ADVERTISEMENT

ಶ್ರದ್ಧಾ ಸ್ತ್ರೀವಾದಿ ಆದ ದಿನ!

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 5:01 IST
Last Updated 2 ಜೂನ್ 2020, 5:01 IST
ಶ್ರದ್ಧಾ ಶ್ರೀನಾಥ್‌
ಶ್ರದ್ಧಾ ಶ್ರೀನಾಥ್‌   

ಪವನ್ ಕುಮಾರ್ ನಿರ್ದೇಶನದ ‘ಯು–ಟರ್ನ್‌’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ನಟಿ ಶ್ರದ್ಧಾ ಶ್ರೀನಾಥ್ ಅವರು ಸಾಮಾಜಿಕ ಜಾಲತಾಣದ ಮೂಲಕ ದಿಟ್ಟ ಮಾತುಗಳನ್ನು ಆಡಿದ್ದಾರೆ. ಅಂದಹಾಗೆ, ಶ್ರದ್ಧಾ ಅವರು ತಮ್ಮ ಮೊದಲ ಕನ್ನಡ ಸಿನಿಮಾದಲ್ಲಿ ಮಾಡಿದ್ದು ದಿಟ್ಟ ಪಾತ್ರವನ್ನೇ.

‘ನಾನು ಆಗ 14 ವರ್ಷ ವಯಸ್ಸಿನವಳಾಗಿದ್ದೆ. ಕುಟುಂಬದ ಒಂದು ಪೂಜಾ ಕಾರ್ಯಕ್ರಮದಲ್ಲಿ ನಾನು ಋತುಮತಿಯಾದೆ. ಆಗ ನನ್ನ ಅಮ್ಮ ಅಲ್ಲಿರಲಿಲ್ಲ. ಹಾಗಾಗಿ, ನನ್ನ ಪಕ್ಕದಲ್ಲಿ ಕುಳಿತಿದ್ದ ಆಂಟಿಯ ಬಳಿ ಕಳವಳದಿಂದಲೇ ಈ ವಿಚಾರ ತಿಳಿಸಿದೆ (ಏಕೆಂದರೆ ನನ್ನ ಬಳಿ ಆ ಹೊತ್ತಿನಲ್ಲಿ ಸ್ಯಾನಿಟರಿ ಪ್ಯಾಡ್ ಇರಲಿಲ್ಲ). ನಾನು ತಲೆಕೆಡಿಸಿಕೊಂಡಿದ್ದನ್ನು ಹತ್ತಿರದಲ್ಲೇ ಇದ್ದ ಇನ್ನೊಬ್ಬರು ಮಹಿಳೆ ನೋಡಿದರು. ಅವರೂ ಒಳ್ಳೆಯ ಸ್ವಭಾವದವರು. ನಾನು ನನ್ನ ಆಂಟಿಯ ಹತ್ತಿರ ಹೇಳಿದ್ದನ್ನು ಕೇಳಿಸಿಕೊಂಡರು. ನನಗೆ ಸಮಾಧಾನ ಆಗುವ ರೀತಿಯಲ್ಲಿ, ಮುಗುಳುನಗುತ್ತ ‘ಪರವಾಗಿಲ್ಲ ಚಿನ್ನಾ, ದೇವರು ಕ್ಷಮಿಸುತ್ತಾರೆ’ (ಋತುಸ್ರಾವ ಇದ್ದಾಗಲೂ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ) ಎಂದು ಹೇಳಿದರು. ನಾನು ಸ್ತ್ರೀವಾದಿ ಆಗಿದ್ದು, ನಾಸ್ತಿಕಳಾಗಿದ್ದು ಅದೇ ದಿನ. ಆಗ ನನಗೆ 14 ವರ್ಷ ವಯಸ್ಸು’ ಎಂದು ಶ್ರದ್ಧಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ.

ಶ್ರದ್ಧಾ ಅವರ ಈ ಬರಹವು 93 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಶ್ರದ್ಧಾ ಅವರು ಈಗ ಚಂದನವನದಲ್ಲಿ ಬಹಳ ಬ್ಯುಸಿಯಾಗಿ ಇರುವ ನಟಿ ಕೂಡ ಹೌದು. ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಚಿತ್ರದಲ್ಲಿ, ರಿಷಬ್ ಶೆಟ್ಟಿ ನಿರ್ದೇಶನದ ‘ರುದ್ರಪ್ರಯಾಗ’ ಚಿತ್ರದಲ್ಲಿ ಕೂಡ ಇವರು ಬಣ್ಣ ಹಚ್ಚಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.