ಹೈದರಾಬಾದ್: ‘ಆರ್‌ಆರ್‌ಆರ್’ ಸಿನಿಮಾದ ಸೂಪರ್ ಹಿಟ್‌ನ ಸಂತಸದಲ್ಲಿರುವ ಟಾಲಿವುಡ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ಅವರು ತೆಲುಗು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಹೊಸ ಪ್ರತಿಭೆಯೊಬ್ಬರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮೇ 26 ರಂದು ಬಿಡುಗಡೆಯಾಗಿರುವ ತೆಲುಗಿನ ‘ಮೇಮ್ ಫೇಮಸ್’ (Mem Famosus) ಎಂಬ ಹೊಸ ಪ್ರತಿಭೆಗಳ ಹೊಸ ಸಿನಿಮಾ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರವನ್ನು ಸುಮಂತ್ ಪ್ರಭಾಸ್ ಎನ್ನುವ 27 ವರ್ಷದ ಯುವಕ ರಚಿಸಿ ನಿರ್ದೇಶಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಜಮೌಳಿ ಅವರು, ಚಿತ್ರದ ಪ್ರಧಾನ ಪಾತ್ರದಲ್ಲೂ ಅಭಿನಯಿಸಿರುವ ಸುಮಂತ್ ಪ್ರಭಾಸ್ ಅವರನ್ನು ಕೊಂಡಾಡಿದ್ದಾರೆ.
‘ಬಹಳ ದಿನಗಳ ನಂತರ ನಾನು ಥಿಯೇಟರ್‌ನಲ್ಲಿ ಮೇಮ್ ಫೇಮಸ್ ಸಿನಿಮಾವನ್ನು ನೋಡಿದೆ. ಅದರಲ್ಲೂ ಈ ಹುಡುಗ ಸುಮಂತ್ ಪ್ರಭಾಸ್‌ನನ್ನು ನೋಡಿ ಬೆರಗಾದೆ. ಆತ ನಟ ನಿರ್ದೇಶಕನಾಗಿ ಉಜ್ವಲ ಭವಿಷ್ಯವನ್ನು ಹೊಂದಿದ್ದಾನೆ. ಎಲ್ಲ ಪಾತ್ರಗಳನ್ನು ತುಂಬಾ ಚೆನ್ನಾಗಿ ಹೆಣೆಯಲಾಗಿದೆ ಹಾಗೂ ಎಲ್ಲರ ಅಭಿನಯ ಅತ್ಯಂತ ಸಹಜವಾಗಿದೆ. ಯುವಕರನ್ನು ಪ್ರೋತ್ಸಾಹಿಸಬೇಕು ಕಣ್ರಿ, ಹಿಂದೆ ಜಗ್ಗಬಾರದು’ ಎಂದು ಟ್ವೀಟ್ ಮಾಡಿದ್ದಾರೆ.
ಮೇಮ್ ಫೇಮಸ್ ಸಿನಿಮಾವನ್ನು ಅನುರಾಗ್ ರೆಡ್ಡಿ ಹಾಗೂ ಇತರರು ನಿರ್ಮಾಣ ಮಾಡಿದ್ದಾರೆ. ಇದು ತೆಲಗಾಂಣದ ಸುಂದರ ಹಳ್ಳಿಯೊಂದರಲ್ಲಿ ನಡೆಯುವ ಮೂರು ಯುವಕರ ಕಥೆಯಾಗಿದೆ. ಸುಮಂತ್ ಪ್ರಭಾಸ್ ಜೊತೆ ಸಾರ್ಯಾ ಲಕ್ಷ್ಮಣ್, ಮಣಿ ಆಯಿಗುರಲಾ, ಕಿರಣ್ ಮಾಚಾ. ಅಂಜಿ ಮಾಮಾ, ಮುರುಳಿಧರ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗ ಬಹುತೇಕ ಹೊಸಬರೇ ತುಂಬಿದ್ದಾರೆ.
ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದಿರುವ ಸುಮಂತ್ ಪ್ರಭಾಸ್ ಮೊದಲ ಹೆಸರು ಸುಮಂತ್ ರೆಡ್ಡಿ. ನಟ ಪ್ರಭಾಸ್ ಮೇಲಿನ ಅಭಿಮಾನದಿಂದ ಅವರು ತಮ್ಮ ಹೆಸರನ್ನು ಸುಮಂತ್ ಪ್ರಭಾಸ್ ಎಂದು ಬದಲಾಯಿಸಿಕೊಂಡಿದ್ದಾರೆ. ಸಿನಿಮಾ ವೃತ್ತಿಗೆ ಬರುವ ಮುನ್ನ ಅವರು ಯುಟ್ಯೂಬರ್ ಹಾಗೂ ಸೊಶೀಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.