ಹುಬ್ಬಳ್ಳಿ: ಲಾಕ್‌ಡೌನ್ ಇದೆ. ಮನೆಯಲ್ಲಿದ್ದುಕೊಂಡೇ ‘ಶತ್ರು ಸೈನಿಕ ಕೊರೊನಾ’ ವಿರುದ್ಧ ಯುದ್ಧ ಗೆಲ್ಲಬೇಕಿರುವುದು ಅನಿವಾರ್ಯ. ಮನೆಯಲ್ಲಿ ತಮ್ಮ ಪಾಡಿಗೆ ತಾವಿರುವ ವರ್ಗ ಒಂದೆಡೆಯಾದರೆ ಸಾಧ್ಯವಾದಷ್ಟು ಇನ್ನೊಬ್ಬರಿಗೆ ನೆರವಿನ ಹಸ್ತ ಚಾಚುವವರು ಇನ್ನೊಂದು ವರ್ಗ.
ಈ ಎರಡೂ ವರ್ಗಗಳನ್ನು ಪ್ರತಿನಿಧಿಸುವ ಅಂಶಗಳನ್ನಿಟ್ಟುಕೊಂಡು ‘ನೋ ಥ್ಯಾಂಕ್ಸ್’ ಎಂಬ ಮೂರುವರೆ ನಿಮಿಷಗಳ ಕಿರುಚಿತ್ರ ಸಿದ್ಧಪಡಿಸಿದ್ದಾರೆ ರಂಗಭೂಮಿ, ಸಿನಿಮಾ ಕಲಾವಿದ–ತಂತ್ರಜ್ಞ ಯಶವಂತ ಸರದೇಶಪಾಂಡೆ.
ಮನೆಯಿಂದಲೇ ಕೆಲಸ ಮಾಡುತ್ತ ಲಾಕ್‌ಡೌನ್ ಪಾಲಿಸುತ್ತಿರುವ ಮೂವರು ಬ್ರಹ್ಮಚಾರಿ ಸ್ನೇಹಿತರು. ಚಂದು, ಜಗದೀಶ ಹಾಗೂ ರಘು ಇವರಲ್ಲಿ, ರಘುನ ಮೂವರು ಸಹೋದ್ಯೋಗಿಗಳಿಗೆ ಕೋವಿಡ್–19 ಇದೆ. ಆ ಮೂವರ ಮನೆಯಲ್ಲಿರುವ ವಯಸ್ಸಾದ ತಂದೆ– ತಾಯಿಗಳ ಬೇಕು ಬೇಡಗಳನ್ನು ರಘು ನಿತ್ಯ ವಿಚಾರಿಸುತ್ತಾನೆ. ಅದೂ ಅಲ್ಲದೆ ತಾನೇ ಮೂರು ಲ್ಯಾಪ್‌ಟಾಪ್ ಇಟ್ಟುಕೊಂಡು, ಆ ಮೂವರ ಕೆಲಸಗಳನ್ನು ರಘು ತನ್ನ ಕೈಲಾದಷ್ಟು ಮಾಡುತ್ತಾನೆ.
ಉಳಿದವರಿಬ್ಬರ ಕೆಲಸವೂ ಸರಳವೇನಲ್ಲ. ಮೊದ ಮೊದಲು ವರ್ಕ್ ಫ್ರಮ್ ಹೋಮ್ ಸಂಭ್ರಮಿಸಿದ್ದ ಅವರಿಗೆ ಈಗೀಗ ಬೇಸರ ತರಿಸುತ್ತಿದೆ.
ಮನೆಯಲ್ಲೇ ಇರುವುದು, ಇತರರಿಗೆ ತಮ್ಮ ಕೈಲಾದಷ್ಟು ನೆರವಾಗುವುದನ್ನು ಪ್ರೇರೇಪಿಸುವುದು ಚಿತ್ರದ ಉದ್ದೇಶ. ಕಿರುಚಿತ್ರವನ್ನು ತಾಂತ್ರಿಕವಾಗಿ ಶ್ರೀಮಂತಗೊಳಿಸುವುದಕ್ಕಿಂತಲೂ ಪ್ರಸಕ್ತ ಪರಿಸ್ಥಿತಿಯನ್ನು ಧ್ವನಿಸುವ ಕಡೆಗೆ ಅವರು ಹೆಚ್ಚಿನ ಗಮನ ಹರಿಸಿದ್ದಾರೆ. ಅವರ ಈ ಪ್ರಯತ್ನಕ್ಕೆ ಮೆಚ್ಚುಗೆಯೂ ಸಿಕ್ಕಿದೆ.
‘ಪಿ. ಶೇಷಾದ್ರಿ, ನಾಗೇಂದ್ರ ಶಾ ಅವರು ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಯುಟ್ಯೂಬ್ ಒಂದರಲ್ಲೇ ಇಪ್ಪತ್ತೇಳು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂನಲ್ಲಿಯೂ ಸಾಕಷ್ಟು ಮಂದಿ ನೋಡಿದ್ದಾರೆ, ಹಂಚಿಕೊಂಡಿದ್ದಾರೆ’ ಎಂದು ಯಶವಂತ ಸರದೇಶಪಾಂಡೆ ಖುಷಿ ಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.