ADVERTISEMENT

ಸ್ವಾತಿ ಮುತ್ತಿನೊಳಗಿನ ‘ಸಿರಿ’

ಅಭಿಲಾಷ್ ಪಿ.ಎಸ್‌.
Published 23 ನವೆಂಬರ್ 2023, 23:40 IST
Last Updated 23 ನವೆಂಬರ್ 2023, 23:40 IST
ಸಿರಿ ರವಿಕುಮಾರ್‌ 
ಸಿರಿ ರವಿಕುಮಾರ್‌    

‘ಸಕುಟುಂಬ ಸಮೇತ’ ಸಿನಿಮಾ ಮೂಲಕ ಚಂದನವನದಲ್ಲಿ ಸದ್ದು ಮಾಡಿದ ನಟಿ ಸಿರಿ ರವಿಕುಮಾರ್‌, ಸದ್ಯ ಐದು ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಪೈಕಿ ಒಂದು ಸಿನಿಮಾ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇಂದು(ನ.24) ಬಿಡುಗಡೆಯಾಗುತ್ತಿದೆ. ಕೇವಲ 18 ದಿನಗಳಲ್ಲಿ ಪೂರ್ಣಗೊಂಡ ಈ ಸಿನಿಮಾ ಹಿಂದಿನ ಅನುಭವಗಳನ್ನು ಸಿರಿ ‘ಸಿನಿಮಾ ಪುರವಣಿ’ ಜೊತೆಗೆ ಹಂಚಿಕೊಂಡಿದ್ದಾರೆ. 

‘ಈ ಸಿನಿಮಾ ತನ್ನ ತೆಕ್ಕೆಗೆ ಬಿದ್ದಿದ್ದು ಆಕಸ್ಮಿಕವಾಗಿ. ಅವಕಾಶ ಸಿಕ್ಕಾಗ ಬಹಳ ಖುಷಿಯಾಗಿತ್ತು. ಸಿನಿಮಾದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದ್ದ ಕಾರಣ, ಯಾವ ಪಾತ್ರ ನೀಡುತ್ತಾರೆ, ಆ ಪಾತ್ರ ಹೇಗಿರುತ್ತದೆ ಎನ್ನುವ ಕುತೂಹಲ ನನಗಿತ್ತು. ‘ಪ್ರೇರಣಾ’ ಎನ್ನುವ ಪಾತ್ರದ ಬಗ್ಗೆ ವಿವರಣೆ ನೀಡಿದಾಗ, ಇಂತಹ ಪ್ರಮುಖ ಪಾತ್ರವೊಂದನ್ನು ಹೇಗೆ ಮಾಡುವುದು ಎಂಬ ಪ್ರಶ್ನೆ ಮೂಡಿತ್ತು. ‘ಹಾಸ್‌ಪಿಸ್‌’(ಗುಣಮುಖವಾಗದ ಕಾಯಿಲೆಗೆ ತುತ್ತಾದವರು ಇರುವ ಕೇಂದ್ರ)ನಲ್ಲಿ ಕೌನ್ಸಿಲರ್‌ ಆಗಿ ಕೆಲಸ ಮಾಡುವ ಆಕೆ ಗಂಭೀರವಾದ ಹೆಣ್ಣು, ಜೀವನದಲ್ಲಿ ಏನನ್ನೂ ಬಯಸದ ವ್ಯಕ್ತಿ ಆಕೆ. ಇಂತಹ ಭಿನ್ನ ಪಾತ್ರವನ್ನು ನಿಭಾಯಿಸುವುದು ಸವಾಲಾಗಿತ್ತು’ ಎನ್ನುತ್ತಾರೆ ಸಿರಿ. 

‘ರಾಜ್‌ ಬಿ.ಶೆಟ್ಟಿ ಅವರು ಹಾಸ್‌ಪಿಸ್‌ನೊಳಗಿನ ಘಟನೆಗಳನ್ನು ಅನುಭವಿಸಿದವರು. ಸಿನಿಮಾದ ಶೂಟಿಂಗ್‌ ಇಂತಹ ಒಂದು ಕೇಂದ್ರದಲ್ಲೇ ನಡೆಯುತ್ತದೆ ಎನ್ನುವಾಗ ನನಗೂ ಕುತೂಹಲವಿತ್ತು. ಇಲ್ಲಿ ಕೌನ್ಸಿಲರ್ಸ್‌ ಹೇಗಿರುತ್ತಾರೆ? ರೋಗಿಗಳೊಂದಿಗೆ ಅವರ ಮಾತುಕತೆ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಆಸಕ್ತಿ ಹುಟ್ಟಿತು. ಬದುಕುವ ಯಾವ ಭರವಸೆಯೂ ಆ ಕೇಂದ್ರಕ್ಕೆ ದಾಖಲಾದ ರೋಗಿಗಳಿಗೆ ಇರುವುದಿಲ್ಲ. ‘ನಿಮಗೆ ಏನೂ ಆಗುವುದಿಲ್ಲ, ನೀವು ಗುಣಮುಖರಾಗುತ್ತೀರಿ’ ಎಂದು ಹೇಳುವ ಸ್ಥಿತಿಯೂ ಅಲ್ಲಿ ಇರುವುದಿಲ್ಲ. ನಿಜವಾದ ಪ್ರಶ್ನೆಗಳನ್ನು ಎದುರಿಸುವ ಜಾಗವದು. ಸಿನಿಮಾ ಶೂಟಿಂಗ್‌ಗೆ ಮುನ್ನ ‘ಕರುಣಾಶ್ರಯ’ಕ್ಕೆ ಭೇಟಿ ನೀಡಿ ಅಲ್ಲಿನ ಕೌನ್ಸಿಲಿಂಗ್‌, ವಾತಾವರಣವನ್ನು ಅರಿತುಕೊಂಡೆ. ಅಲ್ಲಿನ ಭಾವನೆಗಳು, ನಿಶ್ಶಬ್ದವನ್ನು ಅನುಭವಿಸಿ ಅರಿತುಕೊಂಡೆ. ಸಿನಿಮಾ ಚಿತ್ರೀಕರಣದ ವೇಳೆಯ ಅನುಭವಗಳು ವೈಯಕ್ತಿಕವಾಗಿ ಹಲವು ಪರಿಣಾಮ ಬೀರಿದವು. ನಿಜ ಜೀವನದಲ್ಲಿ ‘ಹಾಸ್‌ಪಿಸ್‌’ನಂತಹ ಜಾಗದ ವಾತಾವರಣದ ಬಗ್ಗೆ ನಮಗೆ ಅರಿವು ಇರುವುದಿಲ್ಲ. ಆದರೆ ಅಂತಹ ರೋಗಿಗಳನ್ನು ಸುತ್ತಮುತ್ತ ನೋಡಿರುತ್ತೇವೆ. ಅವರನ್ನು ನೋಡಿದಾಗ, ಅವರ ಸಂಬಂಧಿಕರ ಜೊತೆ ಮಾತನಾಡುವಾಗ ಸಿನಿಮಾದ ಸಂಭಾಷಣೆಗಳು ನೆನಪಾಗುತ್ತವೆ’ ಎಂದರು ಸಿರಿ. 

ADVERTISEMENT

‘ಕೇವಲ 18 ದಿನಗಳಲ್ಲೇ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿತ್ತು. ನನ್ನ ಹಿಂದಿನ ಸಿನಿಮಾಗಳೂ ಕಡಿಮೆ ಅವಧಿಯಲ್ಲೇ ಪೂರ್ಣಗೊಂಡಿದ್ದವು. ಹೆಚ್ಚು ವಿರಾಮವಿಲ್ಲದೆ ‘ಸ್ವಾತಿ ಮುತ್ತಿನ..’ ಚಿತ್ರೀಕರಣ ಪೂರ್ಣಗೊಳಿಸಿದ್ದೆವು. ಇದೊಂದು ಹೊಸ ಅನುಭವ. ‘ಪ್ರೇರಣಾ’ ಎನ್ನುವ ಪಾತ್ರದ ಬರವಣಿಗೆ ಶಕ್ತವಾಗಿದೆ. ಹೀಗಾಗಿ ಹೆಚ್ಚಿನ ಸ್ಕ್ರೀನ್‌ಸ್ಪೇಸ್‌ ನನಗೆ ದೊರಕಿದೆ. ರಾಜ್‌ ಸಹಜ ವ್ಯಕ್ತಿ. ಅವರಿಗೆ ಹಲವು ರೂಪಗಳಿಲ್ಲ. ನಿರ್ದೇಶಕರಾಗಿ ಅವರಿಗೆ ಕೆಲಸ ತೆಗಿಸಲು ಗೊತ್ತು, ಸಹ ಕಲಾವಿದರಾಗಿ ಮತ್ತೊಬ್ಬ ಕಲಾವಿದನಿಗೆ ಬೆಂಬಲ ನೀಡುವುದು, ಬರಹಗಾರನಾಗಿ ಅವರ ಕಲ್ಪನಾ ಲೋಕದಲ್ಲಿ ನಾವು ಇರಲು ಖುಷಿಯಾಗುತ್ತದೆ. ಅವರಿಂದ ಸಾಕಷ್ಟು ಕಲಿತಿದ್ದೇನೆ’ ಎನ್ನುವುದು ಸಿರಿ ಅಭಿಮತ. 

‘ಸದ್ಯ ‘ಆಬ್ರಕಡಾಬ್ರ’, ‘ಬಿಸಿ ಬಿಸಿ ಐಸ್‌ಕ್ರೀಂ’, ಅಭಿಜಿತ್‌ ಮಹೇಶ್‌ ನಿರ್ದೇಶನದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾಗಳ ಬಿಡುಗಡೆಗೆ ಎದುರುನೋಡುತ್ತಿದ್ದೇನೆ. ಜೊತೆಗೆ ಪಿಆರ್‌ಕೆ ಪ್ರೊಡಕ್ಷನ್‌ನ, ಆಶಿಕಾ ರಂಗನಾಥ್‌ ಅವರು ನಟಿಸಿರುವ ‘O2’ ಸಿನಿಮಾದಲ್ಲೂ ನಾನೊಂದು ಪಾತ್ರ ಮಾಡಿದ್ದೇನೆ. ಹೊಸ ಸಿನಿಮಾಗಳ ಮಾತುಕತೆ ನಡೆಯುತ್ತಿದೆ’ ಎಂದ ಸಿರಿ, ಮಾತಿಗೆ ವಿರಾಮವಿತ್ತರು. 

ಸಿರಿ ಮತ್ತು ರಾಜ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.