ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪ ಚಂಡಮಾರುತದಂತೆ ಕನ್ನಡ ಚಿತ್ರರಂಗವನ್ನು ಅಪ್ಪಳಿಸಿದ್ದು, ‘ಮೀ–ಟೂ’ ಆಂದೋಲನಕ್ಕೆ ಬೆಂಬಲ ಮಹಾಪೂರವೇ ಹರಿದುಬಂದಿದೆ.
ಬಹುಭಾಷಾ ನಟ ಪ್ರಕಾಶ್ ರೈ, ನಟಿಯರಾದ ಶ್ರದ್ಧಾ ಶ್ರೀನಾಥ್, ಸೋನು ಗೌಡ, ಸಂಯುಕ್ತಾ ಹೊರನಾಡು, ನೀತು ಶೆಟ್ಟಿ ಶ್ರುತಿ ಬೆನ್ನಿಗೆ ನಿಂತಿದ್ದಾರೆ. ಲೈಂಗಿಕ ಕಿರುಕುಳ, ಅಸಭ್ಯ ವರ್ತನೆಯನ್ನು ಸಹಿಸಿಕೊಂಡು ಮೌನಿಗಳಾಗಿರುವವರು ತಮ್ಮ ಧ್ವನಿ ಎತ್ತರಿಸಿ ಸೆಟೆದು ನಿಲ್ಲುವುದಾದರೆ ‘ಫೈರ್’ (ಫಿಲ್ಮ್ ಇಂಡಸ್ಟ್ರಿ ಫಾರ್ ಇಕ್ವಾಲಿಟಿ ಅಂಡ್ ರೈಟ್ಸ್) ಸಂಘಟನೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಹೇಳುವ ಮೂಲಕ ಸಂಸ್ಥೆಯ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಈ ಅಭಿಯಾನಕ್ಕೆ ನೈತಿಕ ಸ್ಥೈರ್ಯ ತುಂಬಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಹೊರಹಾಕಿದ ಶ್ರುತಿ, ‘ವಿಸ್ಮಯ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಾನು ಎದುರಿಸಿದ ಪರಿಸ್ಥಿತಿಯನ್ನು ಈಗಾಗಲೇ ತಿಳಿಸಿದ್ದೇನೆ. ಈಗ ಅದೇ ನಟನ ವಿರುದ್ಧ ಇನ್ನೂ ನಾಲ್ವರು ಹೊರಗಡೆ ಬಂದಿದ್ದಾರೆ. ಆ ನಟಿಯರೇ ತಮ್ಮ ಹೆಸರುಗಳನ್ನು ಬಹಿರಂಗಪಡಿಸಲಿ ಎಂದು ಬಯಸುತ್ತೇನೆ’ ಎಂದು ಹೇಳಿದರು.
‘ದರ್ಶನ್, ಸುದೀಪ್ ಸೇರಿದಂತೆ ಹಲವು ಸೂಪರ್ ಸ್ಟಾರ್ ಜೊತೆ ಕೆಲಸ ಮಾಡಿದ್ದೇನೆ. ಅವರ‍್ಯಾರೂ ನನ್ನೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಈ ನಟ ಮಾತ್ರ ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ನಡೆಸಲು, ದಾಖಲೆಗಳನ್ನು ಹೊಂದಿಸಿಕೊಳ್ಳುತ್ತಿದ್ದೇನೆ. ಸಮಯ ಬಂದಾಗ ಎಫ್‌ಐಆರ್ ಸಮೇತ ನಿಮ್ಮ ಮುಂದೆ ಬರುತ್ತೇನೆ’ ಎಂದೂ ತಿಳಿಸಿದರು.
ಶ್ರುತಿಗೆ ಬೆಂಬಲ: ‘ಶ್ರುತಿ ಹರಿಹರನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತೆ. ದಿಟ್ಟ ಅರ್ಜುನ್ ಸರ್ಜಾ ಕೂಡ ಕನ್ನಡದ ಹೆಮ್ಮೆ.ನಾನು ಶ್ರುತಿ ಪರವಾಗಿ, ಈ ಮೂಲಕ ಎಲ್ಲ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ. ಅರ್ಜುನ್ ಅವರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಆದರೆ, ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟುಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ’ ಎಂದು ಪ್ರಕಾಶ್ ರೈ ತಮ್ಮ ಫೇಸ್‌ಬುಕ್ ಪುಟದಲ್ಲಿ ಪ್ರತಿಪಾದಿಸಿದ್ದಾರೆ.
‘ಶ್ರುತಿ ಮತ್ತು ತಾಪ್ಸಿ ನನ್ನ ಇಂದಿನ ಹೀರೊಗಳು’ ಎಂದು ಟ್ವೀಟ್ ಮಾಡಿರುವ ಶ್ರದ್ಧಾ ಶ್ರೀನಾಥ್, ‘ನಿಮಗೆ ಪುರಾವೆಗಳು ಬೇಕೆ?’ ಎಂದು ಪ್ರಶ್ನಿಸುವ ಮೂಲಕ ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ನೋವಿನ ಅನುಭವಗಳನ್ನು ಬಿಚ್ಚಿಡುವ ಸೂಚನೆಯನ್ನೂ ನೀಡಿದ್ದಾರೆ.
‘ಪ್ರಚಾರಕ್ಕಾಗಿ ಯಾರೂ ತಮ್ಮ ಮಾನ ಹರಾಜು ಹಾಕಿಕೊಳ್ಳುವುದಿಲ್ಲ. ನಾನು ಶ್ರುತಿಯನ್ನು ಬೆಂಬಲಿಸುತ್ತೇನೆ. ಪ್ರಚಾರಕ್ಕಾಗಿ ಹೀಗೆಲ್ಲ ಮಾಡಲು ಅವರು 16–17 ವರ್ಷದ ಹುಡುಗಿಯೂ ಅಲ್ಲ, ಅವರು ಪ್ರಬುದ್ಧರು, ಅವರಿಗೂ ವಿವೇಚನೆ ಇದೆ’ ಎಂದು ನೀತು ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ:ನೋ ಎಂದ ಮೇಲೂ ಆ ರೀತಿ ಮಾಡಬಹುದಾ: ಶ್ರುತಿ ಹರಿಹರನ್
‘ಮಗಳ ಪರ ನಾನಿದ್ದೇನೆ’ ಎಂದ ಶ್ರುತಿ ಅಮ್ಮ
‘ಮಗಳು, ತನಗಾದ ಅನ್ಯಾಯವನ್ನು ಖಂಡಿಸುತ್ತಿದ್ದಾಳೆ. ಅವರ ಪರವಾಗಿ ನಾನು ನಿಂತುಕೊಳ್ಳುತ್ತೇನೆ’ ಎಂದು ಶ್ರುತಿ ತಾಯಿ ಜಯಲಕ್ಷ್ಮಿ ಹೇಳಿದರು.
‘12 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡೆ. ಅಂದಿನಿಂದ ಮಗಳನ್ನು ಧೈರ್ಯದಿಂದ ಬೆಳೆಸಿದ್ದೇನೆ. ಆಕೆಯ ಶೂಟಿಂಗ್ ಸ್ಥಳಕ್ಕೆ ಹೆಚ್ಚು ಹೋಗುವುದಿಲ್ಲ. ಆದರೆ, ದಿನವೂ ಮನೆಗೆ ಬಂದಾಗ ಆಕೆಯ ಮುಖ ನೋಡಿಯೇ ಎಲ್ಲವನ್ನೂ ತಿಳಿದುಕೊಳ್ಳುತ್ತೇನೆ. ದೇವರು ಆಕೆಗೆ ಪ್ರತಿಭೆ ಕೊಟ್ಟಿದ್ದಾನೆ. ಸಿನಿಮಾದಲ್ಲಿ ಅವಕಾಶ ಸಿಗದಿದ್ದರೂ ಆಕೆ ಬದುಕುತ್ತಾಳೆ’ ಎಂದರು.
***
ಅರ್ಜುನ್ ಹುಡುಕಿಕೊಂಡು ಶ್ರುತಿ ಮನೆಗೇ ಬರುತ್ತಿದ್ದಳು. ಎರಡು ವರ್ಷ ಸುಮ್ಮನಿದ್ದ ಈಕೆ ಈಗ ಮಾತನಾಡುತ್ತಿರುವುದೇಕೆ? ಮೂರು ಮದುವೆಯಾಗಿರುವ ಪ್ರಕಾಶ್ ರೈಗೆ ನನ್ನ ಮಗನ ವಿರುದ್ಧ ಮಾತನಾಡುವ ನೈತಿಕತೆ ಇದೆಯೇ
– ಲಕ್ಷ್ಮಿ ದೇವಮ್ಮ, ಅರ್ಜುನ್ ಸರ್ಜಾ ತಾಯಿ
–ತನಗೆ ಅನ್ಯಾಯ ಆಗಿದೆ ಎಂದು ಶ್ರುತಿ ಸುಮ್ಮನೆ ಹೇಳುವವರಲ್ಲ. ಅವರು ಮುಗ್ದ ಹುಡುಗಿ. ನಿಜಕ್ಕೂ ಅವರಿಗೆ ಕಿರುಕುಳ ಆಗಿದ್ದರೆ, ಆ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು
– ರಾಗಿಣಿ ದ್ವಿವೇದಿ, ನಟ
ಇವನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.