ADVERTISEMENT

ಸಿನಿಮಾ ಜೀವ ಎರಡೇ ವಾರ!

ಕೆ.ಎಚ್.ಓಬಳೇಶ್
Published 14 ಮಾರ್ಚ್ 2019, 19:45 IST
Last Updated 14 ಮಾರ್ಚ್ 2019, 19:45 IST
ಠಾಕೂರ್‌ ಅನೂಪ್‌ ಸಿಂಗ್
ಠಾಕೂರ್‌ ಅನೂಪ್‌ ಸಿಂಗ್   

‘ಥಿಯೇಟರ್‌ನಲ್ಲಿ ಸಿನಿಮಾಕ್ಕೆ ಜೀವ ಇರುವುದು ಎರಡು ವಾರ ಅಷ್ಟೇ’

ಹೀಗೆ ಒಂದೇ ಸಾಲಿನಲ್ಲಿ ಬಣ್ಣದಲೋಕದ ವಾಸ್ತವ ಚಿತ್ರಣ ತೆರೆದಿಟ್ಟರು ನಿರ್ದೇಶಕ ಸುನೀಲ್‌ ಕುಮಾರ್ ದೇಸಾಯಿ. ಅವರ ಮಾತಿನಲ್ಲಿ ಹಳೆಯ ಸೋಲುಗಳಿಂದ ಕಲಿತ ಪಾಠ ಮತ್ತು ಸಸ್ಪೆನ್ಸ್‌, ಥ್ರಿಲ್ಲರ್‌ ಕಥನವನ್ನು ಜನರಿಗೆ ತಲುಪಿಸುವ ಜತೆಗೆ ತಾವು ಬಚಾವಾಗುವ ಜಾಣ್ಮೆಯ ಸುಳಿವೂ ಇತ್ತು. ‘ಟಿ.ವಿ ಸೇರಿದಂತೆ ಸಮೂಹ ಮಾಧ್ಯಮಗಳಲ್ಲಿ ಮುಂದೆಯೂ ಆ ಸಿನಿಮಾ ನೋಡಬಹುದು. ಆದರೆ, ಮಾರುಕಟ್ಟೆಯ ನೆಲೆಗಟ್ಟಿನಲ್ಲಿ ನೋಡಿದಾಗ ಅದಕ್ಕಿರುವ ಜೀವಿತಾವಧಿ ಅತ್ಯಲ್ಪ’ ಎಂದು ಮಾತು ವಿಸ್ತರಿಸಿದರು.

‘ಸಿನಿಮಾದ ಚೌಕಟ್ಟು ಅರಿತವರಿಗೆ ಇದು ಸುವರ್ಣಕಾಲ. ಆದರೆ, ಒಳ್ಳೆಯ ಆಲೋಚನೆಗಳನ್ನು ದೃಶ್ಯರೂಪಕ್ಕಿಳಿಸಬೇಕು’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. ದೇಸಾಯಿ ನಿರ್ದೇಶಿಸಿರುವ ‘ಉದ್ಘರ್ಷ’ ಚಿತ್ರ ನಿರ್ಮಾಣವಾಗಿರುವುದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ. ತಮಿಳು ಮತ್ತು ಮಲಯಾಳ ಭಾಷೆಗೂ ಡಬ್‌ ಆಗಿದೆ. ಮುಂದಿನ ವಾರ(ಮಾರ್ಚ್‌ 22ರಂದು) ನಾಲ್ಕೂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಬಳಿಕ ಹಿಂದಿಯಲ್ಲೂ ಬಿಡುಗಡೆಯಾಗಲಿದೆಯಂತೆ.

ADVERTISEMENT

‘ಉದ್ಘರ್ಷ ಆರಂಭಗೊಂಡಾಗ ಅದಕ್ಕೊಂದು ರೂಪವಿತ್ತು. ಆರು ತಿಂಗಳ ಬಳಿಕ ಮತ್ತೊಂದು ರೂಪತಾಳಿತು. ನಂತರ ಮೂರು ತಿಂಗಳಿಗೆ ಹೊಸ ಪೋಷಾಕು ತೊಟ್ಟಿತು. ಆದರೆ, ಕಥೆಯ ಎಳೆಯಲ್ಲಿ ಕೊಂಚವೂ ಬದಲಾವಣೆಯಾಗಲಿಲ್ಲ. ಮರವೊಂದು ಬೆಳೆಯುವಾಗ ಅನಗತ್ಯವಾಗಿರುವ ರೆಂಬೆ, ಕೊಂಬೆಗಳನ್ನು ಕತ್ತರಿಸಲೇಬೇಕು. ಅದನ್ನು ನಾವು ಅಚ್ಚುಕಟ್ಟಾಗಿಯೇ ಮಾಡಿದೆವು. ಈಗ ಮರ ದೊಡ್ಡದಾಗಿ ಬೆಳೆದಿದೆ’ ಎಂದ ಅವರ ಕಂಗಳಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಮರ ಒಳ್ಳೆಯ ಫಲ ಕೊಡುತ್ತದೆ ಎಂಬ ಹೊಳಪಿತ್ತು.

‘ಉದ್ಘರ್ಷ’ದ್ದು ರೆಗ್ಯುಲರ್‌ ಹೀರೊ– ಹೀರೊಯಿನ್‌ ಸಬ್ಜೆಕ್ಟ್‌ ಅಲ್ಲ. ಸಿನಿಮಾ ಆರಂಭದ ಮೂರು ನಿಮಿಷದ ದೃಶ್ಯವೊಂದರಲ್ಲಿ ಈ ಇಬ್ಬರೂ ಸೇರುತ್ತಾರೆ. ಮತ್ತೆ ಅವರು ಒಟ್ಟಾಗಿ ಸೇರುವುದು ಚಿತ್ರದ ಕೊನೆಯ ಮೂರು ನಿಮಿಷಗಳಲ್ಲಿ. ಇಬ್ಬರದೂ ಒಂದೊಂದು ಪಾತ್ರವಷ್ಟೇ. ಇಲ್ಲಿ ‍ಪ್ರತಿ ಪಾತ್ರಗಳ ಸುತ್ತವೂ ಕಥೆ ಚಲಿಸುತ್ತದೆ ಎಂದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದರು. ‘ಮಾಸ್ಟರ್‌ ಆಫ್‌ ಸಸ್ಪೆನ್ಸ್‌ ಈಸ್‌ ಬ್ಯಾಕ್‌’ ಎಂದು ಹೇಳುತ್ತಾ ಹೊಸ ಆಲಾಪದೊಂದಿಗೆ ಜನರ ಮುಂದೆ ಮತ್ತೊಂದು ಸಸ್ಪೆನ್ಸ್‌ ಹೆಜ್ಜೆ ಇಟ್ಟಿದ್ದಾರೆ.

ಚಿತ್ರಕ್ಕೆ ‘ಉದ್ಘರ್ಷ’ ಎಂದು ಹೆಸರಿಡಲು ಕಾರಣವೇನು?

ಸಿನಿಮಾಕ್ಕೆ ಟೈಟಲ್‌ ಇಡಲು ನನಗೆ ಹೆಸರು ಬೇಕಿರಲಿಲ್ಲ. ಘರ್ಷಣೆ ಇರುವ ಪದ ಬೇಕಿತ್ತು. ನನ್ನ ಚಿತ್ರಕ್ಕೆ ಮಲ್ಲಿಗೆ ಹೂವಿನ ವಾಸನೆ, ಸುಮಧುರ ಎಂದು ಹೆಸರಿಡಲು ಆಗುವುದಿಲ್ಲ.‘ಉತ್ಕರ್ಷ’, ‘ಸಂಘರ್ಷ’, ‘ನಿಷ್ಕರ್ಷ’ದಂತೆ ಚಿತ್ರಕ್ಕೆ ಸೌಂಡಿಂಗ್‌ ಬೇಕಿತ್ತು. ಅಂತಹ ಸೌಂಡಿಂಗ್ ‘ಉದ್ಘರ್ಷ’ದಲ್ಲಿದೆ. ಇದು ನಾವೇ ಹುಟ್ಟುಹಾಕಿದ ಟೈಟಲ್. ಈಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ. ಇದರ ಅರ್ಥ ಏನೆಂದು ನನಗೂ ಗೊತ್ತಿಲ್ಲ. ಆದರೆವಾರ್‌, ಥ್ರಿಲ್ಲರ್‌ ಎಲ್ಲವೂ ಇದರಲ್ಲಿದೆ. ಇದೊಂದು ಸಾಲಿಡ್‌ ಟೈಟಲ್ ಎಂದಷ್ಟೇ ಹೇಳಬಲ್ಲೆ.

ಈ ಸಿನಿಮಾದ ಕಥೆಯ ಎಳೆ ಎಂತಹದ್ದು?

ಸಸ್ಪೆನ್ಸ್‌, ಥ್ರಿಲ್ಲರ್, ಮರ್ಡರ್‌ ಮಿಸ್ಟರಿ, ಆ್ಯಕ್ಷನ್‌ ಸುತ್ತ ಹೊಸೆದಿರುವ ಕಥೆ ಇದು. ರೆಸಾರ್ಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿರುತ್ತದೆ. ನಾಯಕ ಮತ್ತು ನಾಯಕಿ ಪರಸ್ಪರ ಭೇಟಿಯಾಗಲು ಅಲ್ಲಿಗೆ ಬಂದಿರುತ್ತಾರೆ.ಆಗ ಅಲ್ಲೊಂದು ಕೊಲೆಯಾಗುತ್ತದೆ. ಇಬ್ಬರೂ ತಮಗೆ ಅರಿವು ಇಲ್ಲದೆಯೇ ನಿಗೂಢ ಜಾಲದೊಳಗೆ ಸಿಲುಕುತ್ತಾರೆ. ಕೊನೆಗೆ, ಇಬ್ಬರೂ ಬೇರೆ ಬೇರೆಯಾಗುತ್ತಾರೆ. ಚಿತ್ರ ಆರಂಭವಾದ ಎರಡನೇ ನಿಮಿಷಕ್ಕೆ ಕಥೆ ಶುರುವಾಗುತ್ತದೆ. ಕೊಲೆ ಮಾಡಿದ್ದು ಯಾರು ಎನ್ನುವುದೇ ಸಸ್ಪೆನ್ಸ್‌.

ನಿಮ್ಮ ಉಳಿದ ಚಿತ್ರಗಳಿಗಿಂತ ಇದು ಹೇಗೆ ಭಿನ್ನ?

‘ತರ್ಕ’, ‘ಉತ್ಕರ್ಷ’ ಚಿತ್ರದ ರೂಪವೇ ಭಿನ್ನ. ಆಗಿನ ಕಾಲಕ್ಕೆ ಅವುಗಳ ಕಥೆ ಸರಿ ಹೊಂದುತ್ತಿತ್ತು.‘ಬೆಳದಿಂಗಳ ಬಾಲೆ’ ಚಿತ್ರ ತೆರೆಕಂಡಿದ್ದು ಎರಡೂವರೆ ದಶಕದ ಹಿಂದೆ. ಆಕೆ ಒಬ್ಬೊಬ್ಬರ ಮನದಲ್ಲಿ ಒಂದೊಂದು ರೂಪದಲ್ಲಿ ಅಚ್ಚೊತ್ತಿ ಕುಳಿತಿದ್ದಳು. ಆಕೆಯನ್ನು ಯಾವ ರೂಪದಲ್ಲಿ ಬೇಕಾದರೂ ಕಲ್ಪಿಸಿಕೊಳ್ಳುವುದು ಪ್ರೇಕ್ಷಕನ ಹಕ್ಕು. ‘ಉದ್ಘರ್ಷ’ ಈಗಿನ ಜಮಾನಕ್ಕೆ ಅಪ್‌ಡೇಟೆಡ್ ಆಗಿರುವ ಚಿತ್ರ. ಜನರ ಮನದಲ್ಲಿ ಘರ್ಷಣೆ ಇದೆ. ಆ ಘರ್ಷಣೆ ಚಿತ್ರದಲ್ಲಿಯೂ ಇದೆ. ತಂತ್ರಜ್ಞಾನ ಬಳಕೆ, ಚಿತ್ರ ನೋಡುವ ರೀತಿ, ಟೈಮಿಂಗ್‌ನಲ್ಲಿ ಭಿನ್ನವಾದಸಿನಿಮಾ. ಈಗ ತೆರೆಕಾಣುತ್ತಿರುವ ಸಿನಿಮಾಗಳಿಗೆ ಹೋಲಿಸಿದರೆ ಹೊಸ ಆಯಾಮ ಇರುವ ಚಿತ್ರ.

ಚಿತ್ರದ ಬಗ್ಗೆ ನಿಮ್ಮ ನಿರೀಕ್ಷೆಗಳೇನು?

ನನಗೆ ಒಳ್ಳೆಯ ಕಥಾವಸ್ತು ಸಿಕ್ಕಿದೆ. ಅದನ್ನು ಮನರಂಜನಾತ್ಮಕವಾಗಿ ಹೇಳಿದ್ದೇನೆ. ಕುತೂಹಲಭರಿತಸಿನಿಮಾಇದು. ಪ್ರೇಕ್ಷಕರಿಗೆ ಒಳ್ಳೆಯ ಥ್ರಿಲ್‌ ನೀಡುವುದರಲ್ಲಿ ಅನುಮಾನವಿಲ್ಲ.

ಠಾಕೂರ್‌ ಅನೂಪ್‌ ಸಿಂಗ್‌ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಲು ನಿರ್ದಿಷ್ಟ ಕಾರಣ ಇದೆಯೇ?

ಈ ಸಿನಿಮಾದ ಚಿತ್ರಕಥೆಗೆ ಇಮೇಜ್‌ ಇರುವ ನಟನ ಅಗತ್ಯವಿರಲಿಲ್ಲ. ಅಂತಹ ನಟ ಈ ಪಾತ್ರ ನಿರ್ವಹಿಸಿದ್ದರೆ ನ್ಯಾಯ ದೊರಕುತ್ತಿರಲಿಲ್ಲ. ಪರಿಚಿತವಲ್ಲದ ಮುಖವೊಂದು ಬೇಕಿತ್ತು. ಅದಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದೆ. ಆಗ ಸಿಕ್ಕಿದ್ದೇ ಠಾಕೂರ್‌ ಅನೂಪ್‌ ಸಿಂಗ್. ಅವರು ಇಲ್ಲಿಯವರೆಗೆ ನಟಿಸಿರುವ ಚಿತ್ರಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಅವರು ಮಿಸ್ಟರ್‌ ವರ್ಲ್ಡ್‌ ಆಗಿದ್ದವರು. ನನ್ನ ಚಿತ್ರಕ್ಕೆ ಬೇಕಾದ ನಾಯಕನ ಗುಣ ಅವರಲ್ಲಿತ್ತು. ಹಾಗಾಗಿ, ಅವರನ್ನು ಆಯ್ಕೆ ಮಾಡಿಕೊಂಡೆವು. ನೀವೇ ನನ್ನ ಚಿತ್ರಕ್ಕೆ ಹೀರೊ ಎಂದಾಗ ಅವರು ಶಾಕ್‌ ಆಗಿದ್ದೂ ಉಂಟು. ಮುಂಬೈ, ತಮಿಳುನಾಡು, ಕೇರಳ, ಆಂಧ್ರದ ಕಲಾವಿದರೂ ಚಿತ್ರದಲ್ಲಿದ್ದಾರೆ. ಮಾರುಕಟ್ಟೆಯ ದೃಷ್ಟಿಯಿಂದ ಬಹುಭಾಷಾ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಬೀರ್‌ ದುಹಾನ್‌ ಸಿಂಗ್‌, ಸಾಯಿ ಧನ್ಸಿಕಾ, ಕಿಶೋರ್, ತಾನ್ಯಾ ಹೋಪ್, ಶ್ರದ್ಧಾ ದಾಸ್‌ ಪಾತ್ರಗಳೂ ಚೆನ್ನಾಗಿ ಮೂಡಿಬಂದಿವೆ.

ಸಿನಿಮಾಮಾರುಕಟ್ಟೆ ನಿಮಗೆ ಕಲಿಸಿರುವ ಪಾಠಗಳೇನು?

ಪ್ರಸ್ತುತ ಚಿತ್ರರಂಗದ ಮಾರುಕಟ್ಟೆ ವಿಸ್ತಾರವಾಗಿ ಬೆಳೆದಿದೆ. ಹಿಂದೆ ಒಂದು ಲಕ್ಷ ಜನರಿಗೆಸಿನಿಮಾತೋರಿಸಲು ಕನಿಷ್ಠ ಆರು ತಿಂಗಳು ಬೇಕಿತ್ತು. ಡಬ್ಬಿಂಗ್‌, ಪ್ರಿಂಟ್‌ ಹಾಕಲು ತಿಂಗಳುಗಟ್ಟಲೇ ಹಿಡಿಯುತ್ತಿತ್ತು. ಈಗ ಒಂದೇ ಗಂಟೆಯಲ್ಲಿ ಜಗತ್ತಿನ ಮುಂದೆಸಿನಿಮಾಬಿತ್ತರಿಸಬಹುದು. ನೂರಾರು ಭಾಷೆಗಳಲ್ಲಿ, ಲಕ್ಷಾಂತರ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ತೋರಿಸಬಹುದು. ಇದು ತಂತ್ರಜ್ಞಾನದ ಮಹಿಮೆ. ಸಿನಿಮಾದ ಕೆಲಸ ಗೊತ್ತಿದ್ದವನಿಗೆ ತನ್ನ ಸರಕನ್ನು ಜನರಿಗೆ ತಲುಪಿಸುವುದು ಸುಲಭ. ಆದರೆ, ಗುಣಮಟ್ಟ ಕಾಯ್ದುಕೊಳ್ಳಬೇಕು. ಜೊತೆಗೆ, ಆತ ಜಾಣನೂ ಆಗಿರಬೇಕು.

ಸಿನಿಮಾವೊಂದರ ಕಥೆ ಬರೆಯುವಾಗ ಯಾವ ಅಂಶಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತೀರಿ?

ನಿರ್ದೇಶಕನಾದವನಿಗೆ ಜನರ ಅಭಿರುಚಿ ಬಗ್ಗೆ ಗೊತ್ತಿರಬೇಕು. ಆಗಮಾತ್ರ ಅವರಿಗೆ ಇಷ್ಟವಾಗುವ ಅಂಶಗಳತ್ತ ಕಥೆ ಹೊಸೆಯಲು ಸಾಧ್ಯ. ನಾನು ಹಿಂದೆ ಸಸ್ಪೆನ್ಸ್, ಥ್ರಿಲ್ಲರ್‌ ಕಥೆ ಹೆಣೆದಿದ್ದೆ. ಈ ಸಿನಿಮಾದಲ್ಲಿ ಆ್ಯಕ್ಷನ್‌ ಜೊತೆಗೆ ಮರ್ಡರ್‌ ಮಿಸ್ಟರಿಯನ್ನು ಬೆಸೆದಿದ್ದೇನೆ. ಪ್ರೇಕ್ಷಕನಿಗೆ ಇಷ್ಟವಾಗುವಂತಹ ಅಂಶಗಳಿದ್ದರೆ ಮಾತ್ರ ಗೆಲುವು ಸುಲಭ.

ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ.

ಕಥೆಯ ಎಳೆಯೊಂದು ಇದೆ. ಆದರೆ, ಅದರ ರೂಪವೇ ಭಿನ್ನವಾದುದು. ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ ನಿರ್ದೇಶಿಸುವ ಸಿದ್ಧತೆಯಲ್ಲಿದ್ದೇನೆ. ಸ್ಕ್ರಿಪ್ಟ್‌ ಪೂರ್ಣಗೊಂಡ ಬಳಿಕ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.