ನಿರ್ದೇಶಕ ಸಿಂಪಲ್ ಸುನಿ ತಮ್ಮ ಸಿನಿಮಾಗಳ ಮೂಲಕ ಚಂದನವನಕ್ಕೆ ಹೊಸ ಕಲಾವಿದರನ್ನು ತೆರೆಗೆ ಪರಿಚಯಿಸುತ್ತಾ ಬಂದಿದ್ದಾರೆ. ತಮ್ಮ ಕಳೆದ ಸಿನಿಮಾ ‘ಒಂದು ಸರಳ ಪ್ರೇಮಕಥೆ’ ಮೂಲಕ ಸ್ವತಿಷ್ಠಾ ಕೃಷ್ಣನ್ ಹಾಗೂ ಮಲ್ಲಿಕಾ ಸಿಂಗ್ ಅವರನ್ನು ಕನ್ನಡಕ್ಕೆ ಕರೆತಂದಿದ್ದ ಸುನಿ ಇದೀಗ ಮತ್ತಿಬ್ಬರು ನಾಯಕಿಯರನ್ನು ಪರಿಚಯಿಸಿದ್ದಾರೆ.
ಸುನಿ ಅವರು ನಿರ್ದೇಶಿಸುತ್ತಿರುವ ‘ದೇವರು ರುಜು ಮಾಡಿದನು’ ಸಿನಿಮಾದಲ್ಲಿ ಇಬ್ಬರು ನಾಯಕಿಯರಿರಲಿದ್ದು, ವೀರಾಜ್ ನಾಯಕರಾಗಿ ನಟಿಸುತ್ತಿದ್ದಾರೆ. ವೀರಾಜ್ ಅವರಿಗೆ ನಾಯಕನಾಗಿ ಇದು ಚೊಚ್ಚಲ ಸಿನಿಮಾ. ವೀರಾಜ್ಗೆ ಜೋಡಿಯಾಗಿ ದಿವಿತಾ ರೈ ಹಾಗೂ ಕೀರ್ತಿ ಕೃಷ್ಣ ನಟಿಸುತ್ತಿದ್ದಾರೆ.
ಮಂಗಳೂರಿನ ದಿವಿತಾ, ಮಿಸ್ ಇಂಡಿಯಾ ಯೂನಿವರ್ಸ್-2022 ವಿಜೇತೆ. ಹಿಂದಿಯಲ್ಲಿ ಒಂದು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಇವರು, ‘ದೇವರು ರುಜು ಮಾಡಿದನು’ ಸಿನಿಮಾ ಮೂಲಕ ನಾಯಕಿಯಾಗಿ ಹೆಜ್ಜೆ ಇಡುತ್ತಿದ್ದಾರೆ. ಕೊಂಕಣಿ ಸಮುದಾಯಕ್ಕೆ ಸೇರಿದ ಕನ್ನಡ ಹುಡುಗಿಯಾಗಿ, ಹಾಡುಗಾರ್ತಿಯಾಗಿ ದಿವಿತಾ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಕೀರ್ತಿ ಕೃಷ್ಣ ನಟ ಶರಣ್ ಅವರ ತಂಗಿ ಮಗಳು. ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಸ್ಟುಡಿಯೊದಲ್ಲಿ ನಟನೆಯ ಕೋರ್ಸ್ ಕಲಿತಿದ್ದಾರೆ ಕೀರ್ತಿ. ಸಂಗೀತವೇ ತನ್ನ ಪ್ರಪಂಚ ಎಂದು ಜೀವಿಸುವ ‘ಸುಶ್ರಾವ್ಯ’ ಎಂಬ ಪಾತ್ರದಲ್ಲಿ ವೀಣಾ ವಾದಕಿಯಾಗಿ ಅಭಿನಯಿಸುತ್ತಿದ್ದಾರೆ. ಗ್ರೀನ್ ಹೌಸ್ ಮೂವೀಸ್ ಅಡಿಯಲ್ಲಿ ಈ ಸಿನಿಮಾವನ್ನು ಗೋವಿಂದ್ ರಾಜ್ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.