ADVERTISEMENT

‘ಆರ್‌ಆರ್‌ಆರ್’ನಲ್ಲಿ ಅಜಯ್‌ ದೇವಗನ್‌ಗೆ ಶ್ರೀಯಾ ಜೋಡಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 7:28 IST
Last Updated 9 ಜೂನ್ 2020, 7:28 IST
   

ಶ್ರೀಯಾ ಶರಣ್‌ ಬಹುಭಾಷಾ ನಟಿ. ಆಕೆ ಬೆಳ್ಳಿತೆರೆ ಪ್ರವೇಶಿಸಿದ್ದು ತೆಲುಗಿನ ‘ಇಷ್ಟಂ’ ಚಿತ್ರದ ಮೂಲಕ. ಪುನೀತ್‌ ರಾಜ್‌ಕುಮಾರ್‌ ನಟನೆಯ ಕನ್ನಡದ ‘ಅರಸು’ ಚಿತ್ರದಲ್ಲಿಯೂ ಆಕೆ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ರಷ್ಯಾದ ಆಂಡ್ರೇ ಕೊಸ್ಚೀವ್ ಅವರ ಕೈಹಿಡಿದ ಬಳಿಕವೂ ಆಕೆಗೆ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಅವಕಾಶಗಳಿಗೆ ಕೊರತೆಯಾಗಿಲ್ಲ.

ಪ್ರಸ್ತುತ ಆಕೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಗಂಡನೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಕೊರೊನಾ ಭೀತಿಯ ಪರಿಣಾಮ ಮನೆಯಲ್ಲಿಯೇ ಇರುವ ಶ್ರೀಯಾ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗಳಲ್ಲಿ ಅಭಿಮಾನಿಗಳಿಗಾಗಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ, ಸಂವಾದ ಕೂಡ ನಡೆಸುತ್ತಿದ್ದಾರೆ.

ಅಂದಹಾಗೆ 2005ರಲ್ಲಿ ತೆರೆಕಂಡ ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘ಛತ್ರಪತಿ’ ಸಿನಿಮಾದಲ್ಲಿ ನಟ ಪ್ರಭಾಸ್‌ಗೆ ನಾಯಕಿಯಾಗಿ ಶ್ರೀಯಾ ನಟಿಸಿದ್ದರು. ಶ್ರೀಲಂಕಾದಿಂದ ನಿರಾಶ್ರಿತಗೊಂಡು ವಿಶಾಖಪಟ್ಟಣಕ್ಕೆ ಬರುವ ನಾಯಕ ತನ್ನ ಅಮ್ಮನಿಗಾಗಿ ಹುಡುಕಾಟ ನಡೆಸುತ್ತಾನೆ. ಅವನಿಗೆ ನೆರವಾಗುವ ಪಾತ್ರವದು. ಅದಾದ ಬಳಿಕ ಟಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದರೂ ರಾಜಮೌಳಿ ಸಿನಿಮಾಗಳಲ್ಲಿ ನಟಿಸಿರಲಿಲ್ಲ.

ADVERTISEMENT

ಒಂದೂವರೆ ದಶಕದ ಬಳಿಕ ಮತ್ತೆ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್‌’ ಚಿತ್ರದಲ್ಲಿ (ರೌದ್ರಂ ರಣಂ ರುಧಿರಂ) ಶ್ರೀಯಾ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಇದನ್ನು ಆಕೆಯೇ ಸಾಮಾಜಿಕ ಜಾಲತಾಣದಲ್ಲಿ ದೃಢಪಡಿಸಿದ್ದಾರೆ.

‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಕೂಡ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅವರ ಫ್ಲಾಷ್‌ಬ್ಯಾಕ್‌ ‌ ಕಥೆಯೊಂದು ಇದೆಯಂತೆ. ಅದರಲ್ಲಿ ಅಜಯ್‌ ದೇವಗನ್‌ಗೆ ಶ್ರೀಯಾ ಅವರೇ ಜೋಡಿ. ಆದರೆ, ಆ ಪಾತ್ರದ ಬಗ್ಗೆ ಆಕೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಆಕೆಯ ಬಣ್ಣದ ಬುಟ್ಟಿಯಲ್ಲಿ ಹಲವು ಸಿನಿಮಾಗಳಿವೆ. ತಮಿಳಿನ ‘ನರಗಸೂರನ್‌’, ’ಸ್ಯಾಂಡಕ್ಕವಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ತೆಲುಗಿನ ಇನ್ನೂ ಹೆಸರಿಡದ ಮತ್ತೊಂದು ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಹಿಂದಿಯ ‘ತಡ್ಕಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ ಪರಿಣಾಮ ಈ ಸಿನಿಮಾಗಳ ಶೂಟಿಂಗ್‌ ವಿಳಂಬವಾಗಿದೆ.

ಲಾಕ್‌ಡೌನ್‌ ಪರಿಣಾಮ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡಲು ಆಕೆ ದಿ ಕೈಂಡ್‌ನೆಸ್ ಫೌಂಡೇಷನ್ ಮತ್ತು ಚೆನ್ನೈ ಕಾರ್ಯಪಡೆ ತಂಡದೊಟ್ಟಿಗೂ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.