ಬೆಂಗಳೂರು: ಜನಪ್ರಿಯ ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಕೆನಡಾದ ಟೊರೆಂಟೊದ ರಿಚ್ಮಂಡ್ ಗ್ಯಾಬ್ರಿಯಲ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.
ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ವಿಜಯ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ವಿಜಯ್ ಪ್ರಕಾಶ್ ಜತೆಗೆ ತಮಿಳು ಗಾಯಕ ಶ್ರೀನಿವಾಸ್ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯ್ ಪ್ರಕಾಶ್ ಅವರು, ‘ನನ್ನ ಮೊದಲ ಗೌರವ ಡಾಕ್ಟರೇಟ್ ಅನ್ನು ಗ್ಯಾಬ್ರಿಯಲ್ ವಿಶ್ವವಿದ್ಯಾಲಯದಿಂದ ಶ್ರೀನಿವಾಸ್ ಅವರೊಂದಿಗೆ ಸ್ವೀಕರಿಸುತ್ತಿರುವುದು ಖುಷಿ ನೀಡಿದೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಕೆಲವು ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.
ಟೊರೆಂಟೊದಲ್ಲಿ ವಿಜಯ್ ಪ್ರಕಾಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಗ್ಗೆಯೂ ಪೋಸ್ಟ್ ಹಂಚಿಕೊಂಡಿದ್ದರು.
ಕನ್ನಡ, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವಿಜಯ್ ಪ್ರಕಾಶ್ ಅವರ ಹಾಡುಗಳು ಕೇಳುಗರ ಮನಗೆದ್ದಿವೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಇವರು, ಕಂಚಿನ ಕಂಠದ ಗಾಯಕ ಎಂದೇ ಹೆಸರು ಪಡೆದಿದ್ದಾರೆ.
ಈ ಹಿಂದೆ ವಿಜಯ್ ಪ್ರಕಾಶ್ ಹಾಡುಗಳಿಗೆ ಅನೇಕ ಪ್ರಶಸ್ತಿಗಳು ಬಂದಿದ್ದರೂ, ಸಂಗೀತ ಕ್ಷೇತ್ರದ ಅವರ ಸಾಧನೆಗೆ ದೊರೆತ ಮೊದಲ ಗೌರವ ಡಾಕ್ಟರೇಟ್ ಇದಾಗಿದೆ ಎನ್ನುವುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.