ADVERTISEMENT

ಮಾಸ್ಟರ್‌ ಆಫ್‌ ಸಸ್ಪೆನ್ಸ್‌ ಈಸ್‌ ಬ್ಯಾಕ್‌!

ಪದ್ಮನಾಭ ಭಟ್ಟ‌
Published 15 ಮಾರ್ಚ್ 2019, 4:50 IST
Last Updated 15 ಮಾರ್ಚ್ 2019, 4:50 IST
ಸುನಿಲ್ ಕುಮಾರ್ ದೇಸಾಯಿ
ಸುನಿಲ್ ಕುಮಾರ್ ದೇಸಾಯಿ   

‘ಉದ್ಘರ್ಷ’ ಸಿನಿಮಾದ ವಿಶೇಷಗಳೇನು?

ಇಪ್ಪತ್ತೈದು ವರ್ಷಗಳ ಹಿಂದೆ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಈಗ ಆ ಜನಪ್ರಿಯತೆಯನ್ನು ಮರಳಿಸಬೇಕು ಎಂದುಕೊಂಡು ಕಳೆದ ಒಂದೂವರೆ ವರ್ಷದ ಹಿಂದೆಯೇ ‘ಉದ್ಘರ್ಷ’ ಸ್ಕ್ರಿಪ್ಟ್‌ ಮಾಡಿದ್ದೆ. ತುಂಬ ಪರಿಚಿತ ಮುಖಗಳು ಯಾವುವೂ ಸಿನಿಮಾದಲ್ಲಿ ಇರಬಾರದು ಮತ್ತು ಬಹುಭಾಷೆಯಲ್ಲಿ ಈ ಸಿನಿಮಾ ಮಾಡಬೇಕು ಎಂಬ ಎರಡು ಅಂಶಗಳು ನನ್ನ ಮನಸಲ್ಲಿದ್ದವು. ಅದಕ್ಕೆ ಅನುಗುಣವಾಗಿ ಕರ್ನಾಟಕ, ಮುಂಬೈ, ಹೈದರಾಬಾದ್, ತಮಿಳುನಾಡು, ಕೇರಳ ಹೀಗೆ ಬೇರೆ ಬೇರೆ ಕಡೆಗಳಿಂದ ಕಲಾವಿದರನ್ನು ಆಯ್ಕೆ ಮಾಡಿದೆವು. ಯಾವ ಪಾತ್ರ ಹೇಗಿರುತ್ತದೆ ಎಂದು ಯಾರೂ ನಿರೀಕ್ಷಿಸಬಾರದು ಎಂಬುದು ನನ್ನ ಉದ್ದೇಶವಾಗಿತ್ತು.

ವಿಜಯ್‌ ಚೌಧರಿ ಸಿನಿಮಾಗೆ ತುಂಬ ಚೆನ್ನಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ಸ್ಕ್ರೀನ್‌ಪ್ಲೇ ಅನ್ನೇ ಆಧರಿಸಿದ ಸಿನಿಮಾ. ಸಸ್ಪೆನ್ಸ್‌ ಥ್ರಿಲ್ಲರ್ ಜಾನರ್‌ನ ಸಿನಿಮಾ. ಆ್ಯಕ್ಷನ್‌ ಕೂಡ ಇದೆ. ಈಗ ಬರುತ್ತಿರುವ ಕನ್ನಡ ಸಿನಿಮಾಗಳ ನಡುವೆ ಇದು ಬೇರೆಯದೇ ರೀತಿಯ ಸಿನಿಮಾ ಆಗಿ ನಿಲ್ಲುತ್ತದೆ.

ADVERTISEMENT

ದಶಕದ ನಂತರ ಮತ್ತೆ ಸಸ್ಪೆನ್ಸ್‌ ಥ್ರಿಲ್ಲರ್ ಸಿನಿಮಾ ನಿರ್ದೇಶಿಸುತ್ತಿದ್ದೀರಿ. ಜನರ ಅಭಿರುಚಿ ಬದಲಾಗಿರುತ್ತದಲ್ಲವೇ?

ಇದು ಅಪ್‌ಡೇಟೆಡ್‌ ಸಿನಿಮಾವೇ. ನೂರು ವರ್ಷ ಹಿಂದೆ ಮಾಡಿದರೂ ಮುಂದೆ ಮಾಡಿದರೂ ಸಸ್ಪೆನ್ಸ್‌ ಸಿನಿಮಾ ಸಸ್ಪೆನ್ಸ್‌ ಸಿನಿಮಾ ಆಗಿಯೇ ಉಳಿದಿರುತ್ತದೆ. ನಿರೂಪಣೆಯ ಶೈಲಿ, ಪ್ರಸ್ತುತಪಡಿಸುವ ರೀತಿ ಬದಲಾಗುತ್ತದೆ ಅಷ್ಟೆ. ಆ ದೃಷ್ಟಿಕೋನದಿಂದ ಈ ಸಿನಿಮಾದಲ್ಲಿ ನಾನು ಸಾಕಷ್ಟು ಅಪ್‌ಡೇಟ್‌ ಆಗಿದ್ದೇನೆ.

ಎಷ್ಟು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ?

ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈಗ ಬಿಡುಗಡೆ ಮಾಡುತ್ತಿದ್ದೇವೆ. ಇನ್ನು ಎರಡು ತಿಂಗಳು ಬಿಟ್ಟು ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್‌ ಮಾಡಿದ್ದೇವೆ.

ಬೇರೆ ಬೇರೆ ಭಾಷೆಯ ಪ್ರೇಕ್ಷಕರ ಅಭಿರುಚಿಗಳು ಭಿನ್ನವಾಗಿರುತ್ತವೆ. ಬಹುಭಾಷೆಯಲ್ಲಿ ಸಿನಿಮಾ ಮಾಡುವುದು ರಿಸ್ಕ್‌ ಅನಿಸಿಲ್ಲವೇ?

ನೇಟಿವಿಟಿಯ ಕಥೆ ಹೇಳುವಾಗ ಆಯಾ ಭಾಷೆಯ ಅಭಿರುಚಿ ಗಣನೆಗೆ ಬರುತ್ತದೆ. ಆಂಧ್ರಪ್ರದೇಶದ ಪ್ರಾದೇಶಿಕ ಕುಟುಂಬವೊಂದರ ಕಥೆ ಹೇಳುವಾಗ ಅದು ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲ. ನಮ್ಮ ಮಂಡ್ಯದಲ್ಲಿ ನಡೆಯುವ ಕಥೆಯಾದರೆ ತಮಿಳುನಾಡಿನಲ್ಲಿ, ಕೇರಳದ ಜನರಿಗೆ ಇಷ್ಟವಾಗಲಿಕ್ಕಿಲ್ಲ. ಆದರೆ ಸಸ್ಪೆನ್ಸ್‌ ಥ್ರಿಲ್ಲರ್ ಸಿನಿಮಾಗಳು ಯೂನಿವರ್ಸಲ್‌. ನಾವು ಇಂಗ್ಲಿಷ್‌ ಭಾಷೆಯ ಸಸ್ಪೆನ್ಸ್‌ ಥ್ರಿಲ್ಲರ್ ನೋಡ್ತೀವಲ್ಲ. ನಮಗೆ ನೇಟಿವಿಟಿ ಒಂದು ತೊಂದರೆ ಎಂದು ಅನಿಸುವುದಿಲ್ಲ ಅಲ್ಲವೇ? ನನ್ನ ಸಸ್ಪೆನ್ಸ್‌ ಸಿನಿಮಾಗಳು ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ಡಬ್‌ ಆಗಿದ್ದಾವೆ. ಅಂದರೆ ಸಸ್ಪೆನ್ಸ್‌ ಕಥೆಗಳು ಎಲ್ಲ ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತವೆ. ಜನರ ನಿರೀಕ್ಷೆಗೆ ಮೀರಿದ ಹಲವು ಸಂಗತಿಗಳು ಈ ಸಿನಿಮಾದಲ್ಲಿ ಇರುತ್ತವೆ.

ಬೇರೆ ಬೇರೆ ಭಾಷೆಗಳ ಕಲಾವಿದರನ್ನು ಕಲೆಹಾಕಿದ್ದೀರಿ. ನಿಭಾಯಿಸುವುದು ಕಷ್ಟ ಅನಿಸಲಿಲ್ಲವೇ?

ಈ ಕಥೆಗೇ ಹಾಗೊಂದು ವಿಸ್ತಾರವಿದೆ. ಹಾಗಾಗಿ ಎಲ್ಲ ಭಾಷೆಗಳ ಕಲಾವಿದರನ್ನು ಹಾಕಿಕೊಂಡಿದ್ದೇನೆ. ಇಂಗ್ಲಿಷ್ ನಟರು ಸಿಕ್ಕರೆ ಅವರನ್ನೂ ಹಾಕಿಕೊಳ್ಳುತ್ತಿದ್ದೆ. ಅವರ ಜೊತೆ ಕೆಲಸ ಮಾಡುವುದು ನನಗೆ ಕಷ್ಟ ಅನಿಸಿಯೇ ಇಲ್ಲ. ನಟನೆಗೆ ಭಾಷೆ ಒಂದು ತಡೆಯಾಗುವುದಿಲ್ಲ. ಡಬ್ಬಿಂಗ್ ಅನ್ನು ಡಬ್ಬಿಂಗ್ ಕಲಾವಿದರು ಮಾಡುತ್ತಾರೆ. ಕಷ್ಟದ ಮಾತೇ ಬರುವುದಿಲ್ಲ. ಇದರಿಂದ ನಮ್ಮ ಮಾರುಕಟ್ಟೆಯೂ ವಿಸ್ತಾರ ಆಗುತ್ತದೆ.

ಮುಂದಿನ ಸಿನಿಮಾ ಕುರಿತು ಯೋಚಿಸಿದ್ದೀರಾ?

ಇನ್ನೊಂದು ಐದು ಭಾಷೆಗಳಲ್ಲಿ ಸಿನಿಮಾ ಮಾಡಬೇಕು ಎಂದು ಸ್ಕ್ರಿಪ್ಟ್‌ ಮಾಡಿಟ್ಟುಕೊಂಡಿದ್ದೇನೆ. ಉದ್ಘರ್ಷ ಬಿಡುಗಡೆಯಾಗಿ ಎರಡು ವಾರದ ನಂತರ ಅದರ ವಿವರ ತಿಳಿಸುತ್ತೇನೆ. ಅದು ಈ ಸಿನಿಮಾಗಿಂತ ತುಂಬ ಬೇರೆ ರೀತಿಯದ್ದು. ಒಂದು ವಿಭಿನ್ನ ಬಗೆಯ ಥ್ರಿಲ್ಲರ್ ಸಿನಿಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.