ಲಾಕ್‌ಡೌನ್ ಸಂದರ್ಭದಲ್ಲಿ ಮಾನಸಿಕ ಖಿನ್ನತೆ ಎದುರಿಸುತ್ತಿರುವವರಿಗೆ ತಮ್ಮ ಚಿನ್ನದಂಥ ನಗುವನ್ನು ಹಂಚುತ್ತಿದ್ದಾರೆ ನಟಿ ಸೋನು ಗೌಡ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ವಿಡಿಯೊ ಚಾಟ್ ಮಾಡುತ್ತಿದ್ದಾರೆ ಅವರು.
‘ಮನೆಯೊಳಗೆ ಇದ್ದು ಮನಸ್ಸು ಜಡ್ಡುಗಟ್ಟಿರುತ್ತದೆ. ಇಂಥ ಸಂದರ್ಭದಲ್ಲಿ ಸಣ್ಣಪುಟ್ಟ ಕೌಟುಂಬಿಕ ಕಲಹಗಳೂ ದೊಡ್ಡಮಟ್ಟದಲ್ಲಿ ಮನಸ್ಸಿಗೆ ಗಾಸಿ ಮಾಡುತ್ತವೆ. ಹೀಗೆ ಬೇಸರದಲ್ಲಿ ಇರುವವರೊಂದಿಗೆ ಒಬ್ಬ ಸ್ನೇಹಿತೆಯಾಗಿ ಮಾತನಾಡುತ್ತೇನೆ. ಒಂದಿಷ್ಟು ಸಮಾಧಾನ ಮಾಡಲು ಯತ್ನಿಸುತ್ತೇನೆ’ ಎಂದು ತಮ್ಮ ವಿಡಿಯೊ ಚಾಟ್ ಬಗ್ಗೆ ಹೇಳಿಕೊಳ್ಳುತ್ತಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7ರಿಂದ 8ಗಂಟೆಯವರೆಗೆ ವಿಡಿಯೊ ಚಾಟ್‌ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದಾರೆ.
ನೆಮ್ಮದಿ ಮತ್ತು ಪ್ರಶಾಂತವಾದ ಮನಸ್ಥಿತಿ ಇರಬೇಕು ಎಂದರೆ ಮನೆಯಲ್ಲೇ ಹೇಗೆ ಕ್ರಿಯಾಶೀಲರಾಗಿರಬೇಕು ಎನ್ನುವುದನ್ನು ಹೇಳುವ ಸೋನು, ಸುತ್ತಲಿನ ಪರಿಸರ ಕೂಡ ಸಕಾರಾತ್ಮಕವಾಗಿರಬೇಕು ಎನ್ನುತ್ತಾರೆ. ಲಾಕ್‌ಡೌನ್ ಸಮಯ ಕಳೆಯಲು ಹಸಿರು ಪ್ರೇಮಿಯಾಗಿದ್ದಾರೆ. ತಮಗೆ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಸಿಕ್ಕ ಗಿಡಗಳನ್ನೆಲ್ಲಾ ಮನೆಯಲ್ಲಿ ಪೋಷಿಸುತ್ತಿದ್ದಾರೆ. ‘ಗಿಡ ನೆಟ್ಟು ಅವುಗಳ ಆರೈಕೆ ಮಾಡುತ್ತಾ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ’ ಎನ್ನುತ್ತಾರೆ. ಪುಸ್ತಕ ಓದುವುದು ಇವರ ನಚ್ಚಿನ ಹವ್ಯಾಸ.
‘ಜ್ಞಾನ ನಮ್ಮ ತಲೆಯಲ್ಲಿ ತುಂಬಿದಂತೆ, ಅಹಂ ಇಲ್ಲವಾಗುತ್ತದೆ. ಪುಸ್ತಕಗಳ ಓದು ನಮ್ಮ ವ್ಯಕ್ತಿತ್ವಕ್ಕೊಂದು ಸಂಸ್ಕಾರ ನೀಡುತ್ತದೆ. ಈ ಸಮಯದಲ್ಲಿ ಓದು ಒಂದು ಉತ್ತಮ ಹವ್ಯಾಸ’ ಎಂದು ಹೇಳುತ್ತಾರೆ. ‘ಇರುವುದೆಲ್ಲವ ಬಿಟ್ಟು’, ‘ನಟನೆಯ ಪಾಠಗಳು’ ಹಾಗೂ ‘ವಾಟ್ ಕೆನ್ ಐ ಗಿವ್’ ಪುಸ್ತಕಗಳನ್ನು ಓದುತ್ತಿದ್ದಾರೆ.
ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ದೈಹಿಕ ಆರೋಗ್ಯವೂ ಚೆಂದವಾಗೇ ಇರುತ್ತೆ ಎನ್ನುವ ಸೋನು ತಮ್ಮ ಡಯೆಟ್‌ನಲ್ಲಿ ಪುದೀನ ಜ್ಯೂಸ್, ಓಟ್ಸ್ ಮಿಲ್ಕ್ ಶೇಕ್, ರಾಗಿ ಮುದ್ದೆ, ಮೊಸರು ಹಾಗೂ ಮೊಟ್ಟೆ ಇರುವಂತೆ ನೋಡಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.