ಅರ್ಧ ವರ್ಷ ಮುಗಿದಿದೆ. ಈ ಹೊತ್ತಿಗೆ ಕನ್ನಡದಲ್ಲಿ ಹಲವಾರು ಕಿರುಚಿತ್ರಗಳು ಬಂದಿವೆ. ಒಂದಿಷ್ಟು ನಿರೀಕ್ಷೆಯನ್ನೂ ಹುಟ್ಟಿಸಿ ಹೋಗಿವೆ. ಇಲ್ಲಿ ಭರ್ಜರಿ ಯಶಸ್ಸು ಕಂಡ ಕಿರುಚಿತ್ರಗಳು ಮುಂದೆ ದೊಡ್ಡ ಮಟ್ಟದ ಯಶಸ್ವಿ ಚಿತ್ರಗಳ ಭರವಸೆ ಮೂಡಿಸಿವೆ. ಅದಕ್ಕೆ ಉದಾಹರಣೆ ‘ಮೀಸೆ ಮತ್ತು ಜಡೆ’. ಇದನ್ನು ಬಿಟ್ಟರೆ ವಿಭಿನ್ನ ರೀತಿಯ ಥೀಮ್ ಇಟ್ಟುಕೊಂಡು ಪ್ರಯೋಗಾತ್ಮಕವಾಗಿಯೂ ಸಾಕಷ್ಟು ಕಿರುಚಿತ್ರಗಳು ನೋಡುಗರ ಗಮನ ಸೆಳೆದಿವೆ. ಆ ಪೈಕಿ ಈ ಆರು ತಿಂಗಳಿನಲ್ಲಿ ಬಂದ ಐದು ಕಿರುಚಿತ್ರಗಳ ಪುಟ್ಟ ಪರಿಚಯ ಇಲ್ಲಿದೆ.
***
ಮೀಸೆ ಮತ್ತು ಜಡೆ
ನಿರ್ದೇಶನ: ಜೋತಿರಾವ್ ಮೋಹಿತ್.
ತಾರಾಗಣ: ಆನಂದ್ ವೈಭವ್, ಪ್ರತಿಕ್ ಶೆಟ್ಟಿ, ತನುಶ್ರೀ
ಅವಧಿ: 4ನಿಮಿಷ 14 ಸೆಕೆಂಡ್
ಪ್ರೇಮಿಗಳಿಬ್ಬರು ತಮ್ಮೊಳಗಿನ ಮನಸ್ತಾಪವನ್ನು ಗೆಳೆಯನ ಮುಂದಿಡುತ್ತಾರೆ. ಹುಡುಗಿಗೆ ತನ್ನ ಪ್ರಿಯಕರನ ಮೇಲೆ ಅಸಾಧ್ಯ ಸಿಟ್ಟು, ಅದಕ್ಕೆ ಅವಳ ಬಳಿ ಪುಟಗಟ್ಟಲೆ ಕಾರಣಗಳಿವೆ. ಅವೆಲ್ಲವನ್ನೂ ಒಂದು ಬಿಡದೇ ನೋಟ್ ಮಾಡಿಕೊಂಡು ಬಂದಿದ್ದಾಳೆ ಕೂಡ. ಅವಳು ನೀಡುವ ಒಂದೊಂದು ಕಾರಣವೂ ಫನ್ನಿ. ನೋಡುಗರನ್ನು ನಗುವಂತೆ ಮಾಡುತ್ತದೆ. ಇಡೀ ನಾಲ್ಕು ನಿಮಿಷ ಕಳೆಯುವುದು ನಗುವಿನಲ್ಲಿಯೇ. ಪ್ರೇಕ್ಷಕರಲ್ಲಿ ನಗು ಅರಳಿಸುವ ಜತೆ ಹೆಣ್ಣಿನ ಮನಸ್ಸನ್ನು ತೆರೆದಿಡುವ ಸಣ್ಣ ಪ್ರಯತ್ನ ಯಶಸ್ವಿಯಾಗಿದೆ.
***
ಸ್ಥಳೀಯ ರಾಜಕಾರಣದ ಸೂಕ್ಷ್ಮ ಒಳನೋಟ
ಕುರ್ಲಿ
ನಿರ್ದೇಶನ: ನಟೇಶ್ ಹೆಗಡೆ
ತಾರಾಗಣ: ನಟೇಶ್ ಹೆಗಡೆ, ಗುರು ಸಿದ್ಧಿ, ಸುಜಾತಾ ಹೆಗಡೆ ಇನ್ನಿತರು
ಅವಧಿ: 17 ನಿಮಿಷ 26 ಸೆಕೆಂಡ್
ಕಪ್ಪು - ಬಿಳುಪಿನ ಕಿರುಚಿತ್ರ. ಸಮಾಜದಲ್ಲಿ ತಳ ಮಟ್ಟದಲ್ಲಿಯೂ ನಡೆಯುವ ರಾಜಕಾರಣದ ಮುಖವಾಡಗಳನ್ನು ತೆರೆದಿಡುತ್ತದೆ. ಹೆಗಡೆಯರ ತೋಟಕ್ಕೆ ಏಡಿ ಹಿಡಿಯಲು ಹೋದ ಹುಡುಗ ಬಾಳೆಗೊನೆ ಕದ್ದ ಆರೋಪಕ್ಕೆ ಗುರಿಯಾಗುತ್ತಾನೆ. ಎಲ್ಲರೂ ಅವರ ಸ್ವಾರ್ಥಕ್ಕೆ ಹುಡುಗನನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಅಸಲಿಗೆ ಬಾಳೆಗೊನೆ ಕದ್ದು ಬಚ್ಚಿಟ್ಟಿದ್ದ ಅದೇ ಹುಡುಗನ ಅಪ್ಪ. ಹೊಲದೊಡೆಯ ಹೆಗಡೆ ಮತ್ತವನ ಮಗ ಎಲ್ಲರೂ ಈ ಆಟದ ಭಾಗಿಗಳೇ. ಘಟನೆಯೊಂದು ಇಟ್ಟುಕೊಂಡು ಅದರೊಳಗಿನ ರಾಜಕಾರಣವನ್ನು ಕಿರುಚಿತ್ರದ ಮೂಲಕ ನೀಡಿದ್ದಾರೆ ನಟೇಶ್.
***
ಕತೆಗಾರನ ಆಂತರ್ಯ
ಅಪರಿಚಿತ
ತಾರಾಗಣ: ಅನಿರುದ್ಧ್ ಭಟ್, ಸಂಜನಾ ಅರಸ್
ಕತೆಗಾರನೊಬ್ಬ ಕತೆಯೊಂದನ್ನು ಅರ್ಧಕ್ಕೆ ಮುಗಿಸಿ ಅದರಿಂದ ಹೊರಬರಲಾಗದೇ ಒದ್ದಾಡುವುದು, ಕಡೆಗೆ ಕತೆಯನ್ನು ಪೂರ್ಣಗೊಳಿಸುವುದು ಈ ಕಿರುಚಿತ್ರದ ಕಥೆ. ಅನಿರುಧ್ಧ ಭಟ್ ‘ಅಪರಿಚಿತ’ ಕಿರು ಚಿತ್ರದ ನಿರ್ದೇಶಕ ಮತ್ತು ನಾಯಕ. ತಾನು ಬರೆಯುತ್ತಿರುವ ಕಥೆಯ ಪಾತ್ರವೇ ಕಣ್ಣ ಮುಂದೆ ಬಂದು ಇನ್ನಿಲ್ಲದಂತೆ ಕಾಣುತ್ತದೆ. ಇದು ವಾಸ್ತವವೋ, ಮನಸ್ಸಿನ ತಳಮಳವೋ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ ಕಥೆಗಾರನೊಬ್ಬರನ ಆಂತರ್ಯವನ್ನು ಅನಾವರಣ ಮಾಡುತ್ತದೆ.
***
ತ್ಯಾಗವೇ ಕಲ್ಯಾಣದ ಕೊಂಡಿ
ಕೌಶಲ್ಯ ಕಲ್ಯಾಣ
ನಿರ್ದೇಶನ: ನವೀನ್ ಕುಮಾರ್ ಮತ್ತು ಗಿರೀಶ್
ತಾರಾಗಣ: ಶಶಿಕುಮಾರ್, ರಾಘವಿ ಗೌಡ
ಅವಧಿ: 37 ನಿಮಿಷ 11 ಸೆಕೆಂಡ್
ಇಬ್ಬರು ಪ್ರೇಮಿಗಳು, ತಂದೆ. ಮೂರೇ ಪಾತ್ರಗಳ ಹಿಂದೆ ಸುತ್ತುವ ಕಿರುಚಿತ್ರ ‘ಕೌಶಲ್ಯ ಕಲ್ಯಾಣ’. ಶಶಿಕುಮಾರ್ ರಾಘವಿ ಗೌಡ ಪ್ರೀತಿ ಬಲೆಗೆ ಬೀಳುತ್ತಾರೆ. ಮದುವೆಗೆ ಇನ್ನೇನು ಮೂರೇ ಹೆಜ್ಜೆ ಬಾಕಿ. ಹುಡುಗಿಯ ತಂದೆಯೊಂದಿಗೆ ಮಾತನಾಡಿದರೆ ಸಾಕು ಎಂದು ಕೊಳ್ಳುವ ಜೋಡಿಗೆ ತಂದೆಯ ಆಸೆಗಳು ತಣ್ಣೀರು ಎರಚುತ್ತವೆ. ಇದು ಹಲವಾರು ಚಿತ್ರಗಳಲ್ಲಿ ಬಂದಿರುವ ಕಥೆಯೇ ಆದರೂ ಇಲ್ಲಿ ನಿರ್ದೇಶಕರು ಆತುರ ತೋರಲಿಲ್ಲ. ಕಥೆಯಲ್ಲೊಂದು ತಿರುವಿಟ್ಟು ಕಡೆಗೆ ಪ್ರೀತಿಯನ್ನು ಗೆಲ್ಲಿಸಿದ್ದಾರೆ. ಗಂಡು ಹೆಣ್ಣಿನ ಪ್ರೀತಿಗಿಂತ ತಂದೆಯ ಪ್ರೀತಿಯೇ ಮೇಲು ಎಂದು ತಿಳಿದು ತ್ಯಾಗದ ಹಾದಿ ಹಿಡಿದ ಪ್ರೇಮಿಗಳು ಅದೇ ತ್ಯಾಗದ ಕೃಪೆಯಿಂದ ಕಲ್ಯಾಣದ ಮೂಲಕ ಒಂದಾಗುವುದೇ ‘ಕೌಶಲ್ಯ ಕಲ್ಯಾಣ’.
***
ಯೋಧರು, ರೈತರು ಶ್ರೇಷ್ಠರು
ಶ್ರೇಷ್ಠರು
ನಿರ್ದೇಶನ: ತ್ಯಾಗರಾಜ್
ತಾರಾಗಣ: ನವೀನ್ ವಿರಾಜ್
ಅವಧಿ: 30 ನಿಮಿಷ 02 ಸೆಕೆಂಡ್
ಯೋಧರ ಹತ್ಯೆ, ಭಯೋತ್ಪಾಧಕರ ಅಟ್ಟಹಾಸ, ರೈತರ ಸಾಲ, ರೈತರ ಆತ್ಮಹತ್ಯೆ... ಇವೆಲ್ಲವೂ ಇತ್ತೀಚೆಗೆ ಮುನ್ನೆಲೆ ಬಂದು ನಿಂತಿರುವ ಚರ್ಚೆಗಳು. ಗಡಿಯಲ್ಲಿ ದೇಶ ಕಾಯುವುದಷ್ಟೇದೇಶಪ್ರೇಮ ಅಲ್ಲ. ರೈತನಾಗಿ ಸಂದರ್ಭ ಬಂದಾಗ ಹೇಗೆ ದೇಶ ರಕ್ಷಣೆ ಮಾಡಬಹುದು ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ. ಅಪ್ಪಟ ದೇಶಭಕ್ತಿಯ, ರೈತರ ಪರವಾದ ಕಿರುಚಿತ್ರವಿದು. ಪಕ್ಕಾ ಉತ್ತರ ಕರ್ನಾಟಕದ ಭಾಷೆ. ಅಲ್ಲಿನ ನೆಲದ ಗುಣಗಳು ಇಲ್ಲಿ ಬಿತ್ತರ ಗೊಂಡಿವೆ. ಯೋಧ, ರೈತರೇ ಇಲ್ಲಿನ ಪ್ರಧಾನ ಅಂಶಗಳಾದರೂ ಇದರ ಜೊತೆಯಲ್ಲೇ ರೈತರ ಸಾಲ, ಅವರು ಅನಿಭವಿಸುವ ಸಂಕಷ್ಟ, ಯೋಧ ಕುಟುಂಬದ ಹಿನ್ನಲೆಯನ್ನು ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.