ನಟರಾದ ಉಪೇಂದ್ರ ಹಾಗೂ ಸುದೀಪ್ ಅಭಿನಯಿಸುತ್ತಿರುವ, ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಕೋಟೆಯ ರಾಣಿಯರು ಯಾರು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಹಲವು ಖ್ಯಾತ ನಟಿಯರ ಹೆಸರೂ ಕೇಳಿಬರುತ್ತಿದೆ. ಈ ಪ್ರಶ್ನೆಗೀಗ ಆರ್.ಚಂದ್ರು ಉತ್ತರಿಸಿದ್ದಾರೆ. ‘ಕಬ್ಜ’ ಕೋಟೆಗೆ ‘ಮಧುಮತಿ’ಯಾಗಿ ಬಹುಭಾಷಾ ನಟಿ ಶ್ರಿಯಾ ಸರಣ್ ಹೆಜ್ಜೆ ಇಟ್ಟಿದ್ದಾರೆ.
ಶ್ರಿಯಾ ಅವರನ್ನು ಸ್ವಾಗತಿಸಿ, ‘ಮಧುಮತಿ’ಯ ಲುಕ್ ಫೋಟೊವನ್ನು ಆರ್.ಚಂದ್ರು ಟ್ವೀಟ್ ಮಾಡಿದ್ದಾರೆ. ಸಿನಿಮಾದಲ್ಲಿ ಎರಡು ನಾಯಕಿಯರಿರಲಿದ್ದಾರೆ. ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ಜೊತೆಗೆ ‘ದೃಶ್ಯಂ–2’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರಿಯಾ, ಸದ್ಯ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿರುವ ಶ್ರಿಯಾ ಬಹು ದಿನಗಳ ಬಳಿಕ ಚಂದನವನಕ್ಕೆ ಹಿಂತಿರುಗಿದ್ದಾರೆ.
‘ಕಬ್ಜ’ ಸಿನಿಮಾದ ಚಿತ್ರೀಕರಣ ಸತತ ಎರಡು ವರ್ಷಗಳಿಂದ ನಡೆಯುತ್ತಿದ್ದು, ಕೊನೆಯ ಹಂತದ ಚಿತ್ರೀಕರಣ ಪ್ರಗತಿಯಲ್ಲಿದೆ. ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯಲಿದ್ದು, ಇದೇ ವರ್ಷ ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲು ಅಣಿಯಾಗಿದ್ದೇವೆ ಎಂದು ಆರ್.ಚಂದ್ರು ತಿಳಿಸಿದ್ದಾರೆ.
ಚಿತ್ರದಲ್ಲಿ ‘ಭಾರ್ಗವ್ ಭಕ್ಷಿ’ ಎಂಬ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.ಬಾಲಿವುಡ್‌ನ ಖ್ಯಾತ ನಟ ನವಾಬ್ ಶಾ ಹಾಗೂ ಕೆ.ಜಿ.ಎಫ್ ಸಿನಿಮಾದಲ್ಲಿ ರಾಜೇಂದ್ರ ದೇಸಾಯಿ ಪಾತ್ರ ನಿರ್ವಹಿಸಿದ್ದ ಲಕ್ಷ್ಮೀಶ ಲಕ್ಷ್ಮಣ್, ತಮಿಳಿನ ‘ಐ’ ಚಿತ್ರದ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ರಾಹುಲ್ ದೇವ್, ಸುನೀಲ್ ಪುರಾಣಿಕ್, ಪ್ರಮೋದ್ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಕಬ್ಜ’ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.