ವದೆಹಲಿ: ಸುಖೇಶ್ ಚಂದ್ರಶೇಖರ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಟಿಯಾಲಾ ಹೌಸ್ ಕೋರ್ಟ್ ಎದುರು ಹಾಜರಾಗಿ ಕಣ್ಣೀರಿಟ್ಟಿದ್ದಾರೆ.
‘ಸುಖೇಶ್ ಚಂದ್ರಶೇಖರ್ ನನ್ನ ಸಂತೋಷವನ್ನು ಕಿತ್ತುಕೊಂಡು ನನ್ನ ವೃತ್ತಿ ಜೀವನವನ್ನು ನರಕ ಮಾಡಿದ. ಅವನೊಬ್ಬ ಮಹಾವಂಚಕ ಎಂಬುದು ನನಗೆ ಗೊತ್ತಿರಲಿಲ್ಲ’ ಎಂದು ಹೇಳಿದ್ದಾರೆ.
‘ಪಿಂಕಿ ಇರಾನಿ ಮೂಲಕ ನನಗೆ ಸುಖೇಶ್ ಪರಿಚಯವಾಗಿತ್ತು. ನನಗೆ ಆತ ದುಬಾರಿ ಕಾಣಿಕೆಗಳನ್ನು ನೀಡುತ್ತಿದ್ದ. ತನ್ನದೆಂದು ಹೇಳಿಕೊಂಡಿದ್ದ ಖಾಸಗಿ ಜೆಟ್‌ನಲ್ಲಿ ತಿರುಗಾಡಿಸಿದ್ದ. ಆತ ತನ್ನನ್ನು ಸನ್ ಟಿವಿ ಮಾಲೀಕರ ಸಂಬಂಧಿ ಎಂದು ಹೇಳಿಕೊಂಡಿದ್ದ. ಆತನ ಹಿನ್ನೆಲೆ ಗೊತ್ತಿದ್ದರೂ ಪಿಂಕಿ ನನ್ನಿಂದ ಮುಚ್ಚಿಟ್ಟಿದ್ದಳು’ ಎಂದು ಜಾಕ್ವೆಲಿನ್ ಅತ್ತಿದ್ದಾರೆ.
ಈ ಕುರಿತು ಹೆಸರು ಬಹಿರಂಗಪಡಿಸಲು ಇಚ್ಚೀಸದ ಇ.ಡಿ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
‘ಸುಖೇಶ್ ನನಗೆ ಪರಿಚಿತವಾದ ಮೇಲೆ ಆಗಾಗ ನಾವು ದಿನಕ್ಕೆ ಎರಡ್ಮೂರು ಬಾರಿ ವಿಡಿಯೊ ಕಾಲ್‌ಗಳಲ್ಲಿ ಮಾತನಾಡುತ್ತಿದ್ದೇವು. ನನ್ನ ಭಾವನೆಗಳೊಂದಿಗೆ ಅವನು ಆಟವಾಡಿದ’ ಎಂದು ಶ್ರೀಲಂಕಾ ಮೂಲದ ಈ ನಟಿ ದುಃಖ ತೋಡಿಕೊಂಡಿದ್ದಾರೆ.
ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಎಂಬಾತ ಉದ್ಯಮಿ ಶಿವಿಂದರ್ ಮೋಹನ್ ಸಿಂಗ್ ಎಂಬುವರ ಪತ್ನಿ ಅದಿತಿ ಸಿಂಗ್‌ಗೆ ಕರೆ ಮಾಡಿ ತಾನು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಪಕ್ಷಕ್ಕೆ ದೇಣಿಗೆ ನೀಡುವಂತೆ ಹೇಳಿ ಅವರಿಂದ ₹200 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ. ಈ ಪೈಕಿ ₹10 ಕೋಟಿ ಮೌಲ್ಯದ ಉಡುಗೊರೆಗಳನ್ನು ಜಾಕ್ವೆಲಿನ್‌ಗೆ ನೀಡಿದ್ದ. ಉಡುಗೊರೆ ಪಡೆದಿರುವುದನ್ನು ಜಾಕ್ವೆಲಿನ್ ಒಪ್ಪಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಇಡಿ ಜಾಕ್ವೆಲಿನ್ ಮೇಲೂ ಪ್ರಕರಣ ದಾಖಲಿಸಿದ್ದು ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಪೊಲೀಸರು ಅವರ ಪಾಸ್‌ಪೋರ್ಟ್ ಕೂಡ ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.