ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕನ್ನಡದಲ್ಲಿ ಗಾನಯಾನ ಆರಂಭಿಸಿದ್ದು ‘ನಕ್ಕರೇ ಅದೇ ಸ್ವರ್ಗ’ ಚಿತ್ರದ ಮೂಲಕ. 1966ರ ಡಿಸೆಂಬರ್ 15ರಂದು ತೆಲುಗಿನ ‘ಶ್ರೀ ಶ್ರೀ ಶ್ರೀ ಮರ್ಯಾದ ರಾಮಣ್ಣ’ ಸಿನಿಮಾಕ್ಕೆ ಮೊದಲ ಹಾಡು ಹಾಡಿದ ಬಳಿಕ ಕನ್ನಡದಲ್ಲಿಯೇ ತಮ್ಮ ಎರಡನೇ ಹಾಡಿಗೆ ಧ್ವನಿಯಾಗಿದ್ದು ವಿಶೇಷ.
‘ನಕ್ಕರೇ ಅದೇ ಸ್ವರ್ಗ’ ಚಿತ್ರದ ‘ಕನಸಿದೊ ನನಸಿದೊ...’ ಎಂಬ ಡ್ಯುಯೆಟ್ ಹಾಡಿನ ಮೂಲಕ ಚಂದನವನದಲ್ಲಿ ಅವರ ಗಾನಮಾಧುರ್ಯ ಆರಂಭಗೊಂಡಿತು. 4 ಸಾವಿರಕ್ಕೂ ಹೆಚ್ಚು ಕನ್ನಡದ ಗೀತೆಗಳಿಗೆ ಅವರು ಧ್ವನಿಯಾಗಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ಸ್‌ನ ‘ಮಾಯಾಬಜಾರ್ 2016’ ಚಿತ್ರದ ‘ನಿಮಗೂ ಗೊತ್ತು ನಮಗೂ ಗೊತ್ತು ಕಾಲ ಎಂದೋ ಎಕ್ಕೋಟ್ಟೋಯ್ತು...’ ಸಾಂಗ್ ಕನ್ನಡದಲ್ಲಿ ಅವರು ಹಾಡಿದ ಕೊನೆಯ ಹಾಡಾಗಿದೆ. ಈ ಹಾಡಿಗೆ ನಟ ಪುನೀತ್ ರಾಜ್‌ಕುಮಾರ್ ಡಾನ್ಸ್ ಮಾಡಿದ್ದರು.
ನಟರಾದ ಅನಂತನಾಗ್, ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್, ರವಿಚಂದ್ರನ್ ಅವರ ಧ್ವನಿಗೆ ತಕ್ಕಂತೆ ಹಾಡುಗಳನ್ನು ಹಾಡಿದ್ದು ಅವರ ಹಿರಿಮೆ.
ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟ.ಎಂ. ಸೌಂದರ್ ರಾಜನ್, ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್ ಗಾಯನದಲ್ಲಿ ವಿರಾಜಮಾನರಾಗಿದ್ದ ಅವಧಿಯಲ್ಲಿ ಎಸ್‌ಬಿಪಿ ಹಾಡುಗಾರಿಕೆ ಆರಂಭಿಸಿದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.