‘2020ರ ಅತಿದೊಡ್ಡ ಆ್ಯಕ್ಷನ್, ಥ್ರಿಲ್ಲರ್ ವೆಬ್ ಸರಣಿ’ ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 17ರಂದು ಪ್ರಸಾರ ಆಗಲಿದೆ. ಭಾರತದಲ್ಲಿ ನಡೆದ ಕೆಲವು ಭಯೋತ್ಪಾದಕ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಭಯೋತ್ಪಾದಕನನ್ನು ಪತ್ತೆ ಮಾಡುವುದರ ಕಥೆ ಎಂಟು ಕಂತುಗಳ ‘ಸ್ಪೆಷಲ್ ಆಪ್ಸ್’ ಹೆಸರಿನ ಈ ಸರಣಿಯಲ್ಲಿ ಇರಲಿದೆ.
‘ಈ ಕಥೆಯು 19 ವರ್ಷಗಳನ್ನು, 12 ದೇಶಗಳನ್ನು ವ್ಯಾಪಿಸಿಕೊಂಡಿದೆ. ಗುಪ್ತದಳದ ಆರು ಜನ ಏಜೆಂಟರು, ಒಬ್ಬ ಮಾಸ್ಟರ್‌ಮೈಂಡ್ ಈ ಕಥೆಯ ಕೇಂದ್ರದಲ್ಲಿ ಇರುತ್ತಾರೆ. 2001ರಲ್ಲಿ ದೇಶದ ಸಂಸತ್ತಿನ ಮೇಲೆ ನಡೆದ ದಾಳಿಯಿಂದ ಕಥೆ ಆರಂಭವಾಗುತ್ತದೆ’ ಎಂದು ಹಾಟ್‌ಸ್ಟಾರ್ ಹೇಳಿದೆ.
ಈ ಸರಣಿಯಲ್ಲಿ ಕಾಣುವ ದಾಳಿಗಳು ನೈಜ. ಆದರೆ ಹೆಣೆದಿರುವ ಕಥೆ ಕಾಲ್ಪನಿಕ. ಮುಂಬೈ, ಕಾಶ್ಮೀರದಲ್ಲಿ ನಡೆಯುವ ದಾಳಿಗಳೂ ಈ ಕಥೆಯ ಭಾಗ. ‘ಭಾರತದ ಅತ್ಯಂತ ಅಪಾಯಕಾರಿ ಶತ್ರುವಿಗಾಗಿ ದೇಶದ ಗುಪ್ತದಳ ನಡೆಸುವ ಅತ್ಯಂತ ಸುದೀರ್ಘ ಅವಧಿಯ ಹುಡುಕಾಟದ ಕಥೆ ಇದು’ ಎಂಬುದು ಹಾಟ್‌ಸ್ಟಾರ್ ನೀಡಿರುವ ವಿವರಣೆ. ಈ ಸರಣಿಯ ಕಥೆ ನೀರಜ್ ಪಾಂಡೆ, ದೀಪಕ್ ಕಿಂಗ್ರಾನಿ ಮತ್ತು ಬೆನಜೀರ್ ಅಲಿ ಫಿದಾ ಅವರದ್ದು. ಇವರು ಭಾರತದ ಗುಪ್ತದಳದ ಕಾರ್ಯವನ್ನು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರಂತೆ. ಈ ಸರಣಿಯು ವೀಕ್ಷಕರಿಗೆ ಸಿಕ್ಕಾಪಟ್ಟೆ ಥ್ರಿಲ್ ನೀಡಲಿದೆ ಎಂದೂ ಹಾಟ್‌ಸ್ಟಾರ್ ಹೇಳಿದೆ. ಸರಣಿಯನ್ನು ಟರ್ಕಿ, ಅಜಬೈಜಾನ್, ಜೋರ್ಡಾನ್‌ನಲ್ಲಿ ಕೂಡ ಚಿತ್ರೀಕರಿಸಲಾಗಿದೆ.
ಇಡೀ ಸರಣಿಯು ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.