ಮುಂಬೈ: ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿ (ಬೆಫ್ಟಾ) ವಿಜೇತ ನಿರ್ದೇಶಕ ಫಿಲಿಪ್ ಜಾನ್ ಅವರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಇಂಡೊ–ಯುಕೆ ನಿರ್ಮಾಣದ ‘ಚೆನ್ನೈ ಸ್ಟೋರಿ’ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಭಾರತದ ಗುರು ಫಿಲ್ಮ್ಸ್ ಸಹ ನಿರ್ಮಾಣ ಸಂಸ್ಥೆಯಾಗಿದೆ. ಬ್ರಿಟನ್‌ನ ರಿಪ್ಪೆಲ್ ವರ್ಲ್ಡ್ ಪಿಚ್ಚರ್ಸ್ ಹಾಗೂ ವೇಲ್ಸ್‌ನ ಐಇ ಐಇ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ. ಚಿತ್ರವು ತಿಮೇರಿ ಎನ್. ಮುರಾರಿ ಅವರ ಪ್ರಸಿದ್ಧ ಕೃತಿ ‘ದಿ ಅರೇಂಜ್ಮೆಂಟ್ಸ್ ಆಫ್ ಲವ್’ ಕಥೆಯನ್ನು ಆಧರಿಸಿದೆ.
ಚೆನ್ನೈ ಸ್ಟೋರಿ ಇಂಗ್ಲಿಷ್ ಚಿತ್ರವೇ ಆದರೂ, ತಮಿಳು ಹಾಗೂ ವೇಲ್ಸ್ ನಡುವಿನ ಸಂಬಂಧವನ್ನು ಹೇಳಲಿದೆ. ಹಾಸ್ಯಭರಿತ ಪ್ರೇಮ ಕಥೆಯಾದ ಇದರಲ್ಲಿ ಶ್ರುತಿ ಅವರು ಖಾಸಗಿ ಪತ್ತೆದಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
‘ಚೆನ್ನೈ ಮೂಲದಿಂದ ಬಂದ ನನಗೆ ಅಲ್ಲಿನ ವೈವಿದ್ಯತೆ ಬಹಳಾ ವಿಶೇಷ. ಅದರಲ್ಲೂ ಫಿಲಿಪ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಬಹಳಷ್ಟು ಕುತೂಹಲ ಮೂಡಿಸಿದೆ. ನಮ್ಮ ಮೂಲದ ಕಥೆಯೊಂದು ಜಾಗತಿಕ ಮಟ್ಟದ ಸಿನಿಮಾ ಆಗುತ್ತಿದೆ. ಅದೂ ಅಂತರರಾಷ್ಟ್ರೀಯ ನಿರ್ಮಾಣ ಸಂಸ್ಥೆಗಳು ಅದನ್ನು ನಿರ್ಮಿಸುತ್ತಿವೆ ಎನ್ನುವುದೇ ಸಂತಸ’ ಎಂದು ಶ್ರುತಿ ಹೇಳಿದ್ದಾರೆ.
‘ಅದ್ಭುತ ಪ್ರತಿಭೆ ಹೊಂದಿರುವ ಶ್ರುತಿ ಅವರೊಂದಿಗೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಚಿತ್ರವು ಚೆನ್ನೈ ಮತ್ತು ಕ್ರಾಡಿಫ್‌ನ ನಡುವೆ ರೋಲರ್ ಕೋಸ್ಟರ್‌ನಂತೆ ರೋಚಕತೆಯಿಂದ ಸಾಗಲಿದೆ. ಬಿಎಫ್‌ಐ ಸಹಯೋಗದಲ್ಲಿ ಈ ಚಿತ್ರವು ಅಂತರರಾಷ್ಟ್ರೀಯ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ’ ಎಂದು ನಿರ್ಮಾಣ ಸಂಸ್ಥೆ ಹೇಳಿದೆ.
ಚಿತ್ರದಲ್ಲಿ ಬ್ರಿಟಿಷ್–ಭಾರತೀಯ ನಟ ವಿವೇಕ್ ಕಾಲ್ರಾ ನಟಿಸಿದ್ದಾರೆ. ಚಿತ್ರಕಥೆಯನ್ನು ನಿಮ್ಮಿ ಹರ್ಸಗಾಮಾ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.