ಮುಂಬೈನ ಧಾರಾವಿಯಲ್ಲಿನ ಬೆಂಕಿಪೊಟ್ಟಣಗಳನ್ನು ಜೋಡಿಸಿಟ್ಟಂಥ ಮನೆಗಳ ಕೊಳೆಗೇರಿಗಳಲ್ಲಿ ಹಲವು ಕಥೆಗಳು ಉಸಿರಾಡುತ್ತಿರುತ್ತವೆ. ಜೆ.ಬಿ. ನಗರದ ಕೊಳೆಗೇರಿ ಹುಡುಗರಲ್ಲೂ ಕೆಲವರಿದ್ದಾರೆ. ಅವರು ದೊಗಳೆ ಟಿ–ಶರ್ಟ್, ಕೂಲಿಂಗ್ ಗ್ಲಾಸ್, ತಲೆಮೇಲೆ ಟೋಪಿ ಹಾಕಿಕೊಂಡು, ತಮ್ಮಷ್ಟಕ್ಕೆ ತಾವೇ ಯಾವುದೋ ಲಯಕ್ಕೆ ಹಾಡಿಕೊಳ್ಳುತ್ತಾ ಹೆಜ್ಜೆ ಹಾಕುವುದನ್ನು ಕಂಡರೆ ಈಗ ಜನ ಆಡಿಕೊಳ್ಳುವುದಿಲ್ಲ. ಯಾಕೆಂದರೆ, ಅದೇ ಕೊಳೆಗೇರಿಯ ಹುಡುಗ ಈಗ ‘ಡಿವೈನ್’ ಎಂಬ ಅಡ್ಡಹೆಸರಿನಲ್ಲಿ ರ‍್ಯಾಪರ್ ಆಗಿ ಜನಪ್ರಿಯ.
‘ಡಿವೈನ್’ನ ಮೂಲ ಹೆಸರು ವಿವಿಯನ್ ಫರ್ನಾಂಡಿಸ್. ಅಜ್ಜಿಯ ಬೆರಳು ಹಿಡಿದು ಚರ್ಚ್‌ಗೆ ಹೋಗುತ್ತಿದ್ದಾಗ ಕಿವಿಮೇಲೆ ಭಕ್ತಿಗೀತೆಗಳು ಬೀಳುತ್ತಿದ್ದವು. ಕಣ್ಮುಚ್ಚಿಕೊಂಡರೆ ಕಷ್ಟಗಳೆಲ್ಲ ಕರಗಿದಂಥ ಭಾವ. ಅದಕ್ಕೇ ರ‍್ಯಾಪರ್ ಆದಮೇಲೆ ‘ಡಿವೈನ್’ ಎಂಬ ಅಡ್ಡಹೆಸರನ್ನು ಇಟ್ಟುಕೊಂಡದ್ದು.
ಅಪ್ಪ ಕುಡುಕ. ಮನೆಯಲ್ಲಿನ ಚಿಕ್ಕಾಸನ್ನೂ ಬಿಡುತ್ತಿರಲಿಲ್ಲ. ಅವ್ವ ಬೇಸತ್ತು ಕತಾರ್‌ಗೆ ಹೊರಟರು. ಅಲ್ಲಿ ಕೆಲಸ ಮಾಡಲೆಂದು ವೀಸಾ ಸಿಕ್ಕಿತ್ತು. ದುಡಿದು ಮಕ್ಕಳ ಓದಿಗೆ ಹಣ ಕಳುಹಿಸುತ್ತಿದ್ದರು. ಸಹಾರ್ ಕೊಳೆಗೇರಿಯಲ್ಲಿ ಒಂದು ಮನೆಯನ್ನೂ ಖರೀದಿಸಲು ಅಮ್ಮ ಕಳುಹಿಸಿದ ಹಣ ಸಾಕಾಯಿತು. ಆದರೆ, ಅಪ್ಪ ಆ ಮನೆಯನ್ನೂ ಮಾರಿ, ವಿವಿಯನ್ ಫರ್ನಾಂಡಿಸ್ ಹಾಗೂ ಸಹೋದರನಿಗೆ ಹಣದ ಪಾಲನ್ನು ಕೊಟ್ಟು ಕೈತೊಳೆದುಕೊಂಡರು. ಅಲ್ಲಿಂದ ಜೆ.ಬಿ. ನಗರದ ಕೊಳೆಗೇರಿಯೇ ಹುಡುಗನಿಗೆ ದಿಕ್ಕು ತೋರಿಸಿತು.
ಚರ್ಚ್‌ಗೆ ಹೋದಾಗ ಹೊರಗೆ ಬಿಟ್ಟಿರುತ್ತಿದ್ದ ಚೆಂದದ ಬೂಟುಗಳನ್ನೆಲ್ಲ ಅಜ್ಜಿಗೆ ತೋರಿಸುತ್ತಿದ್ದ ವಿವಿಯನ್, ತನಗೂ ಅಂಥದ್ದೊಂದು ಜೊತೆ ಬೇಕು ಎಂದು ಪಟ್ಟು ಹಿಡಿಯುತ್ತಿದ್ದುದನ್ನು ಇನ್ನೂ ಮರೆತಿಲ್ಲ. ಏಳು ವರ್ಷ ದೊಡ್ಡವನಾದ ಆಂಥೋನಿ ಎಂಬ ಸ್ನೇಹಿತನಿದ್ದ. ಸೇಂಟ್ ಜಾನ್ಸ್ ಶಾಲೆಗೆ ವಿವಿಯನ್‌ನನ್ನು ಸೇರಿಸಿದ್ದೇ ಆತ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಹುಡುಕಿಬಂದದ್ದರಿಂದ ಅವನೂ ಮಧ್ಯಪ್ರಾಚ್ಯಕ್ಕೆ ಹೊರಟ.
14ನೇ ವಯಸ್ಸಿನಿಂದ ವಿವಿಯನ್ ಒಂಟಿ. ಅಮ್ಮ ಕಳುಹಿಸುವ ದುಡ್ಡು ಒಂದು ಕಡೆ. ದುರ್ಜನರ ಸಂಗ ಇನ್ನೊಂದು ಕಡೆ. ಹಣ ಮಾಡಲು ಅಡ್ಡದಾರಿ ಹಿಡಿದರೂ ಅದರಲ್ಲಿ ಹೆಚ್ಚು ದೂರ ಸಾಗಲಿಲ್ಲ.
ಬಾಂದ್ರಾ ನ್ಯಾಷನಲ್ ಕಾಲೇಜು ಸೇರಿದ ಮೇಲೆ ರ‍್ಯಾಪರ್ ‘50 ಸೆಂಟ್’ ಫೋಟೊವೊಂದನ್ನು ನೋಡಿದ ವಿವಿಯನ್, ಆತ ಯಾರೆಂದು ಸ್ನೇಹಿತರನ್ನು ಕೇಳಿ ತಿಳಿದುಕೊಂಡದ್ದು. ಅಲ್ಲಿಂದ ರ‍್ಯಾಪ್ ಸಂಗೀತದಲ್ಲಿ ಆಸಕ್ತಿ ಹುಟ್ಟಿತು. ಟ್ಯುಪ್ಯಾಕ್, ನಾಸ್ ಕಟ್ಟಿದ ಹಾಡುಗಳಿಂದ ಪ್ರೇರೇಪಣೆಗೊಂಡ ವಿವಿಯನ್, ಮೊದ ಮೊದಲು ಕಟ್ಟಿದ್ದು ಇಂಗ್ಲಿಷ್‌ನ ರ‍್ಯಾಪ್. ಅದರಲ್ಲಿ ಏನೋ ಕೊರತೆ ಇದೆ ಎನ್ನಿಸಿದ್ದೇ ಹಿಂದಿ, ಅದರಲ್ಲೂ ಕೊಳೆಗೇರಿ ಹುಡುಗರ ಮಾತಿನ ಶೈಲಿಯ ಪದಗಳನ್ನೇ ಬಳಸಿ ಹಾಡುಗಳನ್ನು ಕಟ್ಟಲಾರಂಭಿಸಿದ.
‘ಯೇ ಮೇರಾ ಬಾಂಬೆ’ ಎಂಬ ಹಾಡು ಬರೆದು, ತನ್ನದೇ ಗಲ್ಲಿಗಳಲ್ಲಿ ಅದನ್ನು ಚಿತ್ರೀಕರಿಸಿದ. 2013ರಲ್ಲಿ ಆ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರು. ಸೋನಿ ಕಂಪನಿಯು ಆ ಹಾಡನ್ನು ಗುರುತಿಸಿತು. ಅದರ ನಿರ್ಮಾಣದಲ್ಲಿಯೇ ‘ಮೇರೆ ಗಲ್ಲಿ ಮೇ’ ಎಂಬ ಎರಡನೇ ಗೀತೆ ಬಂದದ್ದು. ಅಲ್ಲಿಂದ ನಸೀಬೇ ಬದಲಾಯಿತು. ‘ಜಂಗ್ಲಿ ಶೇರ್’ ಎಂಬ ಮತ್ತೊಂದು ಹಾಡೂ ಜನಪ್ರಿಯವಾಯಿತು. ರಫ್ತಾರ್, ಬಾದ್‌ಶಾ, ಯೋ ಯೋ ಹನಿಸಿಂಗ್ ಅಲೆಗಳ ನಡುವೆಯೂ ‘ಡಿವೈನ್’ ಬದುಕು ಬದಲಾದದ್ದು ಗಮನಾರ್ಹ.
ಈಗ ಗಮನ ಸೆಳೆದಿರುವ ‘ಗಲ್ಲಿ ಬಾಯ್’ ಹಿಂದಿ ಚಿತ್ರದ ಕಥನದಲ್ಲಿ ಡಿವೈನ್ ಬದುಕಿನ ಕೆಲವು ಪುಟಗಳೂ ಇವೆ; ಅವರು ಕಟ್ಟಿರುವ ಗೀತೆಗಳೂ. ಈ ಸಿನಿಮಾ ನೋಡಿದ ಅನೇಕರು ಅವರ ಹಳೆಯ ಹಾಡುಗಳನ್ನು ಯೂಟ್ಯೂಬ್‌ನಲ್ಲಿ ನೋಡತೊಡಗಿರುವುದು ಇನ್ನೊಂದು ವಿಶೇಷ.
(ಈ ಬರಹ ಮೊದಲ ಬಾರಿಗೆ ಫೆಬ್ರುವರಿ 24,2019ರಂದು ಪ್ರಕಟವಾಗಿತ್ತು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.