಸಿಹಿಕಹಿ ಚಂದ್ರು, ನಟಿ ಭಾವನಾ ರಾವ್‌, ಅವಿನಾಶ್‌ ಪ್ರದಾನ ಮಾಡಿದರು.
ಮಲಯಾಳದ ‘ನೂರಾ’ ಕಿರುಚಿತ್ರದಲ್ಲಿನ ನಟನೆಗಾಗಿ ಬಾಲ ನಟ ಅತುಲ್‌ ಕೃಷ್ಣಗೆ ಸ್ಮೈಫಾದಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕನ್ನಡದ ಹಿರಿಯ ನಟ ಸಿಹಿಕಹಿ ಚಂದ್ರು, ನಟಿ ಭಾವನಾ ರಾವ್‌, ಅವಿನಾಶ್‌ ಪ್ರದಾನ ಮಾಡಿದರು.   

ಬೆಂಗಳೂರಿನ ಶೆರಟಾನ್‌ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತದ ಕಿರುಚಿತ್ರಗಳ ಉತ್ಸವ ಸ್ಮೈಫಾದಲ್ಲಿ(ಸ್ಟೋನ್ಡ್ ಮಂಕಿ ಇಂಟರ್‌ನ್ಯಾಷನಲ್ ಫಿಲಂ ಅವಾರ್ಡ್ ಫಾರ್ ಶಾರ್ಟ್ಸ್‌) ಕನ್ನಡದ ‘ಜಿಪಿಎಸ್‌’ ಮತ್ತು ಮಲಯಾಳದ ‘ನೂರಾ’ ಕಿರುಚಿತ್ರಗಳು ಪ್ರಶಸ್ತಿಗಳನ್ನು ಬಾಚಿಕೊಂಡವು.

ಕನ್ನಡ ಕಿರುಚಿತ್ರ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶಕ ರಘುನಂದನ್ ಕಾನಡ್ಕ (ಕಿರುಚಿತ್ರ: ಜಿಪಿಎಸ್‌),ಅತ್ಯುತ್ತಮ ನಟ ಗೋಪಾಲಕೃಷ್ಣ ದೇಶಪಾಂಡೆ (ಜಿಪಿಎಸ್‌), ಅತ್ಯುತ್ತಮ ನಟಿ ಶ್ವೇತಾ ಶ್ರೀನಿವಾಸ್‌ (ಗಂಗಾ), ಪಾರವ್ವ (ಲಚ್ಚವ್ವ)ಪ್ರಶಸ್ತಿ ಪಡೆದುಕೊಂಡರು.

ಅತ್ಯುತ್ತಮ ಕಿರುಚಿತ್ರವಾಗಿ ‘ಲಚ್ಚವ್ವ’ ಮತ್ತು ವಿಮರ್ಶಕರ ಅತ್ಯುತ್ತಮ ಕಿರುಚಿತ್ರವಾಗಿ ‘ಮಹಾನ್ ಹುತಾತ್ಮ’ ವಿಶೇಷ ಪ್ರಶಸ್ತಿಗೆ ಭಾಜನವಾದವು.

ADVERTISEMENT

ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ವಿಶಾಖ್ ರಾಮ್‍ಪ್ರಸಾದ್ (ಅನಾವರಣ),ಅತ್ಯುತ್ತಮ ಛಾಯಾಗ್ರಾಹಕರಾಗಿ ಅರ್ಜುನಶೆಟ್ಟಿ (ಆವರ್ತ) ಹಾಗೂ ಕಾರ್ತಿಕ್ ಬಿ.ಮಳ್ಳೂರ್ (ರೈತ), ಅತ್ಯುತ್ತಮ ಪೋಷಕ ನಟನೆಗೆ ಸಂಧ್ಯಾ ಅರಕೆರೆ (ಗಂಗಾ), ಅತ್ಯುತ್ತಮ ಸಂಕಲನ ಮನು ಅನುರಾಮ್‌ (ನಗುವ ನಯನ), ಅತ್ಯುತ್ತಮ ಸಂಗೀತ ನಿರ್ದೇಶಕ ವಿಶಾಖ್‌ ರಾಮಪ್ರಸಾದ್‌ (ಅನಾವರಣ)ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಮಲಯಾಳದ ‘ನೂರಾ’ ಕಿರುಚಿತ್ರಕ್ಕೆಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯ ಲಭಿಸಿತು. ಈ ಸಿನಿಮಾದಲ್ಲಿ ನಟಿಸಿರುವ ಬಾಲನಟ ಅತುಲ್‌ ಕೃಷ್ಣಗೆ ಅತ್ಯುತ್ತಮ ನಟ, ನಿರ್ದೇಶಕ ನವಾಜ್‌ ಸಲಾಂಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಶ್ರೀಜಿತ್‌ ರವಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು.

ಅತ್ಯುತ್ತಮ ಛಾಯಾಗ್ರಹಣ ದರ್ಶನ್‌ ರಾಮಕೃಷ್ಣ, ಅತ್ಯುತ್ತಮ ಸಂಕಲನ ಸುಜಿತ್‌ ಸಹದೇವ್‌, ಅತ್ಯುತ್ತಮ ಸಂಗೀತ ವಿಮಲಿತ್‌ ವಿಜಯನ್‌ಗೆ ಪ್ರಶಸ್ತಿ ನೀಡಲಾಯಿತು.

ಸ್ಮೈಫಾ ಅವಾರ್ಡ್‍ಗೆ260ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರವೇಶ ಪಡೆದಿದ್ದವು.ಅದರಲ್ಲಿ 40 ಶ್ರೇಷ್ಠ ಪ್ರತಿಭಾವಂತರನ್ನು ಗುರುತಿಸಿ, ಗೌರವಿಸಲಾಯಿತು.ಅತ್ಯುತ್ತಮ ನಟ, ನಟಿ, ಸಂಗೀತ ನಿರ್ದೇಶಕರ, ಛಾಯಾಗ್ರಹಣ, ನಿರ್ದೇಶಕ, ಪೋಷಕ ನಟ, ಎಡಿಟರ್ ಹೀಗೆ ಹಲವು ವಿಭಾಗಗಳಲ್ಲಿ ಕಿರುಚಿತ್ರಗಳಲ್ಲಿ ಕೆಲಸ ಮಾಡಿದ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲೆಯಾಳದ ಪ್ರತಿಭಾವಂತರನ್ನು ಗೌರವಿಸಲಾಯಿತು.

ಸ್ಮೈಫಾ ಅವಾರ್ಡ್‌ ಅಧ್ಯಕ್ಷ ಡಾ.ಸಾಯಿ ಅಶ್ಲೇಷ್ ಈ ಮೂರನೇ ಕಿರುಚಿತ್ರ ಪ್ರಶಸ್ತಿ ಕಾರ್ಯಕ್ರಮ ಆಯೋಜಿಸಿದ್ದರು. ಕನ್ನಡದ ಕೃಷ್ಣ ಕ್ರಿಯೇಷನ್‍ನ ಕೃಷ್ಣ ಸಾರ್ಥಕ್ ಇದಕ್ಕೆ ಕೈಜೋಡಿಸಿದ್ದರು.

ತಾರಾಮೇಳ:

ಸಿನಿಮಾ ರಂಗದ ಪ್ರತಿಭಾವಂತರಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಪದ್ಧತಿ ಬಹಳ ವರ್ಷಗಳಿಂದಲೂ ಇದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಕಿರು ಚಿತ್ರಗಳನ್ನು ಪ್ರೋತ್ಸಾಹಿಸುವ ಕೆಲಸಗಳೂ ನಡೆಯುತ್ತಿವೆ.

ಸ್ಮೈಫಾ ಸಂಸ್ಥೆ ಪ್ರತಿಭಾವಂತರನ್ನು ಗುರುತಿಸಿ, ಪ್ರಶಸ್ತಿ ಪುರಸ್ಕಾರ ನೀಡಲು ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ತಾರೆಗಳ ಮೇಳವೇ ಇತ್ತು.

ರೋರಿಂಗ್‌ ಸ್ಟಾರ್‌ ಶ್ರೀಮುರಳಿ, ನಟ ಶರಣ್, ನಿರ್ಮಾಪಕ ಕರಿಸುಬ್ಬು, ಭರಾಟೆ ನಿರ್ದೇಶಕ ಚೇತನ್‍ಕುಮಾರ್, ವಿನಯ್ ಭಾರದ್ವಾಜ್, ನಟಿಯರಾದ ರಾಧಿಕಾ ಚೇತನ್, ಭಾವನರಾವ್, ಪತ್ರಕರ್ತ ಜೋಗಿ ಹಾಗೂ ತಮಿಳು, ಮಲಯಾಳ, ತೆಲುಗು ಚಿತ್ರರಂಗದ ಪ್ರಮುಖರು ಸೇರಿದಂತೆ ಹಲವಾರುಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು.

‘ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಕಥೆ ಹೇಳುವುದು ತುಂಬ ಕಷ್ಟದ ಕೆಲಸ. ಅಂತಹ ಕಷ್ಟದ ಕೆಲಸವನ್ನು ನಿರ್ವಹಿಸಿದ ಎಲ್ಲಾ ಪ್ರತಿಭಾವಂತರಿಗೆ ಚಿತ್ರರಂಗದಲ್ಲಿ ಭವಿಷ್ಯ ಸಿಗಲಿ. ಕಿರುಚಿತ್ರಗಳಿಂದ ಒಳ್ಳೆಯ ಪ್ರತಿಭೆಗಳು ಉದಯಿಸಲಿ’ ಎಂದು ಹಾರೈಸಿದರು.

‘ಈ ಸಂಸ್ಥೆ ಇನ್ನೂ ಹೆಚ್ಚು ಹೆಚ್ಚು ಪ್ರತಿಭಾವಂತರನ್ನು ಗುರುತಿಸಿ, ಪ್ರಶಸ್ತಿಗಳನ್ನು ನೀಡುವಂತಾಗಲಿ. ಇಲ್ಲಿರುವರೆಲ್ಲರೂ ಭವಿಷ್ಯದ ನಿರ್ದೇಶಕರು, ಸ್ಟಾರ್‌ಗಳು. ಇಂತಹವರಿಗೆ ಪ್ರಶಸ್ತಿ ನೀಡುತ್ತಿರುವ ಸ್ಮೈಫಾ ಸಂಸ್ಥೆಗೆ ನಮ್ಮ ಬೆಂಬಲ ಸದಾ ಇರುತ್ತದೆ’ ಎಂದು ‌ಶ್ರೀಮುರಳಿ ಹೇಳಿದರು. ನಟರಾದ ಸಿಹಿಕಹಿ ಚಂದ್ರು, ಅವಿನಾಶ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.