ADVERTISEMENT

ಶ್ರುತಿಗೆ ಶ್ರದ್ಧಾ ಬೆಂಬಲ: ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಶ್ರದ್ಧಾ...

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 5:26 IST
Last Updated 21 ಅಕ್ಟೋಬರ್ 2018, 5:26 IST
   

ಬೆಂಗಳೂರು: ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಶ್ರುತಿ ಮತ್ತು ಮೀ ಟೂ ಅಭಿಯಾನದ ಅವಹೇಳನ ವ್ಯಾಪಕವಾಗಿ ನಡೆಯುತ್ತಿದೆ.

ಆದರೆ ಈ ದಾಳಿಯ ನಡುವೆಯೇ ಕನ್ನಡದ ಹಲವು ನಟಿಯರು ಶ್ರುತಿ ಬೆಂಬಲಕ್ಕೆ ನಿಂತಿದ್ದಾರೆ. ನಿನ್ನೆಯೇ ಪ್ರಜಾವಾಣಿಯೊಂದಿಗೆ ಮಾತನಾಡಿದ ನಟಿಯರಾದ ಸೋನು ಗೌಡ ಮತ್ತು ಸಂಯುಕ್ತಾ ಹೊರನಾಡು ಶ್ರುತಿಗೆ ಬೆಂಬಲ ಸೂಚಿಸಿದ್ದರು. ತಡರಾತ್ರಿ ತಮ್ಮ ಟ್ವಿಟರ್ ಖಾತೆಯ ಮೂಲಕ ಶ್ರದ್ಧಾ ಶ್ರೀನಾಥ್‌ಕೂಡ ಬೆಂಬಲ ಸೂಚಿಸಿದ್ದಾರೆ.

'ಶ್ರುತಿಹರಿಹರನ್ ಮತ್ತು ತಾಪ್ಸಿ ನನ್ನ ಇಂದಿನ ಹೀರೊಗಳು' ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಮತ್ತೊಂದು ಟ್ವೀಟ್ ನಲ್ಲಿ 'ನಿಮಗೆ ಪುರಾವೆಗಳು ಬೇಕೆ?' ಎಂದು ಪ್ರಶ್ನಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮೀ ಟೂ ಅಭಿಯಾನದ ಕುರಿತು ಪ್ರಜಾವಾಣಿ ಜತೆಗೆ ಅವರು ಅಭಿಪ್ರಾಯ ಹಂಚಿಕೊಂಡಿದ್ದರು. ಅವರ ಮಾತುಗಳಲ್ಲಿ ಸದ್ಯವೇ ತಮಗಾದ ಲೈಂಗಿಕ ಕಿರುಕುಳವನ್ನು ಹಂಚಿಕೊಳ್ಳುವ ಸೂಚನೆಯನ್ನೂ ಅವರು ನೀಡಿದ್ದಾರೆ.

'ಇದು ಆಗಲೇಬೇಕಿತ್ತು. ತುಂಬ ಸಲ ಕಲಾವಿದೆಯರು ನನ್ನ ಬಳಿ ಬಂದು ಲೈಂಗಿಕ ಕಿರುಕುಳದ ಅನುಭವ ಹಂಚಿಕೊಂಡಿದ್ದಾರೆ. ಅದು ನಂತರ ಸುದ್ದಿಯಾಗುತ್ತಿತ್ತು, ಹಾಗೆಯೇ ಮುಚ್ಚಿಯೂ ಹೋಗುತ್ತಿತ್ತು. ಆದರೆ ಈಗ ಎಲ್ಲರೂ ಮುಂದೆ ಬಂದು ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಗೊತ್ತು ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಎಂಬ ಸಮಸ್ಯೆ ಇದ್ದೇ ಇದೆ.

ಇದುಪವರ್ ಪಗಲೇ ಥರ. ಚಿತ್ರರಂಗದಲ್ಲಿ ಅಧಿಕಾರ ಪ್ರಭಾವ ಇರುವವರು ಅದನ್ನು ಬಳಸಿಕೊಂಡು ಕಿರುಕುಳ ಕೊಡುತ್ತಾರೆ. ಇಂಥ ಅನುಭವ ಬಹುತೇಕ ಎಲ್ಲ ಹೆಣ್ಣುಮಕ್ಕಳಿಗೂ ಆಗಿಯೇ ಇರುತ್ತದೆ. ಅದರ ಪ್ರಮಾಣದಲ್ಲಿ ಹೆಚ್ಚೂಕಮ್ಮಿ ಇರಬಹುದಷ್ಟೆ' ಎಂದು ಹೇಳಿಕೊಂಡಿದ್ದರು.

'ನನ್ನ ಜತೆ ಏನಾದ್ರೂ ಆದ್ರೆ ನನ್ ಸ್ನೇಹಿತರ ಜತೆ ಹಂಚಿಕೊಳ್ಳುತ್ತೇನೆ. ಜನರ ಬಳಿ ಹೇಳಿಕೊಂಡರೆ ನೀನ್ಯಾಕೆ ಅಲ್ಲಿಗೆ ಹೋದೆ? ಆ ಕ್ಷಣವೇ ಯಾಕೆ ಪ್ರತಿಭಟಿಸಲಿಲ್ಲ ಎಂದೆಲ್ಲ ಪ್ರಶ್ನಿಸಲು ಶುರುಮಾಡುತ್ತಾರೆ. ಆದರೆ ನಾವು ಪ್ರತಿದಿನ ಅವರ ಜತೆ ಕೆಲಸ ಮಾಡಬೇಕಾಗುತ್ತದೆ.

ಒಮ್ಮಿಂದೊಮ್ಮೆಲೇ ಪ್ರತಿಭಟಿಸುವುದು ಅಥವಾ ತಕ್ಷಣವೇ ಮಧ್ಯದ ಬೆರಳು ತೋರಿಸಿ ಫಕ್ ಆಫ್ ಎಂದು ಹೇಳಿಬಿಡುವುದು ಅಷ್ಟು ಸುಲಭ ಅಲ್ಲ. ಅವರೊಂದಿಗೆ ನಗುನಗುತ್ತದೇ ವರ್ತಿಸಬೇಕಾಗುತ್ತದೆ' ಎಂದಿದ್ದ ಅವರು ಮೀ ಟೂ ಅಭಿಯಾನದ ಬಾಲಿವುಡ್ ನಲ್ಲಿ ಉಂಟುಮಾಡಿದ ಪರಿಣಾಮದ ಕುರಿತೂ ಗಮನಸೆಳೆದಿದ್ದರು.

'ಆದರೆ ಈಗ ಎಲ್ಲರೂ ದಿಟ್ಟವಾಗಿ ಹೇಳುತ್ತಿದ್ದಾರೆ. ಬಾಲಿವುಡ್ ಈ ಅಭಿಯಾನವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದೆ. ಲೈಂಗಿಕ‌ಕಿರುಕುಳ ಆರೋಪಕ್ಕೆ ಒಳಗಾದವರ ಜತೆಗೆ ಕೆಲಸ ಮಾಡುವುದಿಲ್ಲ ಎಂದು ನಿರ್ಧಾರ ಕೈಗೊಂಡಿದ್ದಾರೆ' ಎಂದಿದ್ದರು.

'ನನ್ನ ಮನಸ್ಸಿನಲ್ಲಿಯೂ ಹೇಳಿಕೊಳ್ಳಲು ಸಾಕಷ್ಟು ಕಥೆಗಳಿವೆ. ಅವುಗಳನ್ನೆಲ್ಲ ಒಂದು ಪೋಸ್ಟ್ ನಲ್ಲಿ ಬರೆದುಹಾಕಲು ನನಗೆ ಸಮಯ ಬೇಕು. ಖಂಡಿತ ನನ್ನ ಕಥೆಯನ್ನೂ ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೂ ನಾನು ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲ ಇದ್ದೇ ಇದೆ' ಎಂದು ಅವರು ಸದ್ಯವೇ ತಮ್ಮ ಕಥೆಯನ್ನೂ ಹಂಚಿಕೊಳ್ಳುವ ಸೂಚನೆ ನೀಡಿದ್ದರು.

ಇವನ್ನೂಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.