ADVERTISEMENT

ದಕ್ಷಿಣದ ತಾರಾ ಸಮ್ಮಿಲನ

ದೋಹಾದಲ್ಲಿ ಪ್ರಶಸ್ತಿ ಸಂಭ್ರಮ

ಬಿ.ಎಂ.ಹನೀಫ್
Published 22 ಆಗಸ್ಟ್ 2019, 19:31 IST
Last Updated 22 ಆಗಸ್ಟ್ 2019, 19:31 IST
   

ಆಗಸ್ಟ್‌ 15ರಂದು ದೇಶದಾದ್ಯಂತದಿನವಿಡೀ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಂಡುಬಂದರೆ, ರಾತ್ರಿ ದೋಹಾ ಕತಾರ್‌ನ ಲುಸೇಲ್‌ ಸ್ಪೋರ್ಟ್ಸ್‌ ಸ್ಟೇಡಿಯಂನಲ್ಲಿ ದಕ್ಷಿಣ ಭಾರತದ ಚಿತ್ರತಾರೆಯರ ಪ್ರಶಸ್ತಿ ಸಂಭ್ರಮ. ಪ್ಯಾಂಟಲೂನ್ಸ್‌ ಪ್ರಾಯೋಜಕತ್ವದ ಸೈಮಾ (ಸೌತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವೀ ಅವಾರ್ಡ್ಸ್) ಪ್ರಶಸ್ತಿಗಳನ್ನು ಸ್ವೀಕರಿಸಲು ತಮಿಳು, ತೆಲುಗು, ಮಲಯಾಳ ಮತ್ತು ಕನ್ನಡ ಚಿತ್ರರಂಗದ ಹಲವು ತಾರೆಯರು ದೋಹಾದಲ್ಲಿ ಹಾಜರಿದ್ದರು. ಲುಸೇಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಹಬ್ಬದ ಸಂಭ್ರಮ. ದಕ್ಷಿಣ ಭಾರತದ ನಟ ನಟಿಯರನ್ನು ನೋಡಲು ಮಲಯಾಳಿಗಳು, ಕನ್ನಡಿಗರು, ತೆಲುಗರು ಮತ್ತು ತಮಿಳರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಕೊಲ್ಲಿ ದೇಶಗಳ ಪೈಕಿ ಮುಂಚೂಣಿಯ ಶ್ರೀಮಂತ ರಾಷ್ಟ್ರವಾದ ಕತಾರ್‌ನ ಒಟ್ಟು ಜನಸಂಖ್ಯೆ ಸುಮಾರು 27.40 ಲಕ್ಷ. ಅದರಲ್ಲಿ ಭಾರತೀಯರ ಸಂಖ್ಯೆ ಸುಮಾರು 6.90 ಲಕ್ಷ. ಅದರಲ್ಲೂ ದೊಡ್ಡ ಸಂಖ್ಯೆಯಲ್ಲಿ ಇರುವವರು ದಕ್ಷಿಣ ಭಾರತೀಯರೇ.

ಸಹಜವಾಗಿಯೇ ಸ್ಟೇಡಿಯಂನಲ್ಲಿ ಮಲಯಾಳ, ತೆಲುಗು, ತಮಿಳು ಮತ್ತು ಕನ್ನಡದ ಕಲರವ ಕೇಳಿಸುತ್ತಿತ್ತು. 15ರ ಮೊದಲ ರಾತ್ರಿ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರಶಸ್ತಿ ಪ್ರದಾನ ನಡೆದರೆ, ಮರುದಿನ ರಾತ್ರಿ ಮಲಯಾಳ ಮತ್ತು ತಮಿಳು ಚಿತ್ರತಾರೆಯರ ಪ್ರಶಸ್ತಿಯ ರಂಗು. ಮೆಗಾಸ್ಟಾರ್‌ ಚಿರಂಜೀವಿ ಮತ್ತು ಕೊಲ್ಲಿ ದೇಶಗಳಲ್ಲಿ ಅತ್ಯಂತ ಜನಪ್ರಿಯ ನಟ ಮೋಹನ್‌ಲಾಲ್‌ ಎರಡು ದಿನಗಳ ಸಮಾರಂಭಕ್ಕೆ ದೊಡ್ಡ ತಾರಾ ಆಕರ್ಷಣೆ ಒದಗಿಸಿದ್ದರು. ಜೊತೆಗೆ ಯಶ್‌, ರಾಧಿಕಾ ಶರತ್‌ ಕುಮಾರ್‌, ಅಲ್ಲು ಅರವಿಂದ್‌, ಸಾಯಿಪ್ರಕಾಶ್, ತ್ರಿಶಾ, ಧನುಷ್‌, ಕೀರ್ತಿ ಸುರೇಶ್, ವಿಜಯ್‌ ದೇವರಕೊಂಡ, ಶ್ರೇಯಾ ಶರಣ್‌, ನಿಧಿ ಸುಬ್ಬಯ್ಯ, ಶಾನ್ವಿ ಶ್ರೀವಾಸ್ತವ, ಪ್ರಜ್ವಲ್‌ ದೇವರಾಜ್‌, ಪಾ.ರಂಜಿತ್‌ ಮುಂತಾಗಿ ಹಲವು ತಾರೆಯರು ಸಮಾರಂಭಕ್ಕೆ ರಂಗು ತುಂಬಿದ್ದರು.

ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದವರು ‘ಕೆಜಿಎಫ್‌’ನ ಯಶ್‌. ಜೊತೆಗೇ ಅವರಿಗೊಂದು ವಿಶೇಷ ಪ್ರಶಸ್ತಿಯೂ ಇತ್ತು. ಅದು ‘ದಕ್ಷಿಣ ಭಾರತದ ಅತ್ಯಂತ ಸ್ಟೈಲಿಷ್‌ ನಟ’ ಎಂಬ ಬಿರುದು. ಪ್ಯಾಂಟಲೂನ್ಸ್‌ ಪ್ರಾಯೋಜಿತ ಈ ಪ್ರಶಸ್ತಿಯನ್ನು ಪಡೆಯಲು ಯಶ್‌ ವೇದಿಕೆಯ ಮೇಲೇರಿದಾಗ ಕನ್ನಡಿಗರು ಮಾತ್ರವಲ್ಲ ತೆಲುಗರು ಮತ್ತು ತಮಿಳರೂ ಜೋರಾಗಿ ಚಪ್ಪಾಳೆ ತಟ್ಟಿದ್ದು ವಿಶೇಷ. ಅಂದರೆ ಕೆಜಿಎಫ್‌ ಆ ಭಾಷೆಗಳಲ್ಲೂ ಸಾಕಷ್ಟು ಯಶಸ್ಸು ಪಡೆದಿದೆ ಎನ್ನುವುದು ಸಾಬೀತಾಯಿತು. ಉದ್ದನೆಯ ಟ್ರಿಮ್‌ ಗಡ್ಡಧಾರಿ ಯಶ್‌ ನೀಲಿ ಸೂಟ್‌ನಲ್ಲಿ ಸಖತ್ತಾಗಿ ಮಿಂಚಿದರು. ಜೊತೆಗೆ ಕೆಜಿಎಫ್‌ ತಂಡಕ್ಕೆ ಪ್ರಶಸ್ತಿಗಳ ಮಹಾಪೂರವೇ ಹರಿದುಬಂತು. ನಿರ್ದೇಶಕ ಪ್ರಶಾಂತ್‌ ನೀಲ್‌, ಸಂಗೀತ ನಿರ್ದೇಶಕ ರವಿ ಬಸ್ರೂರ್‌, ಛಾಯಾಗ್ರಾಹಕ ಭುವನ್‌ ಗೌಡ, ಅಚ್ಯುತ ಅವರಿಗೂ ಪ್ರಶಸ್ತಿ ಪಡೆದ ಹೆಮ್ಮೆ. ಗಾಯಕಿ ಅನುರಾಧಾ ಭಟ್‌, ನಟಿ ಅನುಪಮಾ ಗೌಡ, ಡ್ಯಾನಿಶ್‌ ಸೇಠ್‌, ‘ಅಯೋಗ್ಯ’ದ ನಿರ್ದೇಶಕ ಮಹೇಶ್‌ ಕುಮಾರ್‌, ಗೀತರಚನೆಕಾರ ಚೇತನ್‌ ಕುಮಾರ್‌, ಹಾಸ್ಯನಟ ಪ್ರಕಾಶ್‌ ಮತ್ತು ನಿರೂಪಕ ವಿಜಯ್‌ ರಾಘವೇಂದ್ರ ಸಮಾರಂಭದಲ್ಲಿ ಕನ್ನಡದ ಕಂಪು ಅರಳಿಸಿದರು.

ADVERTISEMENT

ಸಮಾರಂಭದಲ್ಲಿ ಬಹುತೇಕ ಗಡ್ಡಧಾರಿಗಳೇ ಇದ್ದಿದ್ದು ಇತ್ತೀಚಿನ ದಕ್ಷಿಣ ಭಾರತೀಯ ಚಿತ್ರರಂಗದ ಹೊಸ ಫ್ಯಾಷನ್‌ ಎನ್ನುವಂತೆ ಕಂಡು ಬಂತು. ಯಶ್‌, ಮಲಯಾಳಿ ನಟ ಟೊವಿನೊ ಥಾಮಸ್‌, ವಿಜಯ ದೇವರಕೊಂಡ, ಸಂಗೀತ ನಿರ್ದೇಶಕ ಅನಿರುಧ್‌ ರವಿಚಂದ್ರನ್‌, ನಟ ಜಯಂ ರವಿ, ನಿರ್ದೇಶಕ ಪಾಂಡಿರಾಜ್‌, ನಟ ಕದಿರ್‌, ಕ್ಯಾಮೆರಾಮನ್‌ ಆರ್‌.ಡಿ.ರಾಜಶೇಖರ್‌, ವಿಜಯ್‌ ಜೇಸುದಾಸ್‌ ಮುಂತಾಗಿ ಬಹುತೇಕ ಗಡ್ಡಧಾರಿಗಳು ಒಂದಲ್ಲ ಒಂದು ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಎರಡು ದಿನಗಳ ಸಮಾರಂಭದಲ್ಲಿ ಹಾಡು ನೃತ್ಯಗಳ ಸಂಭ್ರಮಕ್ಕೂ ಬರ ಇರಲಿಲ್ಲ. ತೆಲುಗಿನಲ್ಲಿ ಅತ್ಯಧಿಕ ಪ್ರಶಸ್ತಿಗಳನ್ನು ಗಳಿಸಿದ ‘ರಂಗಸ್ಥಲಂ’ನ ನಟಿ ಅನಸೂಯಾ ಭಾರಧ್ವಾಜ್‌ ತನ್ನ ‘ಆನ್‌ ದಿ ಸ್ಪಾಟ್‌’ ನೃತ್ಯಕ್ಕೆ ಅತ್ಯಧಿಕ ಚಪ್ಪಾಳೆ ಗಿಟ್ಟಿಸಿದರು. ಇಡೀ ದಕ್ಷಿಣ ಭಾರತದ ಚಿತ್ರರಂಗ ಒಂದೆಡೆ ಸೇರುವಂತೆ ಮಾಡಿದ ಸಂಘಟಕರು ಪ್ರಶಂಸೆಗೆ ಅರ್ಹರು. ಎಂಟನೇ ಸೈಮಾ ಪ್ರಶಸ್ತಿ ಸಮಾರಂಭ ಹಿಂದಿನ ಸಮಾರಂಭಗಳನ್ನು ಮೀರಿಸಿ ನಡೆಯಿತು ಎನ್ನುವುದು ಅಲ್ಲಿದ್ದ ಹಲವು ತಾರೆಯರ ಅನಿಸಿಕೆಯೂ ಹೌದು.

ಚೆನ್ನೈ, ತಿರುವನಂತಪುರ ಮತ್ತು ಹೈದರಾಬಾದ್‌ಗಳಲ್ಲಿ ದಕ್ಷಿಣದ ಇಂತಹ ತಾರಾ ಸಂಭ್ರಮಗಳು ಆಗಾಗ್ಗೆ ನಡೆಯುವುದುಂಟು. ಬೆಂಗಳೂರಿನಲ್ಲೂ ದಕ್ಷಿಣದ ಎಲ್ಲ ಭಾಷೆಗಳ ಚಿತ್ರತಾರೆಯರ ಪ್ರಶಸ್ತಿ ಸಂಭ್ರಮ ನಡೆದರೆ ಒಳ್ಳೆಯದು ಅನ್ನಿಸಿತು. ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಸಂದರ್ಭದಲ್ಲಿ ಇಂತಹ ಸಂಭ್ರಮಕ್ಕೆ ಅವಕಾಶ ಇರುತ್ತದೆ. ಆದರೆ ನಮ್ಮಲ್ಲಿ ಸ್ಟಾರ್‌ಗಳು ಚಿತ್ರೋತ್ಸವದತ್ತ ತಲೆ ಹಾಕುವುದೂ ಕಡಿಮೆಯೇ. ಇನ್ನು ಪ್ರಶಸ್ತಿ ಸಂಭ್ರಮಕ್ಕೆ ಬರಬಹುದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.