ADVERTISEMENT

ಗೃಹಸ್ಥ ಗೂಢಾಚಾರಿಯ ಕಥನ

ನವೀನ ಕುಮಾರ್ ಜಿ.
Published 3 ಅಕ್ಟೋಬರ್ 2019, 19:30 IST
Last Updated 3 ಅಕ್ಟೋಬರ್ 2019, 19:30 IST
   

ಇದು ವೆಬ್ ಸರಣಿಗಳ ಕಾಲ. ಸಿನಿಮಾಗಳನ್ನು ಮೀರಿಸುವ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಇವುಗಳು ಅಂತರ್ಜಾಲ ವೇದಿಕೆಗಳಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿವೆ.ಇಂತಹ ಸರಣಿಗಳಲ್ಲಿ ಈಚೆಗೆ ಪ್ರಸಾರಗೊಂಡಿರುವ ಹಿಂದಿಯ ಸ್ಪೈ ಥ್ರಿಲ್ಲರ್ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್’ ಹೆಚ್ಚು ಗಮನ ಸೆಳೆದಿದೆ.

ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿರುವ ಈ ಸರಣಿ ಹತ್ತು ಕಂತುಗಳಲ್ಲಿ ಮೂಡಿ ಬಂದಿದೆ.ಅಂತರರಾಷ್ಟ್ರೀಯ ಮಟ್ಟದ ಬೇಹುಗಾರನೊಬ್ಬ ಸಂಸಾರ ಹಾಗೂ ವೃತ್ತಿ ಬದುಕನ್ನು ಸರಿದೂಗಿಸಲು ಹೆಣಗಾಡುವುದರ ಜೊತೆಗೆ ದೇಶದ್ರೋಹಿಗಳನ್ನು ಮಟ್ಟಹಾಕುವುದೇ ಈ ಸರಣಿಯ ಕಥಾಹಂದರ.

ರಾಜ್ ನಿಧಿಮೋರ್ ಮತ್ತು ಕೃಷ್ಣ ಡಿ‌.ಕೆ. ನಿರ್ದೇಶನದ ಈ ವೆಬ್ ಸರಣಿಯ ಪ್ರತಿ ಕಂತುಗಳು ಕೂಡ ಉತ್ತಮವಾಗಿ ಮೂಡಿ ಬಂದಿವೆ. ಬೇಹುಗಾರ ‘ಶ್ರೀಕಾಂತ್’ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರು ತಮ್ಮ ನೈಜ ಅಭಿನಯದ ಮೂಲಕ ಮೋಡಿ ಮಾಡಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ಬಹು ಭಾಷಾ ನಟಿ ಪ್ರಿಯಾಮಣಿ ನಟಿಸಿದ್ದಾರೆ.

ADVERTISEMENT

ಕಿಶೋರ್, ಗುಲ್ ಪನಾಗ್, ಶಾರಿಬ್ ಹಾಶ್ಮಿ, ಪವನ್ ಚೋಪ್ರಾ ಮತ್ತಿತರರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಲಯಾಳದ ಯುವ ನಟ ನೀರಜ್ ಮಾಧವ್ ಖಳನ ಪಾತ್ರದಲ್ಲಿ ಮಿಂಚಿದ್ದಾರೆ‌. ಎನ್ಐಎ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿರುವ ಕಿಶೋರ್ ಅಭಿನಯ ಕೂಡ ಗಮನ ಸೆಳೆಯುತ್ತದೆ‌.ಕೇರಳದ ಕೊಚ್ಚಿ ಸಮೀಪ ಬೋಟ್ ಅಪಹರಿಸಿ, ಸಮುದ್ರದಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ಐ.ಎಸ್ ಉಗ್ರರನ್ನು ಕರಾವಳಿ ಕಾವಲು ಪಡೆ ಬಂಧಿಸುವ ರಂಗದಿಂದ ಸರಣಿ ಆರಂಭಗೊಳ್ಳುತ್ತದೆ.

ಕೇರಳದ ಕಾಸರಗೋಡಿನಿಂದ ಸಿರಿಯಾಕ್ಕೆ ತೆರಳಿ ಐ.ಎಸ್ ಉಗ್ರ ಸಂಘಟನೆಗೆ ಸೇರಿದ್ದ ಕೆಲ ಯುವಕರು ಮರಳಿ ಬಂದು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ಹೂಡುತ್ತಾರೆ. ಇವರ ಈ ಪ್ರಯತ್ನಗಳನ್ನು ವಿಫಲಗೊಳಿಸಲು ಯತ್ನಿಸುವ ಶ್ರೀಕಾಂತ್ ಮತ್ತು ತಂಡದ ಸಾಹಸಗಳನ್ನು ಸರಣಿಯ ಹತ್ತು ಕಂತುಗಳಲ್ಲಿ ಕಟ್ಟಿಕೊಡಲಾಗಿದೆ.

ಸರಣಿಯ ಕಥೆಗೆ ಕೇರಳದ ಹಿನ್ನೆಲೆ ಇರುವುದರಿಂದ ಸಾಕಷ್ಟು ಕಡೆ ಮಲಯಾಳ ಸಂಭಾಷಣೆಯನ್ನು ನಿರ್ದೇಶಕರು ಬಳಸಿದ್ದಾರೆ. ಜೊತೆಗೆ ಗುಂಪು ಹಲ್ಲೆಗಳಂತಹ ಸಾಮಾಜಿಕ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಕೇರಳ ಮಾತ್ರವಲ್ಲದೆ ಕಾಶ್ಮೀರ, ಬಲೂಚಿಸ್ತಾನದಲ್ಲೂ ಕಥೆಗೆ ಪೂರಕ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.

ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುವ ಶ್ರೀಕಾಂತ್, ತಾನು ಬೇಹುಗಾರನೆಂಬ ವಿಚಾರವನ್ನು ಕುಟುಂಬದವರಿಂದ ಮರೆಮಾಚಲು ಪಡುವ ಪಡಿಪಾಟಲನ್ನು ನವಿರು ಹಾಸ್ಯದ ಜೊತೆಗೆ ಕಟ್ಟಿ ಕೊಡಲಾಗಿದೆ. ಗಂಭೀರ ಕಥನದ ನಡು ನಡುವೆ ಇಂತಹ ಹಾಸ್ಯ ಸನ್ನಿವೇಶಗಳು ಹಿತವೆನಿಸುತ್ತವೆ.

ಕುಟುಂಬದ ಜೊತೆಗೆ ಇರುವಾಗ ಪುಕ್ಕಲು ವ್ಯಕ್ತಿಯಂತೆ ತೋರುವ ಶ್ರೀಕಾಂತ್, ಕರ್ತವ್ಯಕ್ಕೆ ಕಾಲಿಟ್ಟರೆ ಖಡಕ್ ಬೇಹುಗಾರಿಕಾ ಅಧಿಕಾರಿ. ಹೀಗೆ ಎರಡು ವ್ಯಕ್ತಿತ್ವಗಳ ಪಾತ್ರಕ್ಕೆ ಮನೋಜ್ ಜೀವ ತುಂಬಿದ್ದಾರೆ.ಸದಾ ಕೆಲಸದ ನೆಪದಲ್ಲಿ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಗಂಡನನ್ನು ಸರಿದಾರಿಗೆ ತರಲಾಗದ ಅಸಹಾಯಕ ಪತ್ನಿಯ ಪಾತ್ರದಲ್ಲಿ ಪ್ರಿಯಾಮಣಿ ಮನೋಜ್ಞ ಅಭಿನಯ
ನೀಡಿದ್ದಾರೆ.

ಹಿನ್ನೆಲೆ ಸಂಗೀತ, ಛಾಯಾಗ್ರಣ ಎಲ್ಲವು ಉತ್ತಮವಾಗಿ ಮೂಡಿಬಂದಿವೆ. ಕಥೆಗೆ ನೇರವಾಗಿ ಸಂಬಂಧವಿಲ್ಲದ ಕೆಲವು ಸನ್ನಿವೇಶಗಳು ಸರಣಿಯ ಕೆಲವೆಡೆ ಅನಗತ್ಯವಾಗಿ ನುಸುಳಿದಂತೆ ಭಾಸವಾದರೂ ಎಲ್ಲೂ ನೀರಸವೆನಿಸುವುದಿಲ್ಲ. ಸರಣಿ ಕೊನೆಗೊಂಡರೂ ನಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಬಾಕಿ ಉಳಿಸುವ ಮೂಲಕ ಎರಡನೇ ಸೀಸನ್‌ನ ಸಾಧ್ಯತೆಗಳನ್ನು ತೆರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.