ADVERTISEMENT

ಚಿತ್ರಮಂದಿರಗಳಿಗೆ ಬಾಗಿಲು: ಏಕಪರದೆಗಿದು ಕಾಲವಲ್ಲ

ವಿನಾಯಕ ಕೆ.ಎಸ್.
Published 7 ಜೂನ್ 2024, 1:00 IST
Last Updated 7 ಜೂನ್ 2024, 1:00 IST
<div class="paragraphs"><p>ತುಮಕೂರಿನ ಪ್ರಶಾಂತ್ ಚಿತ್ರಮಂದಿರ ಮುಚ್ಚಿರುವುದು...</p></div>

ತುಮಕೂರಿನ ಪ್ರಶಾಂತ್ ಚಿತ್ರಮಂದಿರ ಮುಚ್ಚಿರುವುದು...

   
ಒಂದು ಕಾಲಕ್ಕೆ ಗತವೈಭವದಿಂದ ಮೆರೆದಿದ್ದ ಒಂದಷ್ಟು ಏಕಪರದೆ ಚಿತ್ರಮಂದಿರಗಳು ಈಗಾಗಲೇ ಬಾಗಿಲು ಹಾಕಿವೆ. ಇನ್ನೊಂದಷ್ಟು ಏದುಸಿರು ಬಿಡುತ್ತಿವೆ. ಇದಕ್ಕೆ ಕಾರಣವೇನು? ಪರಿಹಾರವೇನು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...

ಇತ್ತೀಚೆಗಷ್ಟೇ ಬೆಂಗಳೂರಿನ ಜನಪ್ರಿಯ ‘ಕಾವೇರಿ’ ಚಿತ್ರಮಂದಿರ ಬಾಗಿಲು ಮುಚ್ಚಿದ್ದು ದೊಡ್ಡ ಸುದ್ದಿಯಾಯಿತು. ಅದರ ಬೆನ್ನಲ್ಲೇ ಚಿತ್ರಮಂದಿರಗಳು ಒಂದು ತಿಂಗಳು ಬಾಗಿಲು ಮುಚ್ಚಲಿವೆ ಎಂಬ ವಂದತಿಯೂ ಕಾಡ್ಗಿಚ್ಚಿನಂತೆ ಹಬ್ಬಿತು. ಆದರೆ ಏಕಪರದೆ ಚಿತ್ರಮಂದಿರಗಳ ಈ ಸಂಕಷ್ಟಕ್ಕೆ ದಶಕಗಳ ಇತಿಹಾಸವಿದೆ. 

ಬೆಂಗಳೂರಿನಲ್ಲಿ ಒಂದು ಕಾಲಕ್ಕೆ ಬಹುಜನಪ್ರಿಯವಾಗಿದ್ದ ಕಪಾಲಿ, ಮೆಜೆಸ್ಟಿಕ್‌, ಸಂಗಮ್‌, ಸೆಂಟ್ರಲ್‌, ಗೀತಾಂಜಲಿ ಚಿತ್ರಮಂದಿರಗಳು ಬಾಗಿಲು ಮುಚ್ಚಿ ದಶಕಗಳ ಕಳೆದಿವೆ. ನಟರಾಜ್‌, ಉಮಾ, ಮೂವಿಲ್ಯಾಂಡ್‌ನಂತಹ ಚಿತ್ರಮಂದಿರಗಳು ಕೆಲ ವರ್ಷಗಳ ಹಿಂದೆ ಆಟ ಮುಗಿಸಿವೆ. ಭೂಮಿ ಬೆಲೆ ಹೆಚ್ಚಿರುವುದು, ಚಿತ್ರಮಂದಿರಗಳಿಂದ ವಾರದ ಖರ್ಚನ್ನು ನಿಭಾಯಿಸುವಷ್ಟೂ ಆದಾಯ ಬರದೇ ಇರುವುದು ಇದಕ್ಕೆ ಕಾರಣ. ಜೊತೆಗೆ ಏಕಪರದೆ ಚಿತ್ರಮಂದಿರಗಳಿಗೆ ಪರ್ಯಾಯವಾಗಿ ಮಲ್ಟಿಪ್ಲೆಕ್ಸ್‌ಗಳು ಬಂದವು. ಪ್ರೇಕ್ಷಕನಿಗೆ ಮಾಲ್‌ಗಳಲ್ಲಿನ ಶಾಪಿಂಗ್‌ ಜೊತೆಗೆ ಕುಟುಂಬ ಸಮೇತ ಸಿನಿಮಾ ನೋಡಬಹುದಾದ ಹೊಸ ಅನುಭವ ನೀಡಲು ಪ್ರಾರಂಭಿಸಿದವು. ಶುಚಿತ್ವದ ಕೊರತೆ, ಶೌಚಾಲಯದ ಅವ್ಯವಸ್ಥೆ, ಸಿನಿಮಾ ನೋಡಲು ಬೇಕಾದ ಸೂಕ್ತ ವಾತಾವರಣ ಇಲ್ಲದ ಕಾರಣ ಪ್ರೇಕ್ಷಕರು ಮಲ್ಟಿಪ್ಲೆಕ್ಸ್‌ಗಳ ಕಡೆಗೆ ಮುಖ ಮಾಡಿದ್ದಾರೆ.

ADVERTISEMENT

‘1985 ರ ಸುಮಾರಿಗೆ ಬೆಂಗಳೂರಿನ ‘ಗೀತಾ’ ಚಿತ್ರಮಂದಿರ ಮೊದಲು ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಆಗಿ ಬದಲಾಯ್ತು. ಬಳಿಕ ಅಲಂಕಾರ್‌, ಕಲ್ಪನಾ, ಸಾಗರ್‌, ಮೆಜೆಸ್ಟಿಕ್‌, ಸಂಗಮ್‌…ಹೀಗೆ ಸಾಕಷ್ಟು ಚಿತ್ರಮಂದಿರಗಳು ವಾಣಿಜ್ಯ ಸಂಕೀರ್ಣಗಳಾದವು. ಹುಬ್ಬಳ್ಳಿಯಲ್ಲಿ ಸುಜಾತ, ಸಂಜ್ಯೋತ, ಪದ್ಮ, ಮೈಸೂರಿನ ರಣಜಿತ್‌, ಶಾಂತಲಾ, ಲಕ್ಷ್ಮಿ, ಸರಸ್ವತಿ, ಕುಂದಾಪುರದ ವಿನಾಯಕ, ಮಂಗಳೂರಿನ ಸೆಂಟ್ರಲ್‌, ಪ್ಲಾಟಿನಂ, ಜ್ಯೋತಿಗಳಂಥ ಏಕಪರದೆ ಚಿತ್ರಮಂದಿರಗಳು ಬಾಗಿಲು ಹಾಕಿವೆ. ಈ ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವವರು ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗದವರು. ಮನೆಗಳಿಗೆ ಟಿ.ವಿ ಬಂದ ನಂತರ ದುಡಿಯುವ ವರ್ಗ, ಮಹಿಳೆಯರು ಚಿತ್ರಮಂದಿರಗಳತ್ತ ಬರುವುದು ಕಡಿಮೆಯಾಯ್ತು’ ಎನ್ನುತ್ತಾರೆ ನಟ ಸುಂದರರಾಜ್‌. 

ಹಲವು ವರ್ಷಗಳಿಂದ ಪ್ರದರ್ಶನ ಸ್ಥಗಿತಗೊಳಿಸಿರುವ ಮಾನ್ವಿಯ ಪ್ರೇಮ ಚಿತ್ರಮಂದಿರ

‘ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಏಕಪರದೆಯ ಚಿತ್ರಮಂದಿರಗಳು ಇದ್ದವು. ಸದ್ಯ  ಸುಮಾರು 560 ಚಿತ್ರಮಂದಿರಗಳಿವೆ. 25 ವರ್ಷಗಳಲ್ಲಿ 500ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಹಾಕಿವೆ. ಈಗಿರುವ ಚಿತ್ರಮಂದಿರಗಳಲ್ಲಿಯೂ ಬೆಂಗಳೂರಿನ ಸುತ್ತಮುತ್ತಲಿನ 60 ಚಿತ್ರಮಂದಿರಗಳು ತಾತ್ಕಾಲಿಕವಾಗಿ ಬಾಗಿಲು ಹಾಕಿವೆ. ಸ್ಟಾರ್‌ಗಳ ಚಿತ್ರ ಬಂದಾಗ ಮಾತ್ರ ಬಾಗಿಲು ತೆರೆಯುತ್ತವೆ. ಹೊಸಬರು ಹಲವಾರು ಕಾರಣಗಳಿಂದ ಮಲ್ಟಿಪ್ಲೆಕ್ಸ್‌ಗಳನ್ನು ಹೊರತುಪಡಿಸಿ ಬೇರೆಡೆ ಚಿತ್ರ ಬಿಡುಗಡೆ ಮಾಡುತ್ತಿಲ್ಲ. ಕೋವಿಡ್‌ ನಂತರ ಯಾವ ಚಿತ್ರಮಂದಿರಗಳೂ ಬಾಡಿಗೆ ಆಧಾರದಲ್ಲಿ ಕೆಲಸ ಮಾಡುತ್ತಿಲ್ಲ. ಶೇರಿಂಗ್‌ ಆಧಾರ ಬಂದರೂ ವರ್ಷಕ್ಕೆ ಸರಿಯಾಗಿ ಎಂಟು ಸಿನಿಮಾಗಳು ಸಿಗುತ್ತಿಲ್ಲ’ ಎನ್ನುತ್ತಾರೆ ವೀರೇಶ್‌ ಚಿತ್ರಮಂದಿರ ಮಾಲೀಕ ಹಾಗೂ ಪ್ರದರ್ಶಕ ಕೆ.ವಿ.ಚಂದ್ರಶೇಖರ್‌.

ಹೊಸಬರಿಗೆ ಆಯ್ಕೆಯಿಲ್ಲ

‘ಏಕಪರದೆ ಚಿತ್ರಮಂದಿರಗಳ ಶುಲ್ಕ ಭರಿಸಲು ಹೊಸಬರಿಗೆ ಸಾಧ್ಯವಿಲ್ಲ. ಬಾಡಿಗೆ ಆಧಾರದಲ್ಲಿ ದಿನಕ್ಕೆ ಒಂದೇ ಶೋ ಪಡೆದರೂ ವಾರಕ್ಕೆ ₹50,000 ಖರ್ಚು ಬರುತ್ತದೆ. ಆದರೆ ಅದಕ್ಕೆ ತಕ್ಕಂತೆ ಜನ ಬರುವುದಿಲ್ಲ. ಮೊದಲ ವಾರ ಶೇರಿಂಗ್‌ ಆಧಾರದಲ್ಲಿ ಪ್ರದರ್ಶನಕ್ಕೆ ಚಿತ್ರಮಂದಿರಗಳು ಒಪ್ಪುವುದಿಲ್ಲ. ನಂತರದ ವಾರಗಳಲ್ಲಿ ಸಿನಿಮಾ ಅಪ್‌ಲೋಡ್‌ಗೆ ಖರ್ಚು ಮಾಡಿದ ಹಣವೂ ನಿರ್ಮಾಪಕರಿಗೆ ಮರಳಿ ಬರುವುದಿಲ್ಲ. ಒಂದು ಸಿನಿಮಾ ಎಷ್ಟೇ ಜನಪ್ರಿಯವಾದರೂ ದೊಡ್ಡ ಮಟ್ಟದ ಹಿಟ್‌ ಆಗದೆ ಚಿತ್ರಮಂದಿರದಿಂದ ಹಣ ಗಳಿಸುತ್ತದೆ ಎಂಬುದು ಕಷ್ಟ. ಹೀಗಾಗಿ ಸ್ಟಾರ್‌ಗಳಿಲ್ಲದ ಸಿನಿಮಾಗಳಿಗೆ ಏಕಪರದೆ ಸೂಕ್ತ ಆಯ್ಕೆಯಲ್ಲ’ ಎನ್ನುತ್ತಾರೆ ‘ಬ್ಲಿಂಕ್‌’ ಚಿತ್ರದ ನಿರ್ಮಾಪಕ ರವಿಚಂದ್ರ ಎ.ಜೆ. 

ತಂತ್ರಜ್ಞಾನದ ದೃಷ್ಟಿಯಿಂದಲೂ ಮಲ್ಟಿಪ್ಲೆಕ್ಸ್‌ಗಳು ಸಿಂಗಲ್‌ ಸ್ಕ್ರೀನ್‌ಗಳಿಗಿಂತ ಮುಂದಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ 2ಡಿ, 3ಡಿ ದೃಶ್ಯ ಅನುಭವ ನೀಡುವ ಪರದೆಗಳಿವೆ. ಸೌಂಡ್‌ ಎಫೆಕ್ಟ್‌ನಲ್ಲಿ ಡಾಲ್ಬಿ ಅಟ್ಮಾಸ್‌ನಂತಹ ತಂತ್ರಜ್ಞಾನಗಳಿವೆ. ಉತ್ತಮ ವಿಎಫ್‌ಎಕ್ಸ್‌, ಗ್ರಾಫಿಕ್ಸ್‌ನ ಸಿನಿಮಾಗಳಿಗೆ ಪ್ರೇಕ್ಷಕರಿಗೆ ಮಲ್ಟಿಪ್ಲೆಕ್ಸ್‌ಗಳೇ ಮೊದಲ ಆಯ್ಕೆ.  

‘ಇವತ್ತು ಬಹುತೇಕ ಏಕಪರದೆಗಳು ಅಪ್‌ಡೇಟ್‌ ಆಗಿವೆ. ಎಲ್ಲ ಕಡೆ ಡಿಜಿಟಲ್‌ ಸ್ಕ್ರೀನಿಂಗ್‌ ಇದೆ. ಮಲ್ಟಿಪ್ಲೆಕ್ಸ್‌ಗಳು ನೀಡುವ ಅನುಭವವನ್ನೇ ನೀಡುತ್ತಿವೆ. ಮಲ್ಟಿಪ್ಲೆಕ್ಸ್‌ಗಳು ಶೇಕಡ 40ರಷ್ಟು ಮುಚ್ಚಿವೆ. 11–12 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಮಾಡುತ್ತಿದ್ದ ಮಲ್ಟಿಪ್ಲೆಕ್ಸ್‌ಗಳು ಈಗ 5–6 ಸ್ಕ್ರೀನ್‌ಗಳಿಗೆ ಬಂದು ನಿಂತಿವೆ. ಸಾವಿರ ಕೋಟಿ ರೂಪಾಯಿ ಬಾಚುವ ಸಿನಿಮಾಗಳು ಐದು ವರ್ಷಕ್ಕೊಮ್ಮೆ ಬರುತ್ತವೆ. ಸ್ಟಾರ್‌ಗಳ ಸಿನಿಮಾಗಳು ಈ ಸಮಸ್ಯೆಗೆ ಪರಿಹಾರವಲ್ಲ. 1960–70 ದಶಕದಲ್ಲಿ ಬರುತ್ತಿದ್ದ ಕಂಟೆಂಟ್‌ ಸಿನಿಮಾಗಳು ಬರಬೇಕು’ ಎನ್ನುತ್ತಾರೆ ಕೆ.ವಿ.ಚಂದ್ರಶೇಖರ್‌.

ಏಕಪರದೆ ಚಿತ್ರಮಂದಿರಗಳು ತಾಂತ್ರಿಕವಾಗಿ ಅಪ್‌ಡೇಟ್‌ ಆಗಿದ್ದರೂ ಗುಣಮಟ್ಟದಲ್ಲಿ ಮಲ್ಟಿಪ್ಲೆಕ್ಸ್‌ಗಳ ಮಟ್ಟಕ್ಕೆ ತಲುಪಿಲ್ಲ. ಟಿಕೆಟ್‌ ದರ, ಚಿತ್ರಮಂದಿರದ ಒಳಗಿನ ದುಬಾರಿ ಆಹಾರಗಳಿಂದಾಗಿ ಸಿನಿಪ್ರಿಯರಿಗೆ ಏಕಪರದೆ ಚಿತ್ರಮಂದಿರಗಳು ಹಣ ಉಳಿತಾಯ ದೃಷ್ಟಿಯಿಂದ ಮೊದಲ ಆಯ್ಕೆ ಎನ್ನುವ ಮಾತೂ ಇದೆ. 

ಆಹಾರ ಬೇಕು

‘ಹೋಟೆಲ್‌, ದರ್ಶಿನಿಯೇ ಆಗಿರಲಿ, ಎ.ಸಿಯದ್ದೇ ಆಗಿರಲಿ, ಜನ ಬರಬೇಕಿದ್ದರೆ ಗುಣಮಟ್ಟದ ಆಹಾರ ಕೊಡಬೇಕು. ರಾಜ್ಯದ 150ಕ್ಕೂ ಅಧಿಕ ಚಿತ್ರಮಂದಿರಗಳು ದೊಡ್ಡ ಚಿತ್ರಗಳು ಬಿಡುಗಡೆಗೊಂಡಾಗ ಮಾತ್ರ ಬಾಗಿಲು ತೆರೆಯುತ್ತವೆ. ಜನ ಹೇಗೂ ಒಟಿಟಿಯಲ್ಲಿ ಬಂದೇ ಬರುತ್ತದೆ ಎಂಬ ಖಾತ್ರಿಯಲ್ಲಿರುತ್ತಾರೆ. ನಿರ್ಮಾಪಕರಿ ಒಟಿಟಿಯನ್ನು ಇನ್ನೊಂದು ಆದಾಯ ಮೂಲವಾಗಿಸಿಕೊಂಡಿದ್ದಾರೆ. ಹೀಗಾಗಿ ಅದನ್ನು ದೂರಲು ಸಾಧ್ಯವಿಲ್ಲ. ಚಿತ್ರಗಳು ಬೇರೆಲ್ಲೂ ಸಿಗದೆ ಚಿತ್ರಮಂದಿರದಲ್ಲಿ ಮಾತ್ರ ಸಿಗುವಂತೆ ಆಗಬೇಕು ಮತ್ತು ಚಿತ್ರಮಂದಿರದಲ್ಲಿಯೇ ನೋಡುವಂತಹ ಚಿತ್ರಗಳು ಬರಬೇಕು. ಆಹಾರ ರುಚಿಕರವಾಗಿದ್ದರೆ ಜನ ರಸ್ತೆಯಲ್ಲಿ ನಿಂತೇ ತಿನ್ನುವುದಿಲ್ಲವೇ’ ಎಂದು ಪ್ರಶ್ನಿಸುತ್ತಾರೆ ಸಿನಿಮಾ ವಿತರಕ ಮಾರ್ಸ್‌ ಸುರೇಶ್‌.

ಕರೆಂಟ್‌ ಬಿಲ್‌ ಹುಟ್ಟುತ್ತಿಲ್ಲ
‘ಸ್ಟಾರ್‌ ಇಲ್ಲದ ಸಿನಿಮಾಗಳಿಂದ ಶುಕ್ರವಾರ, ಶನಿವಾರ, ಭಾನುವಾರ ತಲಾ ಶೋಗೆ ಸರಾಸರಿ ₹2,000 ಸಂಗ್ರಹವಾಗುತ್ತದೆ. ಒಂದು ಶೋಗೆ ₹65,000 ಸಂಗ್ರಹವಾಗಬೇಕು. ಚಿತ್ರಮಂದಿರದ ಜಾಗದ ಬಾಡಿಗೆ, ಕಾರ್ಮಿಕರ ವೇತನ, ಕರೆಂಟ್‌ ಬಿಲ್‌ ಮೊದಲಾದವುಗಳನ್ನು ಪರಿಗಣಿಸಿದರೆ ಇವತ್ತು ಚಿತ್ರಮಂದಿರ ನಡೆಸುವುದು ಬಹಳ ಕಷ್ಟದ ಕೆಲಸ. ಬಹುತೇಕ ಎಲ್ಲ ಚಿತ್ರಮಂದಿರಗಳು ಫ್ಯಾಮಿಲಿ ಆಡಿಯನ್ಸ್‌ಗೆ ತಕ್ಕಂತೆ ಸುವ್ಯವಸ್ಥಿತವಾಗಿ ಅಪ್‌ಡೇಟ್‌ ಆಗಿವೆ’ ಎನ್ನುತ್ತಾರೆ ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದ ಮಾಲೀಕ ಹಾಗೂ ಚಿತ್ರ ನಿರ್ಮಾಪಕರೂ ಆಗಿರುವ ದೇವೇಂದ್ರ ರೆಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.