ADVERTISEMENT

ಬೆನಕನ ಭಕ್ತೆ ಶ್ರೇಯಾ

ಪ್ರಜಾವಾಣಿ ವಿಶೇಷ
Published 25 ಸೆಪ್ಟೆಂಬರ್ 2018, 0:53 IST
Last Updated 25 ಸೆಪ್ಟೆಂಬರ್ 2018, 0:53 IST
ಶ್ರೇಯಾ ಘೋಷಾಲ್‌
ಶ್ರೇಯಾ ಘೋಷಾಲ್‌   

ದಣಿವರಿಯದ, ದಶಕದಿಂದಲೂ ಒಂದಿನಿಯೂ ಸುಕ್ಕಾಗದ ಕಂಠದ ಗಾಯಕಿ ಯಾರು ಎಂದು ಕೇಳಿದರೆ ಶ್ರೇಯಾ ಘೋಷಾಲ್‌ ಎಂದು ಥಟ್ಟನೆ ಹೇಳಿಬಿಡಬಹುದು. ಹಾಡಿನಂತೆಯೇ ಮಾತಿನಲ್ಲೂಜೇನಿನ ಸಿಹಿ. ಬೆರಗು ಹುಟ್ಟಿಸುವಂತಹ ತಾಳ್ಮೆ. ತುಂಬು ಕೆನ್ನೆಗೆ ಇನ್ನಷ್ಟು ಹೊಳಪು ಕೊಡುವ ನಗು... ಬೆಂಗಳೂರು ಎಂದಾಕ್ಷಣ ಇಲ್ಲಿ ಕನ್ನಡ, ಕನ್ನಡಕ್ಕಾಗಿ ಹಾಡಿದ ಹಾಡುಗಳು ಮತ್ತು ಬೆಂಗಳೂರು ಗಣೇಶೋತ್ಸವ ನೆನಪಾಗುತ್ತದೆಯಂತೆ.

ಗಣೇಶೋತ್ಸವಕ್ಕೆ ಕಳೆದ ವಾರಾಂತ್ಯ ಹಾಡಲು ಬಂದಿದ್ದ ಶ್ರೇಯಾ, ಸಿಕ್ಕಿದ ಕೇವಲ ಆರೂವರೆ ನಿಮಿಷದಲ್ಲಿ ಒಂದಷ್ಟು ನೆನಪುಗಳನ್ನು ಹಂಚಿಕೊಂಡರು.

ಬೆಂಗಳೂರು ಗಣೇಶೋತ್ಸವಕ್ಕೆ ನೀವು ‘ಮೋಸ್ಟ್‌ ವಾಂಟೆಡ್‌’ ಅತಿಥಿ. ನಾಲ್ಕನೇ ವರ್ಷ ಹಾಡಲು ಬಂದಿದ್ದೀರಿ.

ADVERTISEMENT

ಈ ವೇದಿಕೆಯಲ್ಲಿ ಹಾಡಲು ನಾನು ಕಾತುರಳಾಗಿರುತ್ತೇನೆ. ಬೆಂಗಳೂರಿನ ನನ್ನ ಅಭಿಮಾನಿಗಳಿಗೆ ನೆನಪಿರಬಹುದು. 2016ರ ಗಣೇಶೋತ್ಸವದ ವೇಳೆ ಗಂಟಲು ಕೆಟ್ಟುಹೋಗಿ ಹಾಡಲು, ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೆ. ಒಪ್ಪಿಕೊಂಡಿದ್ದ ಕಾರಣ ಬೆಂಗಳೂರಿಗೆ ಬಂದುಬಿಟ್ಟೆ. ಆದರೆ ಹಾಡಲು ಆಗುತ್ತಿಲ್ಲ ಎಂದು ನೆನಪಿಸಿಕೊಂಡೇ ಅಳು ಬರುತ್ತಿತ್ತು. ಎ‍ಪಿಎಸ್ ಕಾಲೇಜಿನ ಮೈದಾನದಲ್ಲಿ ಗಣೇಶನಿಗೆ ಎಂದಿನಂತೆ ಆರತಿ ಮಾಡಿ ‘ಅಪ್ಪಾ ಗಣೇಶ ನನ್ನ ಮರ್ಯಾದೆ ಕಾಪಾಡು. ನಾಲ್ಕು ಹಾಡಾದರೂ ಹಾಡುವ ಶಕ್ತಿಯನ್ನು ನನ್ನ ಕಂಠಕ್ಕೆ ತುಂಬು’ ಎಂದು ಶ್ರದ್ಧೆಯಿಂದ ಪ್ರಾರ್ಥಿಸಿದೆ. ನಂಬ್ತೀರೋ ಇಲ್ವೋ 16 ಹಾಡುಗಳನ್ನು ಹಾಡಿದೆ! ಓ ಮೈ ಗಾಡ್‌! ನನಗೇ ನಂಬಲಾಗಲಿಲ್ಲ. ಆಗ ನನಗೆ ಸ್ಪಷ್ಟವಾಯ್ತು ಬೆಂಗಳೂರು ಗಣೇಶೋತ್ಸವದ ಈ ಗಣಪನಿಗೆ ಏನೋ ಸ್ಪೆಷಲ್‌ ಪವರ್‌ ಇದೆ ಎಂದು.

ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ನೀವು ದೇವರನ್ನು ಪ್ರಾರ್ಥಿಸುತ್ತೀರಾ?

ಹ್ಹಹ್ಹ... ನನ್ನ ಮತ್ತೊಂದು ಸೀಕ್ರೆಟ್‌ ಹೇಳಬೇಕಾಗಿದೆ. ನಾನು ಇಂತಹುದೇ ದೇವರು ಅಂತ ನಂಬುತ್ತಿರಲಿಲ್ಲ. ದೇವಸ್ಥಾನ, ಚರ್ಚ್‌, ಮಸೀದಿ, ಗುರುದ್ವಾರ ಎಲ್ಲವೂ ನನಗೆ ಸಮಾನ. ಆದರೆ ಆಗಲೇ ಹೇಳಿದ ಘಟನೆ ನಡೆದ ಬಳಿಕ ಗಣಪತಿ ನನ್ನನ್ನು ಬಹಳ ಆಕರ್ಷಿಸಿದ್ದಾನೆ. ಹಾಗಾಗಿ ಈಗ ನಾನು ಅವನ ಭಕ್ತೆಯಾಗಿದ್ದೇನೆ.

ಹೊಸ ಪ್ರತಿಭೆಗಳು ಈ ಕ್ಷೇತ್ರದಲ್ಲಿ ಕಾಲೂರುತ್ತಿದ್ದಂತೆ ಹಿರಿಯ ಗಾಯಕರು ತೆರೆಮರೆಗೆ ಸರಿಯುತ್ತಾರೆ. ಆದರೆ ಶ್ರೇಯಾ ಇಂದಿಗೂ ಭಾರತೀಯ ಚಿತ್ರರಂಗಕ್ಕೆ ಹಾಟ್‌ ಫೇವರಿಟ್‌ ಗಾಯಕಿ. ಏನಿದು ಮ್ಯಾಜಿಕ್‌?

ನೀವು ಹೇಳಿದ್ದು ನಿಜ. ಹೊಸ ಗಾಯಕರು ಎಂಟ್ರಿ ಕೊಡುತ್ತಿದ್ದಂತೆ ಹಳಬರಿಗೆ ಅವಕಾಶ ಸಿಗುವುದಿಲ್ಲ. ದೇವರು ನನಗೆ ಕೊಟ್ಟ ಈ ಕಂಠ ನನ್ನನ್ನು ಇಷ್ಟು ವರ್ಷ ಈ ಕ್ಷೇತ್ರದಲ್ಲಿ ಬೇಡಿಕೆ ಕಳೆದುಕೊಳ್ಳದಂತೆ ಮಾಡಿದೆ. ದೇವರಿಗೆ ನಾನು ಎಷ್ಟು ಆಭಾರಿಯಾಗಿದ್ದರೂ ಸಾಲದು. ನನ್ನ ಅನುಭವದಿಂದ ಇನ್ನೊಂದು ಮಾತು ಹೇಳಲಾ? ಕಠಿಣ ಪರಿಶ್ರಮ, ಬದ್ಧತೆ ಮತ್ತು ನಮ್ಮನ್ನು ನಾವು ಫಾರಂನಲ್ಲಿ ಇಟ್ಟುಕೊಳ್ಳುವುದು ಕೂಡಾ ಅಷ್ಟೇ ಮುಖ್ಯ.

ಸಾಮಾನ್ಯವಾಗಿ ಕನ್ನಡದ ಯಾವುದಾದರೂ ಹಾಡನ್ನು ಗುನುಗುತ್ತೀರಾ?

ಯಾವ ಹಾಡನ್ನೂ ಗುನುಗುವುದಿಲ್ಲ. ಆದರೆ ‘ಮುಂಗಾರು ಮಳೆ’ ಚಿತ್ರದ ‘ಅರಳುತಿರು ಜೀವದ ಗೆಳೆಯ’ ಫೇವರಿಟ್‌ ಹಾಡು. ಈ ಚಿತ್ರದ ಹಾಡುಗಳು ನನಗೆ ತುಂಬಾ ಇಷ್ಟ.

ಶ್ರೋತೃಗಳೇ ಕೋರಸ್‌!

ಬೆಂಗಳೂರು ಗಣೇಶೋತ್ಸವದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ನಭೂತೋ ಎಂಬಂತೆ ಯಶಸ್ವಿಯಾಗುತ್ತಿರುವುದಕ್ಕೆ ಬೆಂಗಳೂರು ಗಣೇಶೋತ್ಸವ ಸಮಿತಿ ಹೆಕ್ಕಿ ತರುವ ಅತಿ ಗಣ್ಯ ಕಲಾವಿದರ‍ಪಾಲ್ಗೊಳ್ಳುವಿಕೆಯೇ ಕಾರಣ. ಶನಿವಾರದ ಇಳಿಸಂಜೆ ಶ್ರೇಯಾ ಘೋಷಾಲ್‌ ಕಾರ್ಯಕ್ರಮ ರಾತ್ರಿ ಏಳಕ್ಕೆ ಆರಂಭವಾದರೂ ಒಂಬತ್ತು ಗಂಟೆಯವರೆಗೂ ಸಂಗೀತಾಭಿಮಾನಿಗಳು ಓಡೋಡಿ ಬರುತ್ತಿದ್ದ ನೋಟ ಸಾಮಾನ್ಯವಾಗಿತ್ತು.

ಬಂಗಾರದ ಬಣ್ಣದ ಉದ್ದನೆಯ ಅನಾರ್ಕಲಿ ಉಡುಪು, ಅದರ ಮೇಲೆ ಕಸೂತಿಯ ಚಿತ್ತಾರವಿದ್ದ ನೆಟ್ಟೆಡ್‌ ಓವರ್‌ಕೋಟ್‌, ದೊಡ್ಡ ಕಿವಿಯೋಲೆ ಧರಿಸಿದ್ದ ಶ್ರೇಯಾ ವೇದಿಕೆಗೆ ಬರುವ ಸೂಚನೆ ಸಿಗುತ್ತಲೇ ಸಿಳ್ಳೆಗಳ ಮೇಳವೇ ನಡೆಯಿತು. ಮೊಬೈಲ್‌ ಕ್ಯಾಮೆರಾಗಳು ಕ್ಯಾಮೆರಾ ಇಲ್ಲವೇ ವಿಡಿಯೊ ಮೋಡ್‌ನಲ್ಲಿ ಸಿದ್ಧವಾದವು. ವೇದಿಕೆಯಲ್ಲಿ ಹೊಗೆ ಸುರುಳಿ ಸುರುಳಿಯಾಗಿ ಆವರಿಸಿಕೊಂಡಿತು. ಶ್ರೇಯಾ ಬಂದರು. ಆಲಾಪ ವಿಜೃಂಭಿಸಿತು.

‘ಕುರ್ಬಾನ್‌’ ಚಿತ್ರದ ‘ಶುಕ್ರಾನ್‌ ಅಲ್ಲಾ’ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಿಸಿದರು. ನಂತರ ‘ರಬ್ತಾ’ದ ‘ಕೆಹೆತೇ ಹೇ ಖುದಾ ನೆ’, ‘ಸಂಜು ವೆಡ್ಸ್‌ ಗೀತಾ’ ಚಿತ್ರದ ‘ಗಗನವೇ ಬಾಗಿ’, ‘ಚಕ್ರವರ್ತಿ’ಯ ‘ಒಂದು ಮಳೆ ಬಿಲ್ಲು’, ‘ಬಿರುಗಾಳಿ’ಯ ‘ಹೂವಿನ ಬಾಣದಂತೆ’, ‘ಕಿರಿಕ್‌ ಪಾರ್ಟಿ’ಯ ‘ನೀನಿರೆ ಸನಿಹ’ ಹೀಗೆ... ಶ್ರೇಯಾ ಕಂಠದಲ್ಲಿ ಹಾಡುಗಳು ಮಾಧುರವಾಗಿ ಹೊರಹೊಮ್ಮುತ್ತಿದ್ದರೆ ಶ್ರೋತೃಗಳು ಹುಚ್ಚೆದ್ದು ಕುಣಿದರು. ಮಧ್ಯೆ ಮಧ್ಯೆ ಜನರತ್ತ ಮೈಕ್‌ ಹಿಡಿದು ಕೋರಸ್‌ ಆಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.