‘ಆ್ಯಪಲ್ ಕೇಕ್ ಮಾಡುವುದು ತುಂಬ ಕಷ್ಟದ ಕೆಲಸ. ಆದರೆ, ಆ ಕೇಕ್‌ನ ಸಿಹಿ ಇರುತ್ತದಲ್ಲ. ಅದು ಎಲ್ಲ ಕಷ್ಟಗಳನ್ನೂ ಮರೆಸುತ್ತದೆ’ ಈ ವಾರ (ನ.23) ಬಿಡುಗಡೆಯಾಗುತ್ತಿರುವ ತಾವು ನಟಿಸಿದ ‘ಆ್ಯಪಲ್ ಕೇಕ್’ ಕುರಿತು ಶುಭಾ ರಕ್ಷಾ ಮಾತಿಗೆ ಶುರುವಿಟ್ಟುಕೊಂಡಿದ್ದು ಹೀಗೆ.
ಆ್ಯಪಲ್ ಕೇಕ್ ಮೂಲಕ ಅವರು ಹೇಳಿದ್ದನ್ನೇ ಬದುಕಿಗೂ ಅನ್ವಯಿಸುವ ಹಾಗೆ ಈ ಸಿನಿಮಾ ಇದೆಯಂತೆ. ‘ತುಂಬ ಜನರು ಬದುಕಿನಲ್ಲಿ ಏನೋ ಸಾಧನೆ ಮಾಡಬೇಕು ಎಂದುಕೊಂಡು ಹಳ್ಳಿಗಳಿಂದ ಬೆಂಗಳೂರಿಗೆ ಬರುತ್ತಾರೆ. ಆದರೆ ಅದು ಸುಲಭವಲ್ಲ ಎಂದು ಇಲ್ಲಿಗೆ ಬಂದಮೇಲೆ ತಿಳಿಯುತ್ತದೆ. ಸಾಧನೆಯ ಹಾದಿಯಲ್ಲಿನ ಕಠಿಣ ಸವಾಲುಗಳನ್ನು ಎದುರಿಸಿದವರಿಗೆ ಮಾತ್ರ ಆ್ಯಪಲ್ ಕೇಕ್‌ನಂಥ ಯಶಸ್ಸಿನ ಸಿಹಿ ದೊರೆಯುತ್ತದೆ ಎಂಬುದನ್ನು ಸಿನಿಮಾ ಮೂಲಕ ಹೇಳಹೊರಟಿದ್ದೇವೆ’ ಎನ್ನುವುದು ಅವರ ವಿವರಣೆ.
ಇದುವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ತಮ್ಮ ವೃತ್ತಿಜೀವನದಲ್ಲಿ ಈ ಸಿನಿಮಾ ಪಾತ್ರಕ್ಕೆ ವಿಶೇಷ ಮಹತ್ವ ಇದೆ ಎನ್ನುತ್ತಾರೆ ಅವರು. ರಂಜಿತ್ ಗೌಡ ನಿರ್ದೇಶನದ ಈ ಚಿತ್ರ ಕನ್ನಡದ ಜತೆಗೆ ತಮಿಳು, ತೆಲುಗು ಭಾಷೆಗಳಲ್ಲಿಯೂ ನಿರ್ಮಾಣವಾಗಿರುವುದು ವಿಶೇಷ. ಶುಭಾ ಈ ಡೋಂಟ್ ಕೇರ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
‘ಇಂಥ ಪಾತ್ರದಲ್ಲಿ ನಾನು ಇದುವರೆಗೆ ಕಾಣಿಸಿಕೊಂಡಿರಲಿಲ್ಲ. ಇಲ್ಲಿ ನನ್ನ ಪಾತ್ರದ ಹೆಸರು ನಕ್ಷತ್ರ ಎಂದು ಹೆಸರು. ಸ್ವಾಭಿಮಾನ ಇರುವ ಹುಡುಗಿ ಅವಳು. ನಾಯಕರಿಗೆ ಇರುವಷ್ಟೇ ಮಹತ್ವ ನನ್ನ ಪಾತ್ರಕ್ಕೂ ಇದೆ’ ಎಂದು ವಿವರಿಸುತ್ತಾರೆ ಶುಭಾ ರಕ್ಷಾ.
‘ಆ್ಯಪಲ್ ಕೇಕ್’ ಸಿನಿಮಾದಲ್ಲಿ ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವ ನಾಲ್ಕು ಹುಡುಗರ ಕಥೆ ಇದೆಯಂತೆ. ವಿ. ನಾಗೇಂದ್ರ ಪ್ರಸಾದ್ ಈ ಚಿತ್ರದ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.